ಮುಂಬಯಿ: ವಿಶ್ವವಿದ್ಯಾಲಯ ಕನ್ನಡ ವಿಭಾಗ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇವರ ಸಂಯುಕ್ತ ಆಶ್ರಯದಲ್ಲಿ ಸೆಪ್ಟೆಂಬರ್ 20ರ ಶನಿವಾರ ಮಧ್ಯಾಹ್ನ 2ರಿಂದ ಜೆ.ಪಿ ನಾಯಕ್ ಭವನ, ಮುಂಬೈ ವಿಶ್ವವಿದ್ಯಾಲಯ ಸಾಂತಾಕ್ರೂಜ್(ಪೂ) ಮುಂಬೈ ಇಲ್ಲಿ ಕನ್ನಡ ವಿಭಾಗದ ನಲ್ವತ್ತೇಳರ ಸಂಭ್ರಮ, ಕೃತಿ ಬಿಡುಗಡೆ, ಗೌರವಾರ್ಪಣೆ, ಪದವಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾಗಿರುವ ಐಕಳ ಹರೀಶ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡದ ಕಂಪು (ಕನ್ನಡ ವಿಭಾಗದ ಕಿರು ಸಾಧನೆಯ ಅವಲೋಕನ) ಕೃತಿ ಬಿಡುಗಡೆಯನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಜಿ.ಎನ್.ಉಪಾಧ್ಯ ಅವರು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬೈ ಕನ್ನಡ ಸಂಸ್ಥೆಗಳ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ಶತಕೋತ್ತರ ಸಾಧನೆಯ ಸಂಸ್ಥೆಗಳಾದ ಶ್ರೀಮದ್ಭಾರತ ಮಂಡಳಿ, ಮೊಗವೀರ ವ್ಯವಸ್ಥಾಪಕ ಮಂಡಳಿ, ಬಿ. ಎಸ್ ಕೆ. ಬಿ ಅಸೋಸಿಯೇಷನ್, ದೇವಾಡಿಗರ ಸಂಘ, ಮೈಸೂರು ಅಸೋಸಿಯೇಷನ್, ಬಂಟರ ಸಂಘ ಮೊದಲಾದ ಸಂಸ್ಥೆಗಳಿಗೆ ಗೌರವ ಸಲ್ಲಿಸಲಾಗುವುದು. ಅದೇ ರೀತಿ ಸಾಧಕರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಕನ್ನಡ ಎಂ.ಎಯಲ್ಲಿ ಪ್ರಥಮ ಸ್ಥಾನ ಪಡೆದ ವಿಕ್ರಮ್ ಜೋಶಿ ಹಾಗೂ ಸಂಘಟಕರಾದ ನವೀನ್ ಶೆಟ್ಟಿ, ಇನ್ನಬಾಳಿಕೆ, ಸಂಗೀತ ಕ್ಷೇತ್ರದ ಸಾಧನೆಗೆ ವಿಜಯ ಶೆಟ್ಟಿ ಮೂಡುಬೆಳ್ಳೆ ಅವರನ್ನು ಗೌರವಿಸಲಾಗುವುದು. ಸಂದರ್ಭದಲ್ಲಿ ಪದವಿ ಪ್ರಧಾನ ಸಮಾರಂಭವು ನಡೆಯಲಿದ್ದು ಮುಂಬೈ ವಿಶ್ವವಿದ್ಯಾಲಯ, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾಗಿರುವ ಡಾ. ಮನಿಷಾ ರಾವ್ ಅವರು ಪದವಿ ಪ್ರದಾನ ಮಾಡಲಿರುವರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾಗಿರುವ ಡಾ. ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಸಂಯೋಜಿಸಲಿದ್ದಾರೆ ಎಂದು ಕನ್ನಡ ವಿಭಾಗದ ಪ್ರಕಟಣೆ ತಿಳಿಸಿದೆ.ಮುಂಬೈ ವಿವಿ ಕನ್ನಡ ವಿಭಾಗ
ಹೊರನಾಡಿನಲ್ಲಿರುವ ಕನ್ನಡ ವಿಭಾಗಗಳಲ್ಲಿ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ವಿಶಿಷ್ಟವಾದ ಸ್ಥಾನಮಾನವಿದೆ. ಮುಂಬೈ ವಿಶ್ವವಿದ್ಯಾಲಯ ನಮ್ಮ ದೇಶದ ಮೊದಲ ವಿಶ್ವವಿದ್ಯಾಲಯಗಳಲ್ಲಿ ಒಂದೆಂಬ ಹಿರಿಮೆಗೆ ಪಾತ್ರವಾಗಿದೆ. ಈ ಮಹಾನ್ ವಿಶ್ವವಿದ್ಯಾಲಯಕ್ಕೆ ಅಂತಾರಾಷ್ಟ್ರೀಯ ಮನ್ನಣೆಯಿದೆ. ಇತ್ತೀಚೆಗಷ್ಟೇ ನ್ಯಾಕ್ ಮೌಲ್ಯಮಾಪನದಲ್ಲಿ ಮುಂಬಯಿ ವಿಶ್ವವಿದ್ಯಾಲಯಕ್ಕೆ 'ಎ ಪ್ಲಸ್ ಪ್ಲಸ್' ಶ್ರೇಯಾಂಕ ದೊರೆತಿದೆ. ಇದು ಮಹಾರಾಷ್ಟ್ರದಲ್ಲೇ ಅತಿ ಹೆಚ್ಚಿನದು. ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗಕ್ಕೆ ಈಗ ನಲ್ವತ್ತೇಳರ ಸಂಭ್ರಮ. ಈ ಮಾಯಾನಗರಿಯಲ್ಲಿ ವಿಭಾಗ ಕನ್ನಡದ ಪ್ರಸಾರ ಪ್ರಚಾರದಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಮುಂಬೈ ಸಾಹಿತ್ಯ ವಲಯವಾಗಿ ಬೆಳೆಯುವಲ್ಲಿ ವಿಭಾಗದ ಕೊಡುಗೆ ದೊಡ್ಡದು.ಕನ್ನಡ ವಿಭಾಗ ಸ್ನಾತಕೋತ್ತರ ಎಂ.ಎ, ಪಿಎಚ್.ಡಿ. ಅಧ್ಯಯನದ ಜತೆ ಜತೆಗೆ ಕನ್ನಡ ಬಾರದವರಿಗೆ, ಕನ್ನಡೇತರರಿಗೆ ಕನ್ನಡ ಸರ್ಟಿಫಿಕೇಟ್ ಮತ್ತು ಡಿಪ್ಲೊಮಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ವಿಭಾಗ ಈವರೆಗೆ 114 ವೈವಿಧ್ಯಮಯವಾದ ಮೌಲಿಕ ಕೃತಿಗಳನ್ನು ಪ್ರಕಟಿಸಿ ನಾಡಿನ, ವಿದ್ವಾಂಸರ, ಸಹೃದಯರ ಗಮನವನ್ನು ಸೆಳೆದಿದೆ. ಕನ್ನಡ ವಿಭಾಗದ ಸಮಗ್ರ ಸಾಧನೆಯನ್ನು ಗಮನಿಸಿ ಮುಂಬೈ ವಿವಿ ಎ ಗ್ರೇಡ್ ಮಾನ್ಯತೆ ನೀಡಿ ಗೌರವಿಸಿದೆ.
