
ತನ್ನ ಆದಾಯದಲ್ಲಿ ತನ್ನವರನ್ನು ಪೋಷಿಸುವ ಕೆಲಸವನ್ನು ಪಶು ಪಕ್ಷಿಗಳು ಕೂಡ ಮಾಡುತ್ತವೆ. ಆದರೆ, ತಾನು ಗಳಿಸಿದ ಆದಾಯದ ಒಂದು ಪಾಲನ್ನು ಸಮಾಜಮುಖಿ ಕೆಲಸಕ್ಕೆ ವಿನಿಯೋಗಿಸಿಕೊಳ್ಳಲು ಬಲು ದೊಡ್ಡ ಮನಸ್ಸು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಯಾನಂದ ಹೆಗ್ಡೆ ಮತ್ತು ಸುಗಂಧಿ ಹೆಗ್ಡೆ ದಂಪತಿಗಳ ಸಮಾಜ ಸೇವೆ ಶ್ಲಾಘನೀಯ ಎಂದು ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ಎಳತ್ತೂರುಗುತ್ತು ದಯಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ) ಹೆರ್ಮುಂಡೆ ಇದರ ಮುಂಬೈ ಶಾಖೆಯ ಪ್ರಥಮ ವಾರ್ಷಿಕೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾಜದ ಒಳಿತಿಗಾಗಿ ತನ್ನಿಂದ ಏನಾದರೂ ಆಗಬೇಕೆಂದು ದೃಢ ಸಂಕಲ್ಪ ಹೊಂದಿರುವ ದಯಾನಂದ ಹೆಗ್ಡೆಯವರ ಆಶಯಕ್ಕೆ ಭಗವಂತನ ಸಂಪೂರ್ಣ ಅನುಗ್ರಹವಿರಲಿ. ಮುಂಬರುವ ದಿನಗಳಲ್ಲಿ ಇನ್ನೂ ಸುಸಜ್ಜಿತ ಕಚೇರಿಯಲ್ಲಿ ತಮ್ಮ ಈ ನಿಸ್ವಾರ್ಥ ಸೇವೆ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಅವರು ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನೋರ್ವ ಅತಿಥಿ ಬಿಲ್ಲವರ ಅಸೋಸಿಯೇಶನ್ ಥಾಣೆ ಇದರ ಮಾಜಿ ಕಾರ್ಯಾಧ್ಯಕ್ಷರಾದ ಸಂಜೀವ ಎಸ್ ಪೂಜಾರಿಯವರು, ನೈತಿಕ ಮೌಲ್ಯವರ್ಧನೆ, ವ್ಯಕ್ತಿತ್ವ ವಿಕಸನ, ಸ್ವಚ್ಛತಾ ಕಾರ್ಯಕ್ರಮ, ಶೈಕ್ಷಣಿಕ ಪ್ರೋತ್ಸಾಹ ಧನ ಮತ್ತು ಪರಿಸರ ಸಂರಕ್ಷಣೆ ಮುಂತಾದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿರುವ ತರುಣ ಭಾರತ ಚಾರಿಟೇಬಲ್ ಟ್ರಸ್ಟ್ನ ನಿಸ್ವಾರ್ಥ ಸೇವೆಯನ್ನು ಕೊಂಡಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಮುಂಬೈ ಟ್ರಸ್ಟ್ನ ಸಂಚಾಲಕರಾದ ದಯಾನಂದ ಹೆಗ್ಡೆಯವರು, ಮೊದಲಿನಿಂದಲೂ ಸಮಾಜಕ್ಕೆ ಏನಾದರೂ ಮಾಡುವ ಹಂಬಲವಿತ್ತು. ತಾಯಿ ಕಟಿಲೇಶ್ವರಿಯ ಹೆಸರಿನಲ್ಲಿ ಒಂದಷ್ಟು ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದೆ. ಕಳೆದ ಒಂದು ವರ್ಷದಿಂದ ಈ ಟ್ರಸ್ಟ್ ಮೂಲಕ ಮುಂಬೈ ಶಾಖೆಯನ್ನು ಆರಂಭಿಸಿ, ಸೇವಾ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಮತ್ತು ಇದಕ್ಕೆ ಸಮಾಜದ ಗಣ್ಯರು ಕೈಜೋಡಿಸಿರುವುದು ಮನಸ್ಸಿಗೆ ಆನಂದ ತಂದಿದೆ ಎಂದು ನುಡಿದರು.
ಈ ಸಂದರ್ಭದಲ್ಲಿ ಶ್ರೀಮತಿ ಸುಗಂಧಿ ಹೆಗ್ಡೆ, ನವೋದಯ ಕನ್ನಡ ಸೇವಾ ಸಂಘದ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ನಯನ ಶೆಟ್ಟಿ, ಕೋಶಾಧಿಕಾರಿ ಶ್ರೀಮತಿ ರೇಣುಕಾ ದೇವಾಡಿಗ, ಕಾರ್ಯಕಾರಿ ಸಮಿತಿಯ ಸದಸ್ಯ ಜಯಾನಂದ ದೇವಾಡಿಗ, ತುಳು ಲಿಪಿ ಶಿಕ್ಷಕಿಯರಾದ ಶ್ರೀಮತಿ ಪುಷ್ಪ ದೇವಾಡಿಗ ಹಾಗೂ ಶ್ರೀಮತಿ ಪ್ರತಿಭಾ ಶೆಟ್ಟಿಯವರು ಉಪಸ್ಥಿತರಿದ್ದರು. ನೆರೆದಿದ್ದ ಸರ್ವರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಚಿತ್ರ, ವರದಿ : ಮನೋಜ್ ಶೆಟ್ಟಿ ನಕ್ರೆ





















































































































