ಸಾಮಾಜಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಿರಿಯ ಸಾರಿಗೆ ಉದ್ಯಮಿ ಎ.ಕೆ ಜಯರಾಮ ಶೇಖ ಅವರು 50ನೇ ವರ್ಷದ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೇ 22 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅವರು ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಪ್ರಸ್ತುತ 80 ವರ್ಷ ಪ್ರಾಯದವರಾದ ಹಿರಿಯ ಸಮಾಜ ಸೇವಕ ಎ.ಕೆ. ಜಯರಾಮ ಶೇಖರದ್ದು ಸಾರಿಗೆ ಮತ್ತು ಆಟೋಮೊಬೈಲ್ ಉದ್ಯಮದಲ್ಲಿ ದೊಡ್ಡ ಹೆಸರು. ಬಂಟ್ವಾಳ ತಾಲೂಕಿನ ಅರ್ಕುಳ ಕುಂಪನ ಮಜಲಿನಲ್ಲಿ ದಿ. ಮಿಜಾರು ಬಾಬು ಶೇಖ ಮತ್ತು ಲಕ್ಷ್ಮಿ ಅವರ ನಾಲ್ಕು ಮಕ್ಕಳಲ್ಲಿ ಮೂರನೆಯವರಾಗಿ ಜನವರಿ 15, 1944 ರಂದು ಅವರು ಜನಿಸಿದರು. ಫರಂಗಿಪೇಟೆಯ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿ ತಮ್ಮ ಸೋದರ ಮಾವ ಎ.ಕೆ. ನಾರಾಯಣ ಶೆಟ್ಟಿಯವರ ಆಶ್ರಯದಲ್ಲಿ ಬೆಳೆದರು. ಹಲವಾರು ಸಂಕಷ್ಟಗಳನ್ನು ಎದುರಿಸಿ 1962 ರಲ್ಲಿ ಬಸ್ ಕಂಡಕ್ಟರ್ ಆಗಿ ವೃತ್ತಿಜೀವನ ಆರಂಭಿಸಿದರು. ಬಳಿಕ ಕೆಲಕಾಲ ಹೋಟೆಲ್ ವ್ಯವಹಾರವನ್ನು ನಡೆಸಿದರು.

ಆಟೋಮೋಟಿವ್ ಉದ್ಯಮದಲ್ಲಿ ಜಯರಾಮ ಶೇಖರದ್ದು ದೀರ್ಘವಾದ ಪ್ರಯಾಣ. 1972 ರಲ್ಲಿ ಸಾರ್ವಜನಿಕ ಸಾರಿಗೆಯಲ್ಲಿ ಸಾಕಷ್ಟು ಅನುಭವ ಗಳಿಸಿದ ನಂತರ, ಅವರು ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ಬಯಲಾಟದ ಬಸ್ಸೊಂದನ್ನು ಖರೀದಿಸಿ ‘ಜ್ಯೋತಿ ಮೋಟಾರ್ಸ್’ ಸ್ಥಾಪಿಸಿದರು. ಜಯರಾಮ ಶೇಖರ ನಾಯಕತ್ವದಲ್ಲಿ ಪ್ರವರ್ಧಮಾನಕ್ಕೆ ಬಂದ ಕಂಪನಿ ಮುಂದೆ ‘ಮಹೇಶ್ ಮೋಟಾರ್ಸ್’ ಎಂಬ ಹೆಸರಿನ ಪ್ರಮುಖ ಸಾರಿಗೆ ಉದ್ಯಮವಾಗಿ ಬೆಳೆಯಿತು. 1976 ರ ಹೊತ್ತಿಗೆ ಅದು ಹಲವು ಪ್ರವಾಸಿ ಬಸ್ ಸೇವೆಗಳನ್ನು ಆರಂಭಿಸಿತು. 1981 ರಲ್ಲಿ ಪಂಜಾಬ್, ಜಮ್ಮು ಮತ್ತು ಕಾಶ್ಮೀರ, ಉತ್ತರ ಪ್ರದೇಶ ಮತ್ತು ಮೇಘಾಲಯ ಸೇರಿದಂತೆ ಎಂಟು ರಾಜ್ಯಗಳನ್ನು ಒಳಗೊಂಡ ಮಹತ್ವಾಕಾಂಕ್ಷೆಯ ಅಖಿಲ ಭಾರತ ಪ್ರವಾಸವನ್ನು ಆಯೋಜಿಸಿದುದು ಕಂಪನಿಯ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿತು. ಆಪ್ತ ಸ್ನೇಹಿತ ಮತ್ತು ಹಿತೈಷಿ, ಸೆಂಟ್ರಲ್ ಆಟೋ ಸ್ಟೋರ್ಸ್ನ ಮ್ಯಾನೇಜರ್ ಲೂಯಿಸ್ ಫುರ್ಟಾಡೊ ಅವರ ಸಲಹೆಯನ್ನು ಅನುಸರಿಸಿ 1992 ರಲ್ಲಿ ಶೇಖರು ಮಂಗಳೂರಿನ ಮೈದಾನ್ ಮೂರನೇ ಅಡ್ಡರಸ್ತೆಯಲ್ಲಿ ‘ಮಹೇಶ್ ಆಟೋ ಸ್ಟೋರ್’ ಎಂಬ ಬಿಡಿಭಾಗಗಳ ಮಾರಾಟ ಮಳಿಗೆ ಸ್ಥಾಪಿಸುವ ಮೂಲಕ ಹೊಸ ಉದ್ಯಮದಲ್ಲಿ ತೊಡಗಿಸಿಕೊಂಡರು.ಕಳೆದ ದಶಕದಲ್ಲಿ ಮಂಗಳೂರಿನ ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆಯ ನಡುವೆ ಮಹೇಶ್ ಮೋಟಾರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಸ್ಥಳಗಳಿಗೆ ಸಿದ್ಧ ಮಿಶ್ರ ಕಾಂಕ್ರೀಟ್ ಅನ್ನು ಸಮರ್ಥವಾಗಿ ಸಾಗಿಸಲು ಹೆವಿ ಡ್ಯೂಟಿ ಕಾಂಕ್ರೀಟ್ ಮಿಕ್ಸರ್ ಟ್ರಕ್ಗಳನ್ನು ಪರಿಚಯಿಸುವ ಮೂಲಕ ಮತ್ತಷ್ಟು ಕಟ್ಟಡ ನಿರ್ಮಾಣ ಕ್ಷೇತ್ರವನ್ನು ವೈವಿಧ್ಯಗೊಳಿಸಲು ಅವಕಾಶವನ್ನು ಒದಗಿಸಿತು. ಎ.ಕೆ ಜಯರಾಮರು 1998 ರಿಂದ ನಾಲ್ಕು ಅವಧಿಗೆ ದಕ್ಷಿಣ ಕನ್ನಡ ಬಸ್ ಮಾಲಿಕರ ಸಂಘದ ಅಧ್ಯಕ್ಷರಾಗಿ ಮತ್ತು ಮೂರು ವರ್ಷಗಳ ಕಾಲ ಕರ್ನಾಟಕ ಬಸ್ ಮಾಲಿಕರ ಒಕ್ಕೂಟದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ‘ದಕ್ಷಿಣ ಕನ್ನಡ ಒಪ್ಪಂದ ವಾಹನ ಮಾಲಕರ ಸಂಘದ’ ಅಧ್ಯಕ್ಷರಾಗಿ ಖಾಸಗಿ ಬಸ್ ನಿರ್ವಾಹಕರ ಅಗತ್ಯತೆಗಳನ್ನು ಸಮರ್ಥಿಸಲು ದಣಿವರಿಯದ ಕೆಲಸ ಮಾಡುತ್ತಿದ್ದಾರೆ. 1971 ರಲ್ಲಿ ಶ್ರೀಮತಿ ಪದ್ಮಾವತಿಯವರನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ ಶೇಖರು ಇಬ್ಬರು ಹೆಣ್ಣುಮಕ್ಕಳು ಮತ್ತು ಮೂವರು ಗಂಡು ಮಕ್ಕಳನ್ನು ಪಡೆದಿದ್ದಾರೆ. ನಿರಂತರ ಕಾರ್ಯ ಚಟುವಟಿಕೆಗಳ ನಡುವೆಯೂ ತಮ್ಮ ಕುಟುಂಬ, ವ್ಯಾಪಾರ ಮತ್ತು ವಿವಿಧ ಸಾಮಾಜಿಕ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ತಮ್ಮ ಉದ್ಯಮದೊಂದಿಗೆ ಕಲೆ, ಸಂಸ್ಕೃತಿ ಮತ್ತು ಶಿಕ್ಷಣದ ಮೇಲೆ ಶೇಖರಿಗೆ ಅಪಾರ ಅಭಿಮಾನ. 1979ರಲ್ಲಿ ಪಿ. ಲಂಕೇಶ್ ಅವರ ‘ಎಲ್ಲಿಂದಲೋ ಬಂದವರು’ ಕನ್ನಡ ಚಲನಚಿತ್ರ ನಿರ್ಮಾಣದ ಪಾಲುದಾರರಾಗಿ ಚಿತ್ರ ರಂಗದಲ್ಲಿಯೂ ಅವರ ಸೇವೆ ಸಂದಿದೆ. ಹಿಂದಿ ಚಿತ್ರರಂಗದ ಸ್ಟಂಟ್ ಮಾಸ್ಟರ್ ರಾಮ್ ಶೆಟ್ಟಿ ಅವರ ‘ಬಂಗಾರ್ದ ಕುರಲ್’ ತುಳು ಚಲನ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಭಾರತೀಯ ಲಲಿತ ಕಲೆಗಳ ಮಹಾಪೋಷಕರಾಗಿ ಜಯರಾಮ ಶೇಖರು ಹಲವು ಕಲಾವಿದರಿಗೆ ಮತ್ತು ಸಂಘ ಸಂಸ್ಥೆಗಳಿಗೆ ನೆರವಾಗಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ವರ್ಷಂಪ್ರತಿ ಆಯೋಜಿಸುವ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ ನಿರಂತರ ತಮ್ಮ ಮಾವ ಹಿರಿಯ ಯಕ್ಷಗಾನ ಅರ್ಥಧಾರಿ ದಿ. ಎ.ಕೆ. ನಾರಾಯಣ ಶೆಟ್ಟರ ಸಂಸ್ಮರಣ ತಾಳಮದ್ದಳೆಯನ್ನು ನಡೆಸುತ್ತಿದ್ದಾರೆ.ಶಿಕ್ಷಣದ ಮೇಲಿನ ಆಳವಾದ ಬದ್ಧತೆಯಿಂದ ಅವರು ತಮ್ಮ ಸಮಯ ಮತ್ತು ಸಂಪನ್ಮೂಲಗಳನ್ನು ತಾನು ಕಲಿತ ಫರಂಗಿಪೇಟೆ ಶ್ರೀ ರಾಮ ಹೈಯರ್ ಪ್ರೈಮರಿ ಸ್ಕೂಲಿಗಾಗಿ ಮೀಸಲಿಟ್ಟಿದ್ದಾರೆ. ಶಾಲೆಯ ಟ್ರಸ್ಟಿ, ಕಾರ್ಯದರ್ಶಿ ಮತ್ತು ಶತಮಾನೋತ್ಸವ ಆಚರಣೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿ ‘ಜಯಪದ್ಮ’ ಎಂಬ ನೂತನ ಸಭಾಂಗಣವನ್ನು ಕಟ್ಟಿಸಿಕೊಟ್ಟಿದ್ದಾರೆ. ಶಾಲಾ ಮಕ್ಕಳ ಮೇಲಿನ ವಾತ್ಸಲ್ಯ ಎಳೆಯ ಮಕ್ಕಳು ಅವರಲ್ಲಿ ಪ್ರೀತಿಯ ಅಜ್ಜನನ್ನು ಕಾಣುವಂತೆ ಮಾಡಿದೆ. ಜಯರಾಮ ಶೇಖರು 1972ರಲ್ಲಿ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ರಂಗದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. 2019 ರಲ್ಲಿ ಫರಂಗಿಪೇಟೆಯ ರೋಟರಿ ಕ್ಲಬ್ ಅಧ್ಯಕ್ಷರಾಗಿ ವಿವಿಧ ಸಮಾಜೋಪಯೋಗಿ ಕೆಲಸಗಳ ನೇತೃತ್ವ ವಹಿಸಿದ್ದರು. ಪರಿಸರದ ಹಲವು ದೇವಾಲಯಗಳ ಅಭಿವೃದ್ಧಿ ಮತ್ತು ನವೀಕರಣಕ್ಕೆ ಉದಾರ ಕೊಡುಗೆ ನೀಡಿದ್ದಾರೆ. ಅಲ್ಲದೆ ಅಲ್ಲಿನ ಧಾರ್ಮಿಕ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಎ.ಕೆ ಜಯರಾಮ ಶೇಖರಿಗೆ 75 ವರ್ಷ ತುಂಬಿದ ಸಂದರ್ಭದಲ್ಲಿ ಅವರ ಕುಟುಂಬ ವರ್ಗ ಮತ್ತು ಬಂಧು ಮಿತ್ರರು ಅವರನ್ನು ಸಪತ್ನಿಕರಾಗಿ ಗೌರವಿಸಿ ಸಾರ್ವಜನಿಕ ಸಮ್ಮಾನ ನೀಡಿದ್ದಾರೆ. ಕಲಾ ಕ್ಷೇತ್ರಕ್ಕೆ ನೀಡಿದ ಸೇವೆಗಾಗಿ 2019 ರಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ ಮಂಥನ ಮತ್ತು ಪ್ರದರ್ಶನ ವೇದಿಕೆಯು ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಿದೆ. ಅಂತಾರಾಷ್ಟ್ರೀಯ ರೋಟರಿ ಸಂಸ್ಥೆಯಿಂದ ಹಿರಿಯ ರೊಟೇರಿಯನ್ ಎಂದು ಗೌರವಿಸಲ್ಪಟ್ಟಿದ್ದಾರೆ. ಆಟೋಮೊಬೈಲ್ ಉದ್ಯಮಕ್ಕೆ ನೀಡಿದ ಅನನ್ಯ ಕೊಡುಗೆಯನ್ನು ಗುರುತಿಸಿ ದ.ಕ. ಆಟೋಮೊಬೈಲ್ ಮತ್ತು ಟೈಯರ್ ಡೀಲರ್ಸ್ ಅಸೋಸಿಯೇಷನ್ (ರಿ.) ಸೆಪ್ಟೆಂಬರ್ 22, 2024 ರಂದು ಅವರನ್ನು ‘ಜೀವಮಾನ ಪ್ರಶಸ್ತಿ’ಯೊಂದಿಗೆ ಸನ್ಮಾನಿಸಿದೆ. ಹೀಗೆ ಇನ್ನೂ ಹಲವಾರು ಸಂಸ್ಥೆಗಳಿಂದ ಶೇಖರು ಗೌರವ ಸಮ್ಮಾನಗಳನ್ನು ಪಡೆದಿದ್ದಾರೆ.