ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ನೀರ್ಜೆಡ್ಡು ಮೂಲದ ಸಮಾಜ ಸೇವಕಿ ಶ್ರೀಮತಿ ಆಶಾ ಎ ಹೆಗ್ಡೆ ಅವರನ್ನು ಬ್ರಹ್ಮಾವರ ತಾಲೂಕು ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ. ಆಶಾ ಹೆಗ್ಡೆ ಅವರು ಭಂಡಾರ್ಕರ್ಸ್ ಕಾಲೇಜಿನಲ್ಲಿ ಪದವಿ ಹಾಗೂ ಡಿ.ಎಂ.ಎಲ್.ಟಿ (DMLT) ಪೂರ್ಣಗೊಳಿಸಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ ಅವರು ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶ್ರೀದೇವಿ ಕ್ಲಿನಿಕಲ್ ಲ್ಯಾಬೋರೇಟರಿ ಸಾಲಿಗ್ರಾಮ, ಶ್ರೀದೇವಿ ಹೆಲ್ತ್ ಕೇರ್ ಮಂದಾರ್ತಿ ಮತ್ತು ಪ್ರಧಾನಮಂತ್ರಿ ಜನೌಷಧಿ ಕೇಂದ್ರವನ್ನು ಮಂದಾರ್ತಿಯಲ್ಲಿ ಹೊಂದಿದ್ದಾರೆ.

ಆರೋಗ್ಯ ಸೇವೆಯ ಜೊತೆಗೆ ಸಮಾಜಮುಖಿ ಸೇವೆಯನ್ನೂ ಸಮಾನವಾಗಿ ನಿರ್ವಹಿಸುತ್ತಿರುವ ಇವರು ಮಾನವ ಹಕ್ಕುಗಳು ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಂಸ್ಥೆಯಲ್ಲಿ ಕರ್ನಾಟಕದ ಉಪಾಧ್ಯಕ್ಷೆಯಾಗಿ, ಸಹಕಾರ ಭಾರತಿಯ ಉಡುಪಿ ಜಿಲ್ಲಾ ಮಹಿಳಾ ಪ್ರಮುಖರಾಗಿ, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿಯ ನಿರ್ದೇಶಕಿಯಾಗಿ, ವಿವಿಧ ದೇವಸ್ಥಾನಗಳಲ್ಲಿ ಸದಸ್ಯೆಯಾಗಿ, ಗಣೇಶೋತ್ಸವದ ಗೌರವ ಸಲಹೆಗಾರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜೀವ ವಿಮಾ ಕಂಪನಿಗಳ ಅನುಮೋದಿತ ವಿಮಾ ಏಜೆಂಟ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜದ ವಿವಿಧತೆಯ ನಡುವೆ ತಮ್ಮ ಶ್ರಮ, ಸಾಮರ್ಥ್ಯ ಹಾಗೂ ಬದ್ಧತೆಯಿಂದ ಗುರುತಿಸಿಕೊಂಡಿರುವ ಆಶಾ ಹೆಗ್ಡೆ ಅವರು ತುಳು ಭಾಷೆ, ಸಂಸ್ಕೃತಿ ಹಾಗೂ ತಾಯ್ನಾಡಿನ ಸೇವೆಯುಳ್ಳ ಕಾರ್ಯಗಳಲ್ಲಿ ತಮ್ಮ ಶಕ್ತಿ ಹಂಚಿಕೊಳ್ಳುವ ಆಶಯದಿಂದ ಬ್ರಹ್ಮಾವರ ತಾಲೂಕು ತುಳುವ ಮಹಾಸಭೆಯ ನೂತನ ಸಂಚಾಲಕಿಯನ್ನಾಗಿ ನೇಮಕಗೊಂಡಿದ್ದಾರೆ.