ಅಸ್ತ್ರ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಲಂಚು ಲಾಲ್ ಕೆ ಎಸ್ ನಿರ್ಮಿಸಿರುವ, ಅಶ್ವಥ್ ನಿರ್ದೇಶನದ ‘ಮೀರಾ’ ತುಳು ಚಲನಚಿತ್ರ ಮಂಗಳೂರಿನ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಶುಕ್ರವಾರ ಬಿಡುಗಡೆಗೊಂಡಿತು. ಮಾಜಿ ಮೇಯರ್ ಮನೋಜ್ ಕುಮಾರ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಬಿಡುಗಡೆಗೊಳಿಸಿದರು. ತುಳುವಿನಲ್ಲಿ ಬಿಡುಗಡೆಗೊಂಡಿರುವ ಮೀರಾ ಸಿನಿಮಾದಲ್ಲಿ ನಮ್ಮ ಮನೆಯ ಸುತ್ತಮುತ್ತಲಿನ ಕಥೆ ಇದೆ. ಸಿನಿಮಾವನ್ನು ಎಲ್ಲರೂ ನೋಡಿ ಪ್ರೋತ್ಸಾಹಿಸಬೇಕು ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ತುಳುವಿನಲ್ಲಿ ಈಗ ಉತ್ತಮ ಸದಭಿರುಚಿಯ ಸಿನಿಮಾಗಳು ಬರುತ್ತಿದೆ. ಅದರಲ್ಲೂ ಮೀರಾ ಸಿನಿಮಾ ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಮನೆಮಂದಿ ಎಲ್ಲರೂ ಇಂತಹ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸಬೇಕೆಂದರು.ನಟ, ನಿರ್ದೇಶಕ ರಾಹುಲ್ ಮಾತನಾಡಿ, ನಗರದಲ್ಲೀಗ ಫ್ಲೆಕ್ಸ್ ಗಳನ್ನು ಅಳವಡಿಸಲು ಮಹಾನಗರ ಪಾಲಿಕೆ ನಿಷೇಧ ಏರಿರುವುದರಿಂದು ತುಳು ಸಿನಿಮಾ ರಂಗದ ಮೇಲೆ ನೇರ ಪರಿಣಾಮ ಬೀರಿದೆ. ಹೀಗಾಗಿ ತುಳು ಸಿನಿಮಾ ರಂಗದ ನಿರ್ಮಾಪಕರು ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗಿದೆ ಎಂದರು. ನಿರ್ಮಾಪಕ ಲಂಚುಲಾಲ್ ಕೆ ಎಸ್ ಮಾತನಾಡಿ, “ಮೀರಾ” ತುಳು ಸಿನಿಮಾ ಬಿಡುಗಡೆಯ ಮೊದಲು ಪ್ರೀಮಿಯರ್ ಶೋ ಮೂಲಕ ಒಂದು ಕೋಟಿ ರೂಪಾಯಿ ಗಳಿಸಿದೆ ಎಂದರು. ನನ್ನ ನೂರು ಮಂದಿ ಹಿತೈಷಿಗಳು ತಲಾ ಒಂದು ಲಕ್ಷ ರೂಪಾಯಿಯಂತೆ ನೂರು ಟಿಕೇಟುಗಳನ್ನು ಖರೀದಿಸಿದ್ದಾರೆ. ಪ್ರೀಮಿಯರ್ ಶೋ ವೀಕ್ಷಿಸಿದ ಅವರೆಲ್ಲರೂ ಸಿನಿಮಾದ ಕುರಿತು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಸಮಾರಂಭದಲ್ಲಿ ನಟ ವಿಜೆ ವಿನೀತ್ ಕುಮಾರ್, ರಾಹುಲ್ ಅಮೀನ್, ತ್ರಿಶೂಲ್ ಶೆಟ್ಟಿ, ಲಕ್ಷ್ಮೀಶ ಶೆಟ್ಟಿ ಬೈಕಂಪಾಡಿ, ಮೋಹನ್ ಕೆ ಬೋಳಾರ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಹರ್ಷಿತ್ ಸೋಮೇಶ್ವರ, ಪ್ರಕಾಶ್ ಶೆಟ್ಟಿ ಧರ್ಮನಗರ, ಯತೀಶ್ ಪೂಜಾರಿ, ಅನೀಶ್ ಪೂಜಾರಿ, ಅನಿಲ್ ದಾಸ್, ಶರಣ್ ಚಿಲಿಂಬಿ, ಜೆಪಿ ತುಮಿನಾಡ್, ಪುಷ್ಪರಾಜ್ ಬೊಳ್ಳೂರು, ಸಿನಿಮಾದ ನಿರ್ದೇಶಕ ಅಶ್ವಥ್, ನಟಿಯರಾದ ಇತಿಶಾ ಶೆಟ್ಟಿ, ಲಕ್ಷ್ಯ ಎಲ್ ಮೊದಲಾದವರು ಉಪಸ್ಥಿತರಿದ್ದರು. ಯತೀಶ್ ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.