ಕನ್ನಡ ವೆಲ್ಫೇರ್ ಸೂಸೈಟಿ ಘಾಟ್ಕೋಪರ್ ಈ ಸಂಸ್ಥೆ ನಿರಂತರ ಕಳೆದ 59 ವರ್ಷಗಳಿಂದ ಸಮಾಜಪರ ಕಾರ್ಯಗಳೊಂದಿಗೆ ಪರಿಸರದ ತುಳು ಕನ್ನಡಿಗರನ್ನು ಒಂದುಗೂಡಿಸಿ ಆ ಮೂಲಕ ಕ್ರಿಯಾಶೀಲವಾಗಿ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈದ್ಯಕೀಯ ಹಾಗೂ ನಮ್ಮ ಕಲೆ ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ಮತ್ತು ಉಳಿಸಿ ಬೆಳೆಸುವ ಕಾರ್ಯಗಳನ್ನು ಮಾಡುತ್ತಾ ಬಂದಿದೆ. ಇದೀಗ ಈ ಸಂಸ್ಥೆ ವಜ್ರ ಮಹೋತ್ಸವವನ್ನು ಆಚರಿಸುವ ಸಿದ್ಧತೆಯಲ್ಲಿದ್ದು, ಮುಂಬರುವ ಫೆಬ್ರವರಿ 01 ರಂದು ಕುರ್ಲಾದ ಬಂಟರ ಭವನದಲ್ಲಿ ಬೆಳಿಗ್ಗೆ ಗಂಟೆ 10 ರಿಂದ ಸಂಜೆ 08 ರ ತನಕ ಅದ್ದೂರಿಯಾಗಿ ಆಚರಿಸಿಕೊಳ್ಳಲಿದೆ. ಈ ನಿಟ್ಟಿನಲ್ಲಿ ಸಂಪೂರ್ಣ ಕಾರ್ಯಕ್ರಮವು ಯಶಸ್ವಿಯಾಗಿ ವಿಜೃಂಭಣೆಯಿಂದ ನಡೆಯಬೇಕೆಂಬ ಉದ್ದೇಶದಿಂದ ನಗರದ ಮಹಾದಾನಿಗಳು, ಕಲೆ ಸಂಸ್ಕೃತಿಯ ಪ್ರೋತ್ಸಾಹಕರು, ತುಳು ಕನ್ನಡ ಸಂಘ ಸಂಸ್ಥೆಗಳಿಗೆ, ಜಾತಿಯ ಸಂಸ್ಥೆಗಳಿಗೂ ನಿರಂತರ ಬೆಂಬಲವನ್ನು ನೀಡುತ್ತಿರುವ ಉದ್ಯಮಿಗಳಾದ ವಿ.ಕೆ ಗ್ರೂಪ್ ಆಫ್ ಕಂಪೆನಿಯ ಆಡಳಿತ ನಿರ್ದೇಶಕ ಕೆ.ಎಂ ಶೆಟ್ಟಿ, ಬಾಬಾಸ್ ಗ್ರೂಪ್ ನ ಆಡಳಿತ ನಿರ್ದೇಶಕ ಮಹೇಶ್ ಎಸ್ ಶೆಟ್ಟಿ, ವೆಲ್ಕಮ್ ಪ್ಯಾಕೇಜ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ ಎಂ ಭಂಡಾರಿ ಅವರನ್ನು ಗೌರವಾಧ್ಯಕ್ಷರುಗಳನ್ನಾಗಿ ಆಯ್ಕೆ ಮಾಡಲಾಗಿದೆ.


ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಇವರ ಅಧ್ಯಕ್ಷತೆಯಲ್ಲಿ ಈ ವಜ್ರ ಮಹೋತ್ಸವ ಜರಗಳಿದ್ದು, ಪ್ರತಿಷ್ಟಿತ ಗಣ್ಯರು ಈ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿರುವರು. ಮಾತ್ರವಲ್ಲದೆ ಬೆಂಗಳೂರಿನ ನೀನಾಸಂ ನೃತ್ಯ ಕಲಾ ಸಂಸ್ಥೆಯಿಂದ ನೃತ್ಯ ಕಾರ್ಯಕ್ರಮ ಹಾಗೂ ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ನೃತ್ಯ ಸ್ಪರ್ಧೆ ಹಾಗೂ ಕನ್ನಡ ವೆಲ್ಫೇರ್ ಸೊಸೈಟಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದವರಿಂದ ಮತ್ತು ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.





































































































