ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಎಪ್ರಿಲ್ 1 ರಿಂದ 10 ರವರೆಗೆ ಬೇಸಿಗೆ ಕ್ರೀಡಾ ಶಿಬಿರವನ್ನು ಆಯೋಜಿಸಲಾಗಿದೆ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಜ್ಯೋತಿ ಬೆಳಗಿಸಿ ಕ್ರೀಡಾ ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಮಕ್ಕಳಿಗೆ ಕ್ರೀಡಾ ಶಿಬಿರವು ಸ್ವತಂತ್ರವಾಗಿ ಬದುಕುವ ಕಲೆಯನ್ನು ತಿಳಿಸುತ್ತದೆ. ರಜಾದಿನಗಳನ್ನು ಅನವಶ್ಯಕವಾಗಿ ವ್ಯರ್ಥಮಾಡದೆ ಶಿಬಿರದಲ್ಲಿ ಭಾಗವಹಿಸಿ ನಿಮ್ಮ ಕೌಶಲ್ಯಗಳನ್ನು ವೃದ್ಧಿಸಿಕೊಳ್ಳಲು ಪ್ರಾಮುಖ್ಯತೆಯನ್ನು ನೀಡಿದ್ದೀರಿ.

ಇದು ನಿಮ್ಮ ಮುಂದಿನ ಯಶಸ್ಸಿಗೆ ನೆರವಾಗಲಿದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಾವು ಗೆಲುವಿನ ಚಿಂತನೆಯನ್ನು ಮಾಡುವುದರ ಬದಲು ಸೂಕ್ತವಾದ ಮಾರ್ಗದರ್ಶನದಲ್ಲಿ ತರಬೇತಿಯನ್ನು ಪಡೆದು ಪ್ರಯತ್ನಿಸಿದರೆ ಜಯವೇ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಕ್ರೀಡಾ ಶಿಬಿರವು ಎಲ್ಲರಲ್ಲೂ ಏಕತೆ, ಶಿಸ್ತು, ಜೀವನ ಮೌಲ್ಯಗಳನ್ನು ಬೆಳೆಸುತ್ತದೆ ಎಂದರು. ಹತ್ತು ದಿನಗಳ ಶಿಬಿರದಲ್ಲಿ ವಾಲಿಬಾಲ್, ಬಾಸ್ಕೆಟ್ ಬಾಲ್, ಫುಟ್ಬಾಲ್, ಹ್ಯಾಂಡ್ಬಾಲ್, ತ್ರೋಬಾಲ್ ತರಬೇತಿಯನ್ನು ನುರಿತ ಕೋಚ್ಗಳಿಂದ ನೀಡಲಾಗುವುದು. ಕಾರ್ಯಕ್ರಮದಲ್ಲಿ ತರಬೇತುದಾರರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.