ಶೈಕ್ಷಣಿಕ ಸೇವಾಸಕ್ತ, ಸಮಾಜ ಸೇವಕ ಮತ್ತು ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಸುವರ್ಣ ಸಂಭ್ರಮದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು ತನ್ನ 50ನೇ ವರ್ಷಾಚರಣೆ ಸಂದರ್ಭದಲ್ಲಿ 2024- 25 ನೇ ಸಾಲಿನ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಭಾರತೀಯ ಪ್ರಜೆಗಳಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡುತ್ತಿದೆ.
ಬಂಟ್ವಾಳ ತಾಲೂಕು ಶಂಭೂರು ಗ್ರಾಮದ ಬೊಂಡಾಲದಲ್ಲಿ 1961 ಸಪ್ಟೆಂಬರ್ 25 ರಂದು ಜನಿಸಿದ ಸಚ್ಚಿದಾನಂದ ಶೆಟ್ಟರು ನರಿಕೊಂಬು ಸರಕಾರಿ ಪ್ರಾಥಮಿಕ ಶಾಲೆ ಮತ್ತು ಪಾಣೆಮಂಗಳೂರು ಶಾರದಾ ಪ್ರೌಢಶಾಲೆಗಳಲ್ಲಿ ವ್ಯಾಸಂಗ ಮಾಡಿ, ಬಂಟ್ವಾಳದ ಎಸ್.ವಿ.ಎಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದರು. ಮುಂಬೈ ಮಹಾನಗರದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ಭಾರತೀಯ ವಿಮಾನಯಾನ ಹಾಗೂ ವಿವಿಧ ಕಂಪನಿಗಳ ಲೆಕ್ಕಪತ್ರ ವಿಭಾಗದಲ್ಲಿ ಸುಮಾರು 14 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಊರಿಗೆ ಹಿಂತಿರುಗಿ ದುರ್ಗಾ ಫೆಸಿಲಿಟೀಸ್ ಮ್ಯಾನೇಜ್ಮೆಂಟ್ ಸರ್ವಿಸಸ್ ಪ್ರೈ. ಲಿ. ಎಂಬ ಸಂಸ್ಥೆಯನ್ನು 2007 ರಲ್ಲಿ ಸ್ಥಾಪಿಸಿ ರಾಜ್ಯದ ವಿವಿಧ ಭಾಗಗಳಲ್ಲಿ ಅದರ ಶಾಖೆಗಳನ್ನು ತೆರೆದು ತಮ್ಮ ಸೇವೆಯನ್ನು ವಿಸ್ತರಿಸಿರುತ್ತಾರೆ.

ಸಮಾಜ ಸೇವೆ ಮತ್ತು ಶೈಕ್ಷಣಿಕ ಆಸಕ್ತಿ ಹೊಂದಿರುವ ಬೊಂಡಾಲ ಸಚ್ಚಿದಾನಂದ ಶೆಟ್ಟರು 2012 ರಲ್ಲಿ ಶಂಭೂರು ಸರಕಾರಿ ಪ್ರೌಢಶಾಲೆಯನ್ನು ದತ್ತು ಪಡೆದುಕೊಂಡು ತಮ್ಮ ಸ್ವಂತ ಹಣದಿಂದ ಹಾಗೂ ಇತರರ ನೆರವಿನಿಂದ ಅದರ ಸರ್ವಾಂಗೀಣ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಅವರ ಸಹೋದರ ದಿ. ಬೊಂಡಾಲ ಜಗನ್ನಾಥ ಶೆಟ್ಟರ ಹೆಸರಿನಲ್ಲಿರುವ ಈ ಶಾಲೆ ಪ್ರಸ್ತುತ ರಾಜ್ಯದ ಮಾದರಿ ಶಾಲೆಯೆಂಬ ಗೌರವಕ್ಕೆ ಪಾತ್ರವಾಗಿದೆ. ಶಾಲೆಗೆ ಬರುವವರು ಬಡ ವಿದ್ಯಾರ್ಥಿಗಳಾಗಿದ್ದು ಸುಸಜ್ಜಿತ ತರಗತಿ ಕೊಠಡಿ, ವಾಚನಾಲಯ, ಅಡುಗೆ ಶಾಲೆ, ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಖಾಸಗಿ ಶಾಲೆಗಳಲ್ಲಿ ಒದಗುವ ಎಲ್ಲಾ ಬಗೆಯ ಸೌಲಭ್ಯಗಳನ್ನು ಇಲ್ಲಿ ನೀಡಲಾಗುತ್ತಿದೆ. ಇದಲ್ಲದೆ ತಮ್ಮ ದುರ್ಗಾ ಫೆಸಿಲಿಟೀಸ್ ಸಂಸ್ಥೆಯ ಮೂಲಕ ಸುಮಾರು 800 ಮಂದಿ ಬಡ, ಮಧ್ಯಮ ವರ್ಗದ ಪುರುಷರು ಮತ್ತು ಮಹಿಳೆಯರಿಗೆ ಅವರು ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.
ಬೊಂಡಾಲ ಚ್ಯಾರಿಟೇಬಲ್ ಟ್ರಸ್ಟ್ ಎಂಬ ಸೇವಾ ಸಂಸ್ಥೆಯನ್ನು ಸ್ಥಾಪಿಸಿರುವ ಬಿ.ಎಸ್. ಶೆಟ್ಟರು ಅದರ ಮೂಲಕ ವಿವಿಧ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಡೆಸುತ್ತಿದ್ದಾರೆ. ಸ್ಥಳೀಯ ಯುವ ಸೇವಾ ಟ್ರಸ್ಟ್ ಇದರ ಬೆಳ್ಳಿ ಹಬ್ಬದ ಗಣೇಶೋತ್ಸವ ಮತ್ತು ಬೊಂಡಾಲ ಬಯಲಾಟ ಸಮಿತಿಗಳ ಅಧ್ಯಕ್ಷರಾಗಿ ರಜತ ಮಹೋತ್ಸವ ಮತ್ತು ಸುವರ್ಣ ಸಂಭ್ರಮವನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಮಾಜದ ಸಾಧಕರಿಗೆ ಗೌರವ ಪುರಸ್ಕಾರಗಳನ್ನು ನೀಡುತ್ತಿದ್ದಾರೆ.
ಖ್ಯಾತ ಯಕ್ಷಗಾನ ಅರ್ಥಧಾರಿಗಳಾಗಿದ್ದ ತಮ್ಮ ಅಜ್ಜ ಪಟೇಲ ಬೊಂಡಾಲ ಜನಾರ್ದನ ಶೆಟ್ಟಿ ಮತ್ತು ತಂದೆ ನಿವೃತ್ತ ಭೂಮಾಪನ ಅಧಿಕಾರಿ ಬೊಂಡಾಲ ರಾಮಣ್ಣ ಶೆಟ್ಟರ ಸ್ಮರಣಾರ್ಥ ವರ್ಷಂಪ್ರತಿ ಹಿರಿಯ ಯಕ್ಷಗಾನ ಕಲಾವಿದರನ್ನು ಆಯ್ದು ‘ಬೊಂಡಾಲ ಪ್ರಶಸ್ತಿ ಪ್ರದಾನ’ ಮಾಡುತ್ತಿರುವ ಶೆಟ್ಟರು ಕಲಾವಿದರಿಗೆ, ಸಂಘ ಸಂಸ್ಥೆಗಳಿಗೆ ಹಾಗೂ ಧಾರ್ಮಿಕ ಸಂಘಟನೆಗಳಿಗೆ ಆರ್ಥಿಕ ನೆರವನ್ನೂ ನೀಡುತ್ತಿದ್ದಾರೆ. ಪ್ರತಿ ವರ್ಷ ತಮ್ಮ ಬೊಂಡಾಲ ಮನೆಯಲ್ಲಿ ಹಿರಿಯರ ಕಾಲದಿಂದ ನಡೆಯುತ್ತಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದಶಾವತಾರ ಯಕ್ಷಗಾನ ಮಂಡಳಿಯ ಸೇವಾ ಬಯಲಾಟವನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ತಮ್ಮ ಬಿಡುವಿಲ್ಲದ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಿಗಾಗಿ ಬಿ.ಎಸ್. ಶೆಟ್ಟರು 2017ರಲ್ಲಿ ಕರ್ನಾಟಕ ಸರಕಾರದ ವತಿಯಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ, ಕಟೀಲು ಬ್ರಹ್ಮಕಲಶೋತ್ಸವ ಹಾಗೂ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನಗಳನ್ನು ಪಡೆದಿದ್ದಾರೆ. ಉದ್ಯಮ ಕ್ಷೇತ್ರದ ಸಾಧನೆಗಾಗಿ ದೇಶದ ಅತ್ಯುತ್ತಮ ಪ್ರಶಸ್ತಿಗಳಾದ ಸ್ಕಾಚ್ ಆರ್ಡರ್ ಆಫ್ ಮೆರಿಟ್ ಅವಾರ್ಡ್ (Skoch order of merit award) ಮತ್ತು ಇಂಡಿಯಾ 5000 ಬೆಸ್ಟ್ ಎಂ.ಎಸ್.ಎಂ.ಇ (India 5000 best MSME) ಪ್ರಶಸ್ತಿಗಳನ್ನು ಕೂಡ ಪಡೆದಿದ್ದಾರೆ. ಕಡಂಬೆಟ್ಟು ಅನುಸೂಯ ಅವರನ್ನು ವಿವಾಹವಾಗಿ ದೇವಿಕಾ ಮತ್ತು ದೇವಿಪ್ರಸಾದ್ ಎಂಬ ಇಬ್ಬರು ಮಕ್ಕಳನ್ನು ಹೊಂದಿರುವ ಸಚ್ಚಿದಾನಂದ ಶೆಟ್ಟರು ಪ್ರಸ್ತುತ ಮಂಗಳೂರಿನ ಪಡೀಲಿನಲ್ಲಿ ನೆಲೆಸಿದ್ದಾರೆ.
ಇದೇ ಮೇ 22, 2025 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜರಗುವ 50ನೇ ವರ್ಷದ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೊಂಡಾಲ ಸಚ್ಚಿದಾನಂದ ಶೆಟ್ಟರು ಈ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.