ನವಿ ಮುಂಬಯಿ ಜೂಯಿ ನಗರದಲ್ಲಿರುವ ಬಂಟ್ಸ್ ಸೆಂಟರಿನಲ್ಲಿ ಸುಮಾರು 12 ವರ್ಷಗಳಿಂದ ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ಆಡಳಿತದಿಂದ ನಡೆಸಿಕೊಂಡು ಬರುತ್ತಿರುವ ‘ಬಂಟ್ಸ್ ಉನ್ನತ ಶಿಕ್ಷಣ’ ರಾತ್ರಿ ಕಾಲೇಜಿನ ವಾರ್ಷಿಕೋತ್ಸವ ‘ಬಂಟ್ಸ್ ಪರಿಷ್ಕರ್’ ಮತ್ತು ಕಲಿಕೆ, ಆಟೋಟ ಸ್ಪರ್ಧೆಯಲ್ಲಿ ಸಾಧನೆಗೈದ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವು ಡಿಸೆಂಬರ್ 21 ರಂದು ಕಾಲೇಜು ಕಟ್ಟಡದ ಬಂಟ್ಸ್ ಸೆಂಟರ್ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದೀಪಕ್ ಆಳ್ವ (CAO. SP. Jain Institute of Management and Research (JIMR) ವಿದ್ಯಾ ಸಂಸ್ಥೆ ಮತ್ತು ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಉಪಾದ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌ. ಕಾರ್ಯದರ್ಶಿ ಅಡ್ವೋಕೇಟ್ ಶೇಖರ ರಾಜು ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಡ್ವೋಕೇಟ್ ರತ್ನಾಕರ ವಿ.ಶೆಟ್ಟಿ, ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿ ಶ್ರೀಧರ ಕೆ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರತೀಕ್ ಶೆಟ್ಟಿಯವರೆಲ್ಲರೂ ವೇದಿಕೆ ಮೇಲೆ ಉಪಸ್ಥಿತರಿದ್ದರು.


ಅತಿಥಿ ಅಭ್ಯಾಗತರಿಂದ ದೀಪ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ವಿಘ್ನ ನಿವಾರಕ ಗಣೇಶನ ಸ್ತುತಿ ಹಾಡಿನೊಂದಿಗೆ ವಿದ್ಯಾರ್ಥಿನಿಯರು ಸ್ವಾಗತ ನೃತ್ಯ ಮಾಡಿದರೆ, ಸಾಂಪ್ರದಾಯ ಸ್ವಾಗತ ಭಾಷಣದ ನಂತರ ಕಾಲೇಜು ಪ್ರಾಂಶುಪಾಲರು ಕಾಲೇಜಿನ ವಾರ್ಷಿಕ ವರದಿಯನ್ನು ಸಭಿಕರ ಮುಂದೆ ಪ್ರಸ್ತುತ ಪಡಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿ ದೀಪಕ್ ಆಳ್ವ ತನ್ನ ಅನುಭವದ ಮಾತುಗಳೊಂದಿಗೆ ಸಮಯ ನಿರ್ವಹಣೆ (Time Management), ವಿದ್ಯಾಭ್ಯಾಸದ ಮಹತ್ವ, ಭವಿಷ್ಯದ ಜೀವಮಾನಕ್ಕೆ ವಿದ್ಯೆ ಹೇಗೆ ಮತ್ತು ಯಾಕೆ ಉಪಯುಕ್ತ ಎಂದು ಸವಿಸ್ತಾರವಾಗಿ ವಿವರಿಸಿದರು. ಅಲ್ಲದೇ ಇಲ್ಲಿ ರಾತ್ರಿ ಕಾಲೇಜು ಇದ್ದುದರಿಂದ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯ ಜತೆ ಜತೆ ಅದಾಯ ಗಳಿಸಲು ಅವಕಾಶ ಇದೆ. ಭಾರತದ ಈಗಿನ ಆರ್ಥಿಕ ಅಭಿವೃದ್ದಿ ಸ್ಥಿತಿಯಿಂದಾಗಿ ಎಲ್ಲರಿಗೂ ವಿಶಾಲವಾದ ಅವಕಾಶಗಳಿವೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ತೀವ್ರ ಆಸಕ್ತಿ, ಪರಿಶ್ರಮದಿಂದ ವಿದ್ಯಭ್ಯಾಸಗೈಯಬೇಕು. ಅದಲ್ಲದೇ ಹೆತ್ತವರ, ಗುರುವೃಂದದವರ, ಹಿರಿಯರ ಜತೆ ಗೌರವದಿಂದ ನಡೆದುಕೊಂಡಲ್ಲಿ ನಿಮ್ಮ ಬಾಳು ಬಂಗಾರವಾಗುತ್ತದೆ ಎಂಬ ಕಿವಿ ಮಾತನ್ನಾಡಿದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಅಸೋಸಿಯೇಷನ್ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು, ವೈಪಲ್ಯವೇ ಯಶಸ್ಸಿನ ಮೆಟ್ಟಲು ಎಂದು ಹೇಳುತ್ತಾ ಕ್ರಿಕಟ್ ರಂಗದ ದಿಗ್ಗಜರಾದ ಜಿ.ಆರ್ ವಿಶ್ವನಾಥ್, ಸಚಿನ್ ತೆಂಡುಲ್ಕರ್, ಸುರೇಶ್ ರೈನಾ, ಆರ್ ಆಶ್ವಿನ್ ಮತ್ತು ಇನ್ನಿತರ ಆಟಗಾರರು ಪ್ರಥಮ ಪಂದ್ಯಗಳಲ್ಲಿ ಶೂನ್ಯದಲ್ಲಿ ಮರಳಿದರೂ ನಂತರದಲ್ಲಿ ಅತ್ಯುತ್ತಮ ಆಟವನ್ನಾಡಿ ನಾಮಾಂಕಿತ ಆಟಗಾರರಾಗಿದ್ದಾರೆ. ಹಾಗಾಗಿ ಎಲ್ಲಾ ವಿದ್ಯಾಥಿಗಳು ಯಾವ ಸಂದರ್ಭದಲ್ಲಿಯೂ ನಿರಾಶರಾಗದೆ ಮುಂದೆ ಸಾಗಿದಲ್ಲಿ ಗೆಲುವು ಖಂಡಿತ ಎಂದು ನುಡಿ ಮಾತುಗಳನ್ನಾಡಿದರು. ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಅಡ್ವೋಕೇಟ್ ರತ್ನಾಕರ ವಿ ಶೆಟ್ಟಿ ಕಾಲೇಜು ನಡೆದು ಬಂದ ದಾರಿಯನ್ನು ಮತ್ತು ಕಾಲೇಜು ಬೆಳವಣಿಗೆ, ವಿಶ್ವವಿದ್ಯಾಲಯದ ಮಾನ್ಯತೆಗಳ ಬಗ್ಗೆ ವಿವರಿಸಿದರು.
ಸಮಾರಂಭದಲ್ಲಿ ಶೈಕ್ಷಣಿಕ ಬಹುಮಾನ ವಿಜೇತರ, ಸಾಂಸ್ಕ್ರತಿಕ ಚಟುವಟಿಕೆಗಳ ವಿಜೇತರ ಹಾಗೂ ಆಟೋಟ ಸ್ಪರ್ಧೆಗಳ ವಿಜೇತರ ಹೆಸರುಗಳನ್ನು ಸಂಬಧಪಟ್ಟ ಶಿಕ್ಷಕರು ಓದಿ ಬಹುಮಾನಗಳನ್ನು ವಿತರಿಸಿದರು. ಆನಂತರದಲ್ಲಿ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರು ವಿವಿಧ ಸಾಂಸ್ಕೃತಿಕ, ವೈವಿದ್ಯಮಯ ನೃತ್ಯ, ಕುಣಿತಗಳನ್ನು ಮಾಡಿ ತಮ್ಮ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ಕೊನೆಯಲ್ಲಿ ಧನ್ಯವಾದ ಸಮರ್ಪನೆಯ ಬಳಿಕ ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ಧೆಯನ್ನು ಮಾಡಲಾಗಿತ್ತು.

















































































































