ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕ.ಸಾ.ಪ ಮೂಡುಬಿದಿರೆ ತಾಲೂಕು ಘಟಕ ಹಾಗೂ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಆಳ್ವಾಸ್ನ ಶಿವರಾಮ ಕಾರಂತ ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಎಸ್.ಪಿ. ಅಜಿತ್ ಪ್ರಸಾದ್, ಇಂದಿನ ಯುವಪೀಳಿಗೆಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ತಲುಪಿಸುವ ಕರ್ಯವನ್ನು ನಾವು ಮಾಡಬೇಕು. ನಾವು ಆಡುವ ಮಾತುಗಳು ಎದುರಿನವರಿಗೆ ಸಹ್ಯವಾಗಿರಬೇಕು. ಕಲಿಸುವ ಶಿಕ್ಷಕರಿಗೆ ಕನ್ನಡದ ಮೇಲೆ ಪ್ರೀತಿ ಇಲ್ಲದೆ ಹೋದರೆ, ಮಕ್ಕಳಲ್ಲಿ ಕನ್ನಡದ ಮೇಲೆ ಪ್ರೀತಿ ಮೂಡಲು ಸಾಧ್ಯವಿಲ್ಲ. ನಾಡು ಅರ್ಥವನ್ನ ಪಡೆದುಕೊಳ್ಳಬೇಕಾದರೆ ನುಡಿ ಗಟ್ಟಿಯಾಗಿರ ಬೇಕು, ನಾಡನ್ನ ಬಿಟ್ಟು ನುಡಿಯಿಲ್ಲ, ನುಡಿಯನ್ನ ಬಿಟ್ಟು ನಾಡಿಲ್ಲ .

ಇಂದು ಕನ್ನಡ ತನ್ನ ಅಸ್ತಿತ್ವವನ್ನ ಕಳೆದುಕೊಳ್ಳುತ್ತಾ ಬರುತ್ತಿದೆ, ಇದಕ್ಕೆ ನಾವೇ ಕಾರಣ. ಕನ್ನಡ ನಮ್ಮ ಹೃದಯದ ಭಾಷೆ. ನಾವು ಯಾವಾಗ ನಮ್ಮ ಮಾತೃಭಾಷೆ ಸಂಪರ್ಕವನ್ನು ಕಳೆದುಕೊಳ್ಳುತ್ತೇವೆ ಮಾತನಾಡಲು ಯಾವಾಗ ಹಿಂಜರಿಯುತ್ತೇವೆ ಆಗ ನಾವು ನಮ್ಮತನವನ್ನು ಕಳೆದುಕೊಂಡ ಹಾಗೆ ಎಂದು ಬಿಎಂಶ್ರೀಕAಠಯ್ಯನವರು ಎಚ್ಚರಿಸಿದ್ದನ್ನು ಉಲ್ಲೇಖಿಸಿದರು. ಕನ್ನಡವನ್ನು ಕಲಿಯಬೇಕಾದರೆ ಮೊದಲು ಕನ್ನಡವನ್ನು ಪ್ರೀತಿಸಿ, ಹೆಚ್ಚಿನ ಮಹತ್ವವನ್ನ ನೀಡಬೇಕು. ಹೆಚ್ಚು ಹೆಚ್ಚು ಕನ್ನಡವನ್ನ ಬಳಸಿ ಬೆಳಸಿ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಡಾ. ಎಂಪಿ ಶ್ರೀನಾಥ್ ಮಾತನಾಡಿ, ಇದು ೧೧೧ನೇ ವರ್ಷದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆಯಾಗಿದ್ದು ಇದರ ಮೂಲ ಉದ್ದೇಶ ಕನ್ನಡವನ್ನ ಉಳಿಸಿ ಬೆಳೆಸುದಾಗಿದೆ.
ಇಂದು ನಾವು ದಕ್ಷಿಣ ಕನ್ನಡದಲ್ಲಿ ಅನೇಕ ಕಾರ್ಯಕ್ರಮವನ್ನು ಮಾಡುತ್ತಾ ಕನ್ನಡದ ಕಂಪನ್ನ ಹರಡುತ್ತಿದ್ದೇವೆ. ಎಲ್ಲಾ ಭಾಷೆಗಳನ್ನ ಕಲಿಯುವುದು ಉತ್ತಮ, ಅದರ ಜೊತೆಯಲ್ಲಿ ಕನ್ನಡಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ. ಇಂದಿನ ಮಕ್ಕಳಿಗೆ ಕನ್ನಡವನ್ನ ಕಲಿಸಿ ಬೆಳೆಸುವಲ್ಲಿ ಹಿರಿಯರ ಪಾತ್ರ ಮಹತ್ವದ್ದಾಗಿದೆ ಎಂದರು. ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಂಕರಮೂರ್ತಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ನ ಮೂಡುಬಿದಿರೆ ತಾಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ ಕೆ, ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಸುಶ್ಮಿತಾ ವಂದಿಸಿ, ಕಲ್ಪನಾ ಎನ್ ರಾವ್ ನಿರೂಪಿಸಿದರು.