ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಜೂ. 7 ರಂದು ಶಿಕ್ಷಕರಿಗೆ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ವಿಷಯದ ಕುರಿತು ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಶ್ರೀ ಲಕ್ಷ್ಮೀ ಜನಾರ್ಧನ್ ಇಂಟರ್ನ್ಯಾಶನಲ್ ಸ್ಕೂಲ್ ಬೆಳ್ಮಣ್ನ ಪ್ರಾಂಶುಪಾಲರಾದ ಭುಜಂಗ ಪಿ ಶೆಟ್ಟಿ ಹಾಗೂ ಸುರತ್ಕಲ್ ನ ವಿದ್ಯಾದಾಯಿನಿ ಆಂಗ್ಲಮಾಧ್ಯಮ ಶಾಲೆಯ ಶುಭಲಕ್ಷ್ಮಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.

ಕಾರ್ಯಾಗಾರದಲ್ಲಿ ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು 2023ರ ಗುರಿ, ಉದ್ದೇಶ, ಬೋಧನಾ ಕಲಿಕಾ ವಿಧಾನ, ಪಠ್ಯವಿಷಯಗಳ ಮಾಹಿತಿಯನ್ನು ನೀಡಿ ಬೋಧನಾ ಸಾಮರ್ಥ್ಯ ವೃದ್ಧಿಯ ತರಬೇತಿಯನ್ನು ನೀಡಲಾಯಿತು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮುಗ್ಧ ಮನಸ್ಸಿನ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ನಿರಂತರ ತಮ್ಮನ್ನು ತಾವು ಆಧುನೀಕರಿಸಿಕೊಳ್ಳಬೇಕು. ಇಲ್ಲಿ ಕಲಿತ ಕೌಶಲ್ಯಗಳನ್ನು ತರಗತಿಯಲ್ಲಿ ಅನುಷ್ಠಾನಗೊಳಿಸಬೇಕೆಂದರು.
ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲಾ ಶಿಕ್ಷಕರು ರಾಷ್ಟ್ರೀಯ ಶಿಕ್ಷಣ ನೀತಿ ಪಠ್ಯಕ್ರಮದ ಕುರಿತು ಅರಿವನ್ನು ಹೊಂದಿರಬೇಕೆಂದರು. ಕಾರ್ಯಾಗಾರದಲ್ಲಿ ಸಂಸ್ಥೆಯ ಶಿಕ್ಷಕ ವೃಂದದವರು ಪ್ರಾತ್ಯಕ್ಷಿಕ ಅನುಭವವನ್ನು ಪಡೆದುಕೊಂಡರು.
		




































































































