ಶಿಬರೂರು ಕ್ಷೇತ್ರದ ತೀರ್ಥ ಬಹಳ ಪ್ರಸಿದ್ಧಿ ಪಡೆದಿದೆ. ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ತನ್ನ ಗಿಣಿಚಿರಾವಿಯಲ್ಲಿದ್ದ ವಿಷ ಹೀರುವ ಕಲ್ಲನ್ನು ದೈವಗಳನ್ನು ನೆನೆಸಿ ’ಇನ್ನು ಮುಂದೆ ಈ ಬಾವಿಯ ನೀರು ಮತ್ತು ದೈವ ಗಂಧವೇ ವಿಷಕ್ಕೆ ಮದ್ದಾಗಲಿ’ ಎಂದು ಹೇಳಿ ತಿಬಾರಗುತ್ತಿನ ಬಾವಿಗೆ ಹಾಕುತ್ತಾರೆ. ಇದರಿಂದ ಕೊಡಮಣಿತ್ತಾಯ ದೈವಕ್ಕೆ ‘ವೈದ್ಯನಾಥ’ ನೆಂಬ ಅಭಿದಾನ ಪ್ರಾಪ್ತವಾಯಿತು. ಕಾರಣಿಕ ಸ್ಥಳ ಶಿಬರೂರಿನ ತೀರ್ಥದ ಬಾವಿಯಲ್ಲಿ ಸಿಗುವ ತೀರ್ಥವನ್ನು, ದೈವದ ಗಂಧ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ ವಿಷನಾಶವಾಗುತ್ತದೆ ಎಂಬ ನಂಬಿಕೆ.


ಅಷ್ಟು ಮಾತ್ರವಲ್ಲದೇ ಬಾವಿಯ ತೀರ್ಥ ಮತ್ತು ದೈವದ ಗಂಧ ಪ್ರಸಾದ ಸ್ವೀಕರಿಸುವವರಿಗೆ ನಾಗದೋಷ ನಿವಾರಕ, ಚರ್ಮವ್ಯಾನಾಶಕ, ಉಬ್ಬಸ ರೋಗ ದೂರಿಕರಿಸುವ ಶಕ್ತಿಯಲ್ಲದೇ, ಸಂತಾನ ಪ್ರತಿಬಂಧಕ ದೋಷವೂ ಪರಿಹಾರವಾಗುವುದು. ವಿಷಜಂತು ಕಚ್ಚಿದ ಅನೇಕ ಜನರನ್ನು ರಕ್ಷಿಸಿದ ಜ್ವಲಂತ ಉದಾಹರಣೆಗಳು ಪರಿಸರದಲ್ಲಿ ಕಾಣುತ್ತಿವೆ. ಈ ಬಾವಿಯ ನೀರನ್ನು ಏತದಿಂದಲೇ ಮೇಲಕ್ಕೆತ್ತುತ್ತಾರೆ. ಪ್ರತೀ ವರ್ಷ ನೇಮದ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಐವತ್ತು ಸಾವಿರಕ್ಕೂ ಹೆಚ್ಚು ಭಕ್ತರು ಈ ಪವಿತ್ರ ತೀರ್ಥ ಸ್ವೀಕರಿಸುತ್ತಾರೆ. ಮಂಗಳೂರಿನಿಂದ ಸುಮಾರು ೨೫ ಕಿ.ಮೀ. ದೂರದಲ್ಲಿ ಶಿಬರೂರು ಕ್ಷೇತ್ರವಿದೆ. ಇದು ಪ್ರಸಿದ್ಧ ‘ಕಟೀಲು ಕ್ಷೇತ್ರ’ದಿಂದ 2 ಕಿ.ಮೀ., ಕಿನ್ನಿಗೋಳಿಯಿಂದ 3 ಕಿ.ಮೀ. ದೂರದಲ್ಲಿದೆ.

















































































































