ಚಿಣ್ಣರಬಿಂಬ ಮೀರಾ ರೋಡ್ ಶಿಬಿರದ ಮಕ್ಕಳ ಉತ್ಸವ ಹಾಗೂ ಪ್ರತಿಭಾನ್ವೇಷಣಾ ಸ್ಪರ್ಧೆಯು ಆಗಸ್ಟ್ 24 ರಂದು ರವಿವಾರ ಮಧ್ಯಾಹ್ನ 1 ಗಂಟೆಗೆ ಭಾಯಂದರ್ ಪೂರ್ವದ ನ್ಯೂ ಸೈಂಟ್ ಆಗ್ನೇಸ್ ಹೈಸ್ಕೂಲ್ ನಲ್ಲಿ ನಡೆಯಿತು. ಮಕ್ಕಳ ಪ್ರತಿಭಾ ಸ್ಪರ್ಧೆ ಕಾರ್ಯಕ್ರಮವನ್ನು ರೈ ಸುಮತಿ ಎಜುಕೇಷನಲ್ ಟ್ರಸ್ಟ್, ಸೈಂಟ್ ಆಗ್ನೇಸ್ ಇಂಗ್ಲೀಷ್ ಹೈಸ್ಕೂಲ್, ಕೆ ಎಸ್ ಮೆಹ್ತಾ ಸ್ಕೂಲ್ ಮತ್ತು ಜೂನಿಯರ್ ಕಾಲೇಜ್ ನ ಕಾರ್ಯಾಧ್ಯಕ್ಷರಾಗಿರುವ ಆಗಿರುವ ಡಾ| ಅರುಣೋದಯ ರೈ ಬಿಳಿಯೂರು ಗುತ್ತು ಇವರು ಚಿಣ್ಣರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಶಿಸ್ತು ಬದ್ಧ ಚಟುವಟಿಕೆ ಮತ್ತು ಕಾರ್ಯ ವೈಖರಿಯಿಂದ ಚಿಣ್ಣರಬಿಂಬ ಪರಿಪೂರ್ಣತೆಯನ್ನು ಹೊಂದಿದೆ ಎಂದು ಮನಪೂರ್ವಕವಾಗಿ ಶ್ಲಾಘಿಸಿದರು. ತನ್ನ ಸಹಕಾರ ಸದಾ ಇದೆ ಎನ್ನುವ ಪ್ರೋತ್ಸಾಹದ ನುಡಿಗಳನ್ನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟರ ಸಂಘ ಮುಂಬಯಿಯ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಜೊತೆ ಕಾರ್ಯದರ್ಶಿಯಾಗಿರುವ ಉದ್ಯಮಿ ರಮೇಶ ಎಂ ಶೆಟ್ಟಿ ಸಿದ್ಧಕಟ್ಟೆಯವರು ಮಾತನಾಡುತ್ತಾ, ಮಕ್ಕಳ ಪ್ರತಿಭಾ ಸ್ಪರ್ಧಾ ಕಾರ್ಯಕ್ರಮವು ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲೂ ಕೃಷ್ಣವೇಷ ಸ್ಪರ್ಧೆ ನೋಡಿ ನನಗೆ ಶ್ರೀ ಕೃಷ್ಣ ದೇವರು ಧರೆಗಿಳಿದು ಬಂದಂತೆ ಭಾಸವಾಯಿತು. ಚಿಣ್ಣರಬಿಂಬ ಸಂಸ್ಕಾರ, ಸಂಸ್ಕೃತಿ, ಮಾತೃಭಾಷೆ, ಜೀವನ ಮೌಲ್ಯಗಳನ್ನು ಕಲಿಸುವ ಗುರುಕುಲವಿದ್ದಂತೆ ಎಂದರು. ಮುಖ್ಯ ಅತಿಥಿಗಳಾಗಿ ಬಂಟ್ಸ್ ಫೋರಂ ಮೀರಾ ಭಾಯಂದರ್ ವಿಭಾಗದ ಅಧ್ಯಕ್ಷರಾಗಿರುವ ಉದಯ್ ಎಮ್ ಶೆಟ್ಟಿ ಮಲಾರ ಬೀಡು ಮಾತನಾಡುತ್ತಾ, ಚಿಣ್ಣರಬಿಂಬದಲ್ಲಿ ಕಲಿತ ಮಕ್ಕಳ ಸ್ವಭಾವ, ಸಂಸ್ಕೃತಿ ಎಷ್ಟೇ ದೊಡ್ಡ ಪದವಿಗೆ ಏರಿದರು ಅದು ಬದಲಾಗುವುದಿಲ್ಲ. ಚಿಣ್ಣರಬಿಂಬ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿದೆ ಎಂದರು.

ಮೀರಾ ರೋಡ್ ಶಿಬಿರದ ಹಿರಿಯ ವಿದ್ಯಾರ್ಥಿಗಳಾದ ಸಿಎ ಶ್ರೀರಕ್ಷಾ ಶೆಟ್ಟಿ ತಮ್ಮ ಚಿಣ್ಣರ ಬಿಂಬದ ಕಲಿಕಾ ದಿನಗಳನ್ನು ಮೆಲುಕು ಹಾಕುತ್ತಾ, ಇಂದು ನಿಮ್ಮ ಎದುರು ನಿಂತು ಮಾತನಾಡುವ ಅರ್ಹತೆ ಧೈರ್ಯ ನಮಗೆ ಚಿಣ್ಣರ ಬಿಂಬ ಕಲಿಸಿದ ಪಾಠ. ಇಲ್ಲಿಯ ಶಿಸ್ತಿನಿಂದಾಗಿ ತಾನು ಇಂದು ಸಿಎ ಪರೀಕ್ಷೆಯಲ್ಲಿ ಪಾಸಾಗಲು ಸಾಧ್ಯವಾಯಿತು. ನಾನು ಚಿಣ್ಣರಬಿಂಬದ ಹಳೆ ವಿದ್ಯಾರ್ಥಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ. ಟಿಸಿಎಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ನಿರೀಕ್ಷಾ ಶೆಟ್ಟಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾ, ಎಷ್ಟೇ ಬೇರೆ ಬೇರೆ ಕಲಿಯುವ ಸಾಧನಗಳಿದ್ದರೂ ಕನ್ನಡ ಕಲಿಯುವ ಅವಕಾಶ ಚಿಣ್ಣರಬಿಂಬದಲ್ಲಿ ಸಾಧ್ಯವಾಯಿತು. ನನಗೆ ಅಂದು ಚಿಣ್ಣರ ಬಿಂಬದಲ್ಲಿ ಸಿಕ್ಕಿದ ಸ್ನೇಹಿತರು ಈಗ ಸಹ ನಾವು ಒಟ್ಟಿಗೆ ಇದ್ದೇವೆ. ನಾನು ಮೊದಲು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ಚಿಣ್ಣರ ಬಿಂಬದಲ್ಲಿ, ಪಾಲಕರಿಗೂ ಕೂಡ ಒಳ್ಳೆಯ ಸ್ನೇಹಮಯಿ ಜೀವನ ನಡೆಸುವಂತಹ ಅವಕಾಶ ಈ ಸಂಸ್ಥೆಯಿಂದ ಸಿಕ್ಕಿದೆ ಎಂದರು.ಚಿಣ್ಣರಬಿಂಬದ ರೂವಾರಿ ಪ್ರಕಾಶ್ ಭಂಡಾರಿ ಅವರು ಚಿಣ್ಣರ ಬಿಂಬದ ಯಶಸ್ಸಿಗೆ ಕಾರಣರಾದ ಎಲ್ಲಾ ಪದಾಧಿಕಾರಿಗಳು ಮತ್ತು ಪಾಲಕರ ಸಹಕಾರವನ್ನು ಸ್ಮರಿಸುತ್ತಾ, ಹಳೆ ವಿದ್ಯಾರ್ಥಿಗಳು ಸಹ ಚಿಣ್ಣರಬಿಂಬದ ಎಲ್ಲಾ ಚಟುವಟಿಕೆಗಳಲ್ಲಿ ಕೈಜೋಡಿಸಬೇಕೆಂದು ಕೇಳಿಕೊಂಡರು. ವಲಯ ಮುಖ್ಯಸ್ಥೆ ಆಶಾಲತಾ ಕೊಠಾರಿಯವರು ವಲಯದ ಎಲ್ಲಾ ಕಾರ್ಯಕ್ರಮಗಳು ಉತ್ತಮವಾಗಿ ಕ್ರಮಬದ್ಧವಾಗಿ ನಡೆಯುತ್ತಿದೆ. ಇದರಲ್ಲಿ ಪಾಲಕರ ಮತ್ತು ವಿದ್ಯಾರ್ಥಿಗಳ ಸಹಕಾರ ಸಿಂಹ ಪಾಲಿದೆ ಎಂದು ಬಣ್ಣಿಸಿದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ವಿಜಯ್ ಕೋಟ್ಯಾನ್, ಪ್ರಾದೇಶಿಕ ಮುಖ್ಯಸ್ಥೆ ವಿನಯ ಶೆಟ್ಟಿ, ಸಾಂಸ್ಕೃತಿಕ ಮುಖ್ಯಸ್ಥೆ ದಿವ್ಯ ಶೆಟ್ಟಿ ಉಪಸ್ಥಿತರಿದ್ದರು. ಶಿಬಿರದ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಜಾನಪದ ಗೀತೆ, ಭಾಷಣ, ಭಾವಗೀತೆ, ಏಕಪಾತ್ರಾಭಿನಯ ಮತ್ತು ಚರ್ಚಾ ಸ್ಪರ್ಧೆ ಹಾಗೂ ಪಾಲಕರಿಗಾಗಿ ದೇಶಭಕ್ತಿ ಗೀತೆ ಸ್ಪರ್ಧೆ ನಡೆಯಿತು. ಮೀರಾ ರೋಡ್ ಪರಿಸರದ ಮಕ್ಕಳಿಗಾಗಿ ಕೃಷ್ಣ ವೇಷ ಸ್ಪರ್ಧೆಯೂ ನಡೆಯಿತು.
ಶಿಬಿರ ಮುಖ್ಯಸ್ಥೆ ಸಂಧ್ಯಾ ನಾಯ್ಕ್ ಸ್ವಾಗತಿಸಿದರು. ಶಾಂತಾ ಆಚಾರ್ಯ ಪ್ರಾಸ್ತಾವಿಕವಾಗಿ ನುಡಿದರು. ಗುರುವಂದನ ಕಾರ್ಯಕ್ರಮದಲ್ಲಿ ಕನ್ನಡ ಶಿಕ್ಷಕಿಯರಾದ ಸುಲೋಚನಾ ಶೆಟ್ಟಿ, ಮಲ್ಲಿಕಾ ಶೆಟ್ಟಿ, ಭಜನೆ ಶಿಕ್ಷಕಿಯರಾದ ಶಾಂತ ಆಚಾರ್ಯ, ಸುಜಾತ ಶೆಟ್ಟಿ ಇವರನ್ನು ಗೌರವಿಸಲಾಯಿತು. 10 ಹಾಗೂ 12 ನೇ ತರಗತಿಯಲ್ಲಿ ಉತ್ತಮ ಅಂಕ ಪಡೆದ ಶಿಬಿರದ ಮಕ್ಕಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ತೀರ್ಪುಗಾರರಾಗಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಮತ್ತು ರಜಿನಿ ರಘುನಾಥ್ ಶೆಟ್ಟಿಯವರು ಸಹಕರಿಸಿದರು. ಚಿಣ್ಣರಾದ ಜನ್ಯ ಶೆಟ್ಟಿ, ಶ್ರೀಹಾನ್ ಶೆಟ್ಟಿ, ಋತ್ವಿಕ್ ಶೆಟ್ಟಿ, ರಿಶಿಲ್ ಸೇರ್ವೆಗಾರ್, ಅಕ್ಷತಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮವನ್ನು ಅನ್ಮಿತಾ ಗಾಣಿಗ, ವಿಹಾನ್ ಶೆಟ್ಟಿ, ಶಾನ್ವಿ ಶೆಟ್ಟಿ, ಸಮಿಕ್ ಮೆಂಡನ್ ನಿರೂಪಿಸಿದರು. ಬಹುಮಾನ ವಿತರಣಾ ಕಾರ್ಯಕ್ರಮವನ್ನು ಭಾಯಂದರ್ ಶಿಬಿರದ ಸುರೇಖಾ ಮೊಯ್ಲಿ ಹಾಗೂ ಕಾಂದಿವಲಿ ಶಿಬಿರದ ಜಯಲಕ್ಷ್ಮಿ ಶೆಟ್ಟಿ ಇವರು ನಡೆಸಿಕೊಟ್ಟರು. ಶಿಬಿರದ ಉಪ ಮುಖ್ಯಸ್ಥೆ ಪ್ರಿಯಾಂಕಾ ಪೂಜಾರಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಮಕ್ಕಳು, ಹಳೆ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ಸ್ವಯಂಸೇವಕರು, ಪಾಲಕರ ಸಹಕಾರದಿಂದ ಕಾರ್ಯಕ್ರಮವು ಸುಂದರವಾಗಿ ಶಿಸ್ತು ಬದ್ಧವಾಗಿ ನಡೆಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.