ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ ನ (ಎನ್ಸಿಸಿ) 18 ಕರ್ನಾಟಕ ಬೆಟಾಲಿಯಾನ್ನಿಂದ ಆಳ್ವಾಸ್ನ ವಿದ್ಯಾಗಿರಿಯ ಆವರಣದಲ್ಲಿ 10 ದಿನಗಳ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ನಡೆಯಿತು. ಮಂಗಳೂರಿನ ಎನ್ಸಿಸಿ ಸಮೂಹದ ಮುಖ್ಯ ಕಛೇರಿಯ ವ್ಯಾಪ್ತಿಗೊಳಪಟ್ಟ ವಿವಿಧ ಬ್ಯಾಟಾಲಿಯನ್ಗಳಿಂದ 600 ಎನ್ಸಿಸಿ ಕೆಡೆಟ್ಗಳು ಭಾಗವಹಿಸಿದ್ದರು. ಕೆಡೆಟ್ಗಳಿಗೆ ಫೈರಿಂಗ್, ಬ್ಯಾಟಲ್ ಕ್ರಾಫ್ಟ್, ಡ್ರಿಲ್, ನಕ್ಷೆ ಓದುವಿಕೆ, ರೈಫಲ್ನ ನಿರ್ವಹಣೆ, ಫೀಲ್ಡ್ ಕ್ರಾಫ್ಟ್ ಮತ್ತು ಮಿಲಿಟರಿ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಮಂಗಳೂರಿನ ಎನ್ಸಿಸಿ ಸಮೂಹದ ಮುಖ್ಯ ಕಛೇರಿಯಿಂದ ಒಟ್ಟು 80 ಕೆಡೆಟ್ಗಳು ಬೆಂಗಳೂರಿನಲ್ಲಿ ನಡೆಯುವ ಐಜಿಸಿ- ಆರ್ಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ರೋಹಿತ್ ರೈ ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯ ಕ್ಯಾಂಪ್ ಒಂದೇ ಆವರಣದಲ್ಲಿ ಬಹಳ ವ್ಯವಸ್ಥಿತವಾಗಿ ನೆರವೇರಲು ಸಹಾಯ ಮಾಡಿದ ಆಳ್ವಾಸ್ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿ ಹಾಗೂ ಸಹಕರಿಸಿದ ಸರ್ವರನ್ನು ಸ್ಮರಿಸಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇಂತಹ ಶಿಬಿರಗಳು ಯುವಕರಲ್ಲಿ ದೇಶಭಕ್ತಿ, ಶಿಸ್ತು ಮತ್ತು ಸೇವಾಭಾವವನ್ನು ಬೆಳೆಸುವ ಮಹತ್ವದ ವೇದಿಕೆಯಾಗಿದೆ. ಇಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಕ್ಯಾಡೆಟ್ನಲ್ಲೂ ದೇಶಸೇವೆಯ ಕನಸು ಮೂಡಬೇಕು. ಕನಿಷ್ಠ ಒಬ್ಬರಾದರೂ ಈ ಶಿಬಿರದಿಂದ ಸೈನಿಕನಾಗಬೇಕು ಎಂಬುದು ನಮ್ಮೆಲ್ಲರ ಆಶಯ ಎಂದರು. ಪ್ರಮುಖವಾಗಿ ಇಂತಹ ಶಿಬಿರಗಳಲ್ಲಿ ಪಿಐ ಸಿಬ್ಬಂದಿಯ ಪಾತ್ರ ಅತ್ಯಂತ ಪ್ರಮುಖ. ಇವರ ಸೇವೆ ಮತ್ತು ಮಾರ್ಗದರ್ಶನ ಎನ್ಸಿಸಿ ಶಿಬಿರದ ಯಶಸ್ಸಿಗೆ ಅತಿ ಅಗತ್ಯ. ಇವರ ಗಡಿ ಕಾಯುವ ಸೇವೆಯ ಜೊತೆಗೆ ಇಂತಹ ಸೇವೆಗಳನ್ನು ನಾವೆಲ್ಲರೂ ಗೌರವಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಲೆಫ್ಟಿನೆಂಟ್ ಕರ್ನಲ್ ನಿತಿನ್ ನಾರಾಯಣ್, ಸುಬೇದಾರ್ ಮೇಜರ್ ಯಾಮ್ ಬಹುದ್ದೂರ್ ರಾಣಾ, ಕ್ಯಾಂಪ್ ಕ್ವಾರ್ಟರ್ ಮಾಸ್ಟರ್ ಧನಂಜಯ ಆಚಾರ್ಯ, ಲೆಫ್ಟಿನೆಂಟ್ ಮಹೇಂದ್ರ ಜೈನ್ ಹಾಗೂ ಇನ್ನಿತರ ಎನ್ಸಿಸಿ ಅಧಿಕಾರಗಳು, ಮಾರ್ಗದರ್ಶಕರು ಇದ್ದರು.