ಬಂಟ ಸಮುದಾಯದ ವಿರುದ್ಧ ಅವಮಾನಕರ ಹೇಳಿಕೆ ನೀಡಿರುವ ಮಹಾರಾಷ್ಟ್ರ ಶಾಸಕ ಸಂಜಯ್ ಗಾಯಕ್ವಾಡ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಜುಲೈ 14ರ ಸೋಮವಾರದಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಸುಮಾರು 60 ಬಂಟರ ಸಂಘಗಳ ಪ್ರತಿನಿಧಿಗಳು ಮತ್ತು ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತಿತರ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ತಮ್ಮ ಬೇಡಿಕೆಯ ಮನವಿಯನ್ನು ರವಾನಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳು ಆಗಮಿಸಿ ಬಂಟ ಸಮಾಜವನ್ನು ಮತ್ತು ಬಂಟ ಸಮಾಜದ ಬಂಧುಗಳು ನಡೆಸುತ್ತಿರುವ ಹೋಟೆಲುಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದವರು. ಇದೀಗ ಅವರ ಪಕ್ಷದ ಶಾಸಕರಿಂದಲೇ ಬಂಟ ಸಮಾಜದ ಮೇಲೆ ನಡೆದಿರುವ ಅವಮಾನದ ಹೇಳಿಕೆಗಳು ಸಮಾಜಕ್ಕೆ ನೋವನ್ನು ತಂದಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಮಹಾರಾಷ್ಟ್ರದ ಅಭಿವೃದ್ಧಿಗೆ ಕೋಟ್ಯಾಂತರ ರೂಪಾಯಿಯಲ್ಲಿ ಬಂಟ ಸಮಾಜದ ಉದ್ಯಮದ ಬಹುಪಾಲನ್ನು ವಿನಿಯೋಗಿಸಿಕೊಳ್ಳುವುದನ್ನು ಮರೆತು ಬಂಟ ಸಮಾಜವನ್ನು ಕಳೆದ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಶಾಸಕ ಸಂಜಯ್ ಗಾಯಕ್ವಾಡ್ ಅವರು ದುರುದ್ದೇಶದಿಂದ ಯಾವುದೇ ಕಾರಣವಿಲ್ಲದೆ ಬಂಟ ಸಮುದಾಯದ ಬಗ್ಗೆ ಅವಮಾನಿಸಿರುವುದು ನೋವುಂಟು ಮಾಡಿದೆ. ಕಾರಣವಿಲ್ಲದೇ ಕ್ಯಾಂಟೀನ್ ಸಿಬ್ಬಂದಿ ಮೇಲೆ ಅವರು ಹಲ್ಲೆ ನಡೆಸಿರುವುದು ಕೂಡಾ ಖಂಡನೀಯ. ಈ ಬಗ್ಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸದಸ್ಯತನ ಹೊಂದಿರುವ ಬಂಟರ ಸಂಘಗಳ ಪದಾಧಿಕಾರಿಗಳು ಮಹಾರಾಷ್ಟ್ರದ ಶಾಸಕರ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ತಮ್ಮೆಲ್ಲರ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಒಕ್ಕೂಟದ ಪದಾಧಿಕಾರಿಗಳು ವೈಯುಕ್ತಿಕವಾಗಿ ಮಾತುಕತೆ ನಡೆಸಿ ಮನವಿಯನ್ನು ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಮಹಾರಾಷ್ಟ್ರಕ್ಕೆ ಮಹತ್ತರವಾದ ಕೊಡುಗೆ ನೀಡಿದ ತುಳುನಾಡಿನ ಎಲ್ಲಾ ಜಾತಿಯ ಸಮಾಜಕ್ಕೆ ಮತ್ತು ಬಂಧುಗಳಿಗೆ ಈ ರೀತಿಯಾಗಿ ಅವಮಾನಿಸಬಾರದು ಎಂಬುದು ಒಕ್ಕೂಟದ ಉದ್ದೇಶವಾಗಿದೆ. ಆಡಳಿತ ಮಂಡಳಿ ಸಭೆಯಲ್ಲಿ ಅವಿಭಾಜ್ಯ ದಕ್ಷಿಣ ಕನ್ನಡ ಜಿಲ್ಲೆಯ ಬಂಟರ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.