ಉಡುಪಿ : 2024-25ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಉಡುಪಿ ಜಿಲ್ಲೆಯು ಶೇ.93.90ರ ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿದೆ. ಈ ಸಾಧನೆಗೆ ಜಿಲ್ಲಾಡಳಿತದ ಮಾರ್ಗದರ್ಶನ, ಉಪನಿರ್ದೇಶಕರ ನಿರ್ದೇಶನ, ಕಾಲೇಜು ಆಡಳಿತ ಮಂಡಳಿಗಳ ಹಾಗೂ ಪೋಷಕರ ಸಹಕಾರ ಮತ್ತು ಪ್ರಾಂಶುಪಾಲರ ಸಂಘದ ಕಾರ್ಯವೈಖರಿಯು ಕಾರಣೀಭೂತವಾಗಿದೆ. ವಿಜ್ಞಾನ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾದ ಆಸ್ತಿ ಎಸ್ ಶೆಟ್ಟಿ (596), ವಾಣಿಜ್ಯ ವಿಭಾಗದಲ್ಲಿ ಕ್ರೈಸ್ಟ್ಕಿಂಗ್ ಕಾಲೇಜಿನ ಸುಧೀಕ್ಷಾ ಶೆಟ್ಟಿ ಮತ್ತು ವಿದ್ಯೋದಯ ಕಾಲೇಜಿನ ಪ್ರಣವಿ ಎಚ್ ಸುವರ್ಣ(595) ಹಾಗೂ ಕಲಾ ವಿಭಾಗದಲ್ಲಿ ಎಂ.ಜಿ.ಎಂ ಕಾಲೇಜಿನ ದಿವ್ಯ (586) ಅಂಕ ಪಡೆದು ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಗಳಾಗಿ ಹೊರಹೊಮ್ಮಿದ್ದಾರೆ. ವಿಜ್ಞಾನ ವಿಭಾಗದಲ್ಲಿ 595 ಅಂಕಗಳೊಂದಿಗೆ ಎಂ.ಜಿ.ಎಂ ಕಾಲೇಜಿನ ಭೂಮಿಕಾ ಆರ್ ಹೆಗ್ಡೆ, ಕಾರ್ಕಳ ಜ್ಞಾನಸುಧಾದ ಶ್ರೀ ರಕ್ಷಾ ಬಿ. ನಾಯಕ್, ವಿಶ್ವಾಸ್ ಆರ್ ಆತ್ರೇಯಾಸ್ ಮತ್ತು ಉಡುಪಿ ಜ್ಞಾನಸುಧಾದ ಅಪೂರ್ವ್ ವಿ ಕುಮಾರ್ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ, ವಾಣಿಜ್ಯ ವಿಭಾಗದಲ್ಲಿ 594 ಅಂಕಗಳೊಂದಿಗೆ ಕಾರ್ಕಳ ಜ್ಞಾನಸುಧಾ ಕಾಲೇಜಿನ ಸಹನಾ ನಾಯಕ್ ಹಾಗೂ ತನ್ವಿರಾವ್ ಮತ್ತು ತ್ರಿಷಾ ಕಾಲೇಜು ಕಟಪಾಡಿಯ ಪ್ರಣವಿ ಎಚ್ ಸುವರ್ಣ ದ್ವಿತೀಯ ಸ್ಥಾನಿಯಾಗಿ ಹಾಗೂ ಕಲಾ ವಿಭಾಗದಲ್ಲಿ 574 ಅಂಕದೊಂದಿಗೆ ವಂಡ್ಸೆ ಸ.ಪ.ಪೂ.ಕಾಲೇಜಿನ ನವ್ಯ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.

ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಉಡುಪಿ ಜಿಲ್ಲಾ ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂಘದ ಸದಸ್ಯರ ಹಾಗೂ ಪದಾಧಿಕಾರಿಗಳ ಪರವಾಗಿ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಎಂ ಕೊಡವೂರ್ ಇವರು ಅಭಿನಂದಿಸಿ, ಜಿಲ್ಲೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ಸಾಧಕ ವಿದ್ಯಾರ್ಥಿಗಳನ್ನು ಆಗಸ್ಟ್ ತಿಂಗಳಲ್ಲಿ ನಡೆಯುವ ಸಂಘದ ವಾರ್ಷಿಕ ಮಹಾಸಭೆಯಂದು ನಗದು ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿರುತ್ತಾರೆ. ಸಂಘವು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸಂಘಟಿತವಾಗಿ, ಉಪನ್ಯಾಸಕರುಗಳಿಗೆ ವಿಷಯವಾರು ಶೈಕ್ಷಣಿಕ ಕಾರ್ಯಗಾರ, ಜಿಲ್ಲಾ ವಾರ್ಷಿಕ ಕ್ರೀಡಾಕೂಟ ಆಯೋಜನೆ, ವಿವಿಧ ಪ್ರಶ್ನಾಪತ್ರಿಕೆ ತಯಾರಿ ಮತ್ತು ಹಂಚಿಕೆಯ ಜವಾಬ್ದಾರಿ, ಜಿಲ್ಲೆಯ ಪ್ರಾಂಶುಪಾಲರುಗಳಿಗೆ ‘ಪ್ರಸ್ತುತ ಶೈಕ್ಷಣಿಕ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳು’ ಎಂಬ ವಿಷಯದ ಕುರಿತಂತೆ ತಜ್ಞರಿಂದ ಮಾಹಿತಿ ಕಾರ್ಯಗಾರ, ಜಿಲ್ಲೆಯ ಬೋಧಕೇತರ ಕಛೇರಿ ಸಿಬ್ಬಂದಿ ವರ್ಗಕ್ಕೆ ವ್ಯಕ್ತಿತ್ವ-ವಿಕಸನ ಶಿಬಿರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ತಾಂತ್ರಿಕ ಮಾಹಿತಿ ಕಾರ್ಯಗಾರ, ಅಶಕ್ತರಿಗೆ ಆರ್ಥಿಕ ಸಹಾಯ, ವಿಕಲ ಚೇತನ ಮಕ್ಕಳಿಗೆ ಧನ ಸಹಾಯ ಹೀಗೆ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುವುದರ ಮೂಲಕ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳಲ್ಲಿ ಉತ್ತಮ ಶೈಕ್ಷಣಿಕ ಗುಣಮಟ್ಟ ಕಾಯ್ದು, ಉಡುಪಿ ಜಿಲ್ಲೆಯು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮುವಲ್ಲಿ ಮಹತ್ತರವಾದ ಕೊಡುಗೆ ನೀಡಿರುತ್ತದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿಯೂ ಪ್ರಥಮ ಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸಂಘವು ಯೋಜನೆಗಳನ್ನು ರೂಪಿಸಿಕೊಂಡು ಒಗ್ಗಟ್ಟಾಗಿ ಕಾರ್ಯಪ್ರವೃತ್ತವಾಗಲಿದೆ ಎಂದು ಅನುದಾನಿತ ಮತ್ತು ಅನುದಾನ ರಹಿತ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ಶ್ರೀ ದಿನೇಶ್ ಎಂ. ಕೊಡವೂರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.