ಗಣಿತನಗರ : ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಲಸೇನೆಯ ಕೊಡುಗೆ ಗಣನೀಯವಾದದ್ದು. ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮವನ್ನು ಬೆಳೆಸಿ ನಾಯಕತ್ವದ ಗುಣವನ್ನು ಉದ್ದೀಪನಗೊಳಿಸುವ ಎನ್.ಸಿ.ಸಿಯ ಕಾರ್ಯ ಮಹತ್ತರವಾದದ್ದು ಎಂದು ಉಡುಪಿಯ ಎನ್.ಸಿ.ಸಿ ನೇವಲ್ ವಿಭಾಗದ ಕಮಾಂಡರ್ ಅಶ್ವಿನ್ ಎಂ ರಾವ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಎನ್.ಸಿ.ಸಿ ನೇವಲ್ ಘಟಕವನ್ನು ಸಂಸ್ಥೆಯ ಪ್ರಾಂಶುಪಾಲ ಹಾಗೂ ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿಗೆ ಎನ್.ಸಿ.ಸಿ. ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು. ಇದೇ ಸಂದರ್ಭ ಎನ್.ಸಿ.ಸಿಯ ಧ್ವಜದ ಮಹತ್ವವನ್ನು, ಧ್ಯೇಯೋದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯಲ್ಲಿ ಓದಿದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಯು ಎನ್.ಸಿ.ಸಿ. ಕೋಟದಡಿಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ಎಂ.ಬಿ.ಬಿ.ಎಸ್ ಪ್ರವೇಶಾತಿ ಪಡೆದಲ್ಲಿ ಸಂಸ್ಥೆಯ ವತಿಯಿಂದ ಭಾರತೀಯ ಸೇನೆಗೆ ರೂ.10ಸಾವಿರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್ ಎನ್.ಸಿ.ಸಿಯ ಪಿ.ಐ. ಅಧಿಕಾರಿ ಅಮಿತ್ ರಾವತ್, ನಿವೃತ್ತ ಶಿಕ್ಷಕಿ ಶ್ರೀಮತಿ ಸಾವಿತ್ರಿ ಮನೋಹರ್, ಸಂಸ್ಥೆಯ ಪಿ.ಆರ್.ಒ ಜ್ಯೋತಿಪದ್ಮನಾಭ್ ಭಂಡಿ, ಲೆಫ್ಟಿನೆಂಟ್ ಮಂಜುನಾಥ್ ಮುದೂರ್ ಉಪಸ್ಥಿತರಿದ್ದರು. ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿ ಶ್ರೀ ಕೃಷ್ಣಪ್ರಸಾದ್ ಸ್ವಾಗತಿಸಿ, ಆಂಗ್ಲಭಾಷಾ ವಿಭಾಗದ ಮುಖ್ಯಸ್ಥೆ ಶ್ರೀಮತಿ ಸಂಗೀತಾ ಕುಲಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.