ನವರಾತ್ರಿಯು ನವದೇವಿಯರನ್ನು ಆರಾಧಿಸುವ ಹಬ್ಬವಾಗಿದೆ. ನವರಾತ್ರಿಯ ನಿಮಿತ್ತ ವರ್ಷಂಪ್ರತಿ ಪರಿಸರದ ಕನ್ನಡಿಗರನ್ನು ಒಗ್ಗಟ್ಟು ಮಾಡಿ ಮಹಿಳಾ ವಿಭಾಗದ ಸದಸ್ಯೆಯರು ಶಾರದಾ ಪೂಜೆಯನ್ನು ಹಮ್ಮಿಕೊಳ್ಳುತ್ತಾ, ಈ ವರ್ಷ ಉಷಾ ಶ್ರೀಧರ್ ಶೆಟ್ಟಿಯವರ ನೇತೃತ್ವದಲ್ಲಿ ಇದನ್ನು ವಿಭಿನ್ನವಾಗಿ ಆಯೋಜಿಸಿ ಬಾರೀ ಸಂಖ್ಯೆಯಲ್ಲಿ ಮಹಿಳೆಯರನ್ನು ಒಂದುಗೂಡಿಸಿದ್ದಾರೆ. ಅದರೊಂದಿಗೆ ಮಹಿಳೆಯರ ಭಜನೆ, ಮಕ್ಕಳ ಕುಣಿತ ಭಜನೆ, ವಿಜಯ ಶೆಟ್ಟಿ ಮೂಡುಬೆಳ್ಳೆಯವರ ಭಕ್ತಿ ರಸಮಂಜರಿಯೊಂದಿಗೆ ಸಂಪನ್ನಗೊಂಡ ಈ ವಿಶಿಷ್ಟ ಕಾರ್ಯಕ್ರಮ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿದೆ ಎಂದು ವಸಾಯಿ ಕರ್ನಾಟಕ ಸಂಘ ಅಧ್ಯಕ್ಷರಾದ ದೇವೇಂದ್ರ ಬಿ ಬುನ್ನನ್ ನುಡಿದರು. ಅವರು ಸೆಪ್ಟೆಂಬರ್ 28ರ ರವಿವಾರದಂದು ವಸಾಯಿ ಪಶ್ಚಿಮದ ಪಾರ್ವತಿ ಸಿನೆಮಾ ಹತ್ತಿರ, ಸ್ವಾಮಿ ನಾರಾಯಣ ಮಂದಿರ ಸಭಾಗೃಹದ ಮೊದಲನೇ ಮಹಾಡಿಯಲ್ಲಿ ನಡೆದ ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಉಪಾಧ್ಯಕ್ಷ ಕರ್ನೂರು ಶಂಕರ್ ಆಳ್ವ ಮಾತನಾಡುತ್ತಾ, ನವರಾತ್ರಿಯ ದಿನಗಳು ನವದುರ್ಗೆಯರು ಧರ್ಮದ ರಕ್ಷಣೆಯ ಶಕ್ತಿಯ ಪ್ರತಿಬಿಂಬವಾಗಿದ್ದು, ಬೇರೆ ಬೇರೆ ರೂಪದಲ್ಲಿ ತಮ್ಮ ಶಕ್ತಿ ರೂಪವನ್ನು ಪ್ರದರ್ಶಿಸಿ ಧರ್ಮವನ್ನು ರಕ್ಷಿಸಿಕೊಂಡವರು ಎಂದು ನುಡಿದರು.

ವೇದಿಕೆಯಲ್ಲಿ ಸಂಘದ ಗೌರವ ಅಧ್ಯಕ್ಷ ವಿಶ್ವನಾಥ್ ಪಿ.ಶೆಟ್ಟಿ, ಅಧ್ಯಕ್ಷ ದೇವೇಂದ್ರ ಬುನ್ನನ್, ಉಪಾಧ್ಯಕ್ಷ ಕರ್ನೂರು ಶಂಕರ್ ಆಳ್ವ, ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಪಾಂಡು ಎಲ್.ಶೆಟ್ಟಿ, ಉಪ ಕಾರ್ಯಾಧ್ಯಕ್ಷ ಓ.ಪಿ ಪೂಜಾರಿ, ಗೌರವ ಕಾರ್ಯದರ್ಶಿ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ವಿಜಯ್ ಎಂ ಶೆಟ್ಟಿ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಯಶೋಧರ ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ ಶೆಟ್ಟಿ ಕರ್ನಿರೆ, ಸಂಘದ ಕಾರ್ಯದರ್ಶಿ ಪೂರ್ಣಿಮಾ ಎ.ಶೆಟ್ಟಿ, ಕೋಶಾಧಿಕಾರಿ ಭಾರತಿ ಎಚ್.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇತ್ತೀಚೆಗೆ ಅಂತರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತೆಯಾದ ಮಧುರಾ ಹರೀಶ್ ಶೆಟ್ಟಿ ಮತ್ತು ಶಿಕ್ಷಕಿ ಜಯಶ್ರೀ ಪಿ ಅಂಚನ್ ಅವರನ್ನು ಸನ್ಮಾನಿಸಲಾಯಿತು. ಸನ್ಮಾನವನ್ನು ಸ್ವೀಕರಿಸಿದ ಮಧುರಾ ಹರೀಶ್ ಶೆಟ್ಟಿ ಮಾತನಾಡಿ, ಮಹಿಳೆಯರು ಸಮಾಜದಲ್ಲಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಬೇಕು. ಅದಕ್ಕೆ ಪ್ರಾಯದ ಅಗತ್ಯವಿರುವುದಿಲ್ಲ. ನಮ್ಮಲ್ಲಿರುವ ಪ್ರತಿಭೆ ಪ್ರದರ್ಶಿಸಿದಾಗ ನಮಗೆ ಆತ್ಮಸ್ಥೆರ್ಯ ಬರುತ್ತದೆ. ನನ್ನ ಸಾಧನೆಯನ್ನು ಗುರುತಿಸಿ ಗೌರವಿಸಿರುವ ಸಂಘಕ್ಕೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನುಡಿದರು. ಸನ್ಮಾನವನ್ನು ಸ್ವೀಕರಿಸಿದ ಶಿಕ್ಷಕಿ ಜಯಶ್ರೀ ಪಿ.ಅಂಚನ್ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸುತ್ತಾ, ಕಳೆದ 25 ವರ್ಷಗಳಿಂದ ಈ ಪರಿಸರದಲ್ಲಿ ಟ್ಯೂಷನ್ ಕ್ಲಾಸ್ ಗಳನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶಕರಾಗಿದ್ದೇನೆ. ಮಹಿಳೆಯರು ಸಮಾಜ ಸೇವೆಯಲ್ಲಿ ಹೆಚ್ಚು ತೊಡಗಿಕೊಳ್ಳಬೇಕು ಎಂದು ನುಡಿದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಷಾ ಶ್ರೀಧರ್ ಶೆಟ್ಟಿ ಸ್ವಾಗತಿಸುತ್ತಾ, ಕನ್ನಡ ಭಾಷೆ ಮತ್ತು ಸಂಸ್ಕೃತಿಗಾಗಿ ಸಂಘ ನಿರಂತರವಾಗಿ ಸೇವೆಗಳನ್ನು ಮಾಡುತ್ತಾ ಬಂದಿದೆ. ಮಹಿಳಾ ವಿಭಾಗದ ಎಲ್ಲಾ ಕಾರ್ಯಕ್ರಮಗಳಿಗೂ ಸಂಘದ ಪದಾಧಿಕಾರಿಗಳು ಸದಸ್ಯರು ಬಹಳ ಉತ್ಸಾಹದಿಂದ ಸೇರಿಕೊಳ್ಳುತ್ತಾರೆ ಮತ್ತು ಬೆಂಬಲವನ್ನು ನೀಡುತ್ತಾರೆ. ಆದ್ದರಿಂದ ನಮ್ಮ ಎಲ್ಲಾ ಸೇವಾಕಾರ್ಯಗಳು ಯಶಸ್ವಿಯಾಗಿ ನಡೆಯುತ್ತದೆ. ಮುಂದಿನ ದಿನಗಳಲ್ಲಿ ಕೂಡಾ ತಮ್ಮೆಲ್ಲರ ಸಹಕಾರವಿರಲಿ ಎಂದರು. ನವರಾತ್ರಿ ಉತ್ಸವದ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನದಿಂದ ಶ್ರೀ ಗುರುರಾಜ ಮಾನವ ಜಾಗೃತಿ ಕೇಂದ್ರ ವಸಾಯಿ ಇವರಿಂದ ಭಜನೆ, ಬಳಿಕ ನಗರದ ಪ್ರಸಿದ್ಧ ಸಂಗೀತ ಕಲಾವಿದ ವಿಜಯ್ ಶೆಟ್ಟಿ ಮೂಡುಬೆಳ್ಳೆಯವರಿಂದ ಭಕ್ತಿ ರಸಮಂಜರಿ, ಸಂಜೆ ಶ್ರೀ ಕಟೀಲು ಯಕ್ಷ ಕಲಾ ವೇದಿಕೆ ಮಕ್ಕಳಿಂದ ಕುಣಿತ ಭಜನೆ, ಮಹಿಳೆಯರಿಂದ ಹಳದಿ- ಕುಂಕುಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಘದ ಜೊತೆ ಕಾರ್ಯದರ್ಶಿ ಸಿಎ ವಿಜಯ ಕುಂದರ್, ಜೊತೆ ಕೋಶಾಧಿಕಾರಿ ಹರಿಪ್ರಸಾದ್ ಶೆಟ್ಟಿ, ಸದಸ್ಯ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ, ಸದಸ್ಯರಾದ ಗಂಗಾಧರ್ ಶೆಟ್ಟಿ, ಕರುಣಾಕರ್ ಅಮೀನ್, ಮತ್ತಿತರ ಪದಾಧಿಕಾರಿಗಳು, ಸದಸ್ಯರು, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆಯರು, ಮಹಿಳಾ ಸದಸ್ಯರು ಹಾಗೂ ಅಪಾರ ಸಂಖ್ಯೆಯಲ್ಲಿ ತುಳು ಕನ್ನಡಿಗರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸುರೇಖಾ ಹರಿಪ್ರಸಾದ್ ರೈ ನಿರೂಪಿಸಿದರು. ಪೂರ್ಣಿಮ ಶೆಟ್ಟಿ ವಂದಿಸಿದರು.
ಚಿತ್ರ, ವರದಿ : ದಿನೇಶ್ ಕುಲಾಲ್