ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ನಾಟಾ ಪರೀಕ್ಷೆಯ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪ ಕ್ಷೇತ್ರದ ಭವಿಷ್ಯ ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ನ ನಿರ್ದೇಶಕ ವಿನೋದ್ ರ್ಹಾನ ಮಾತನಾಡಿ, ವಾಸ್ತುಶಿಲ್ಪದಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕಲಾತ್ಮಕ ಚಿಂತನೆಯ ಸಮನ್ವಯ ಅಗತ್ಯ. ಪಿಯುಸಿ ನಂತರ ವಾಸ್ತುಶಿಲ್ಪ ಪದವಿಗೆ ಪ್ರವೇಶ ಪಡೆಯಲು ದೇಶದಾದ್ಯಂತ ನಡೆಯುವ ನಾಟಾ (NATA) ಹಾಗೂ ಜೆಇಇ ಬಿಆರ್ಕ್ (JEE B.Arch) ಪರೀಕ್ಷೆಗಳ ಮಹತ್ವವನ್ನು ವಿವರಿಸಿದರು. ನಾಟಾ ಪರೀಕ್ಷೆಯಲ್ಲಿ ಗಣಿತ, ರೇಖಾಚಿತ್ರ ದೃಶ್ಯಗ್ರಹಣ ಹಾಗೂ ತಾರ್ಕಿಕ ಚಿಂತನೆಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಸಿದ್ಧತೆಗಾಗಿ ಸೂಕ್ತ ಮಾರ್ಗದರ್ಶನ ಒದಗಿಸಿದರು. ಬಿ.ಆರ್ಕ್ ಪದವಿಯ ಕುರಿತು ಮಾತನಾಡಿ, ಈ ಐದು ವರ್ಷದ ಕೋರ್ಸ್ ನಲ್ಲಿ ವಾಸ್ತು ವಿನ್ಯಾಸ, ನಗರ ಯೋಜನೆ, ಪರಿಸರ ಸ್ನೇಹಿ ನಿರ್ಮಾಣ ಮುಂತಾದ ಹಲವು ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಬಿ.ಆರ್ಕ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕರ, ನಗರ ಯೋಜನೆ ಮುಂತಾದ ಅನೇಕ ವೃತ್ತಿ ಮಾರ್ಗಗಳು ತೆರೆದುಕೊಳ್ಳುತ್ತವೆ ಎಂದರು.

ನಿಟ್ಟೆ ವಿವಿಯ ಆರ್ಕಿಟೆಕ್ಚರ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ನಿಕಿತಾ ಮಖಾಸನ ವಿದ್ಯಾರ್ಥಿಗಳೊಂದಿಗೆ ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಪ್ರೊ. ಎಂ. ಸದಾಕತ್, ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಾಗ ಕೇವಲ ಓಇಇಖಿ, ಎಇಇ, ಅಇಖಿ ಪರೀಕ್ಷೆಗಳಿಗಷ್ಟೇ ಸೀಮಿತರಾಗದೆ, ಲಭ್ಯವಿರುವ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಗಮನ ಹರಿಸಬೇಕು. ಇಂದಿನ ಪೀಳಿಗೆ ಅವಕಾಶಗಳ ಜಗತ್ತನ್ನು ಅನ್ವೇಷಿಸುವ ಧೈರ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ಕನಸುಗಳನ್ನು ಕೇವಲ ಒಂದು ಅಥವಾ ಎರಡು ಕ್ಷೇತ್ರಗಳಿಗೆ ಸೀಮಿತಗೊಳಿಸದೆ, ಹೊಸ ಹೊಸ ಅವಕಾಶಗಳನ್ನು ಸವಾಲಾಗಿ ಸ್ವೀಕರಿಸಿದರೆ ಮಾತ್ರ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಬಹುದು. ಸಮಾಜಕ್ಕೆ ಅಗತ್ಯವಿರುವ ವಿವಿಧ ಕ್ಷೇತ್ರಗಳಲ್ಲಿ ಪರಿಣತಿ ಪಡೆದರೆ, ತಮ್ಮ ವೃತ್ತಿಜೀವನದೊಂದಿಗೆ ರಾಷ್ಟ್ರ ನಿರ್ಮಾಣದಲ್ಲೂ ಸಹ ಪಾತ್ರ ವಹಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್, ಸಂಯೋಜಕರಾದ ಗೌತಮ್ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ ಸುಧಾರಾಣಿ ನಿರೂಪಿಸಿದರು.