ಸಾಹಿತ್ಯ ಕ್ಷೇತ್ರದಲ್ಲಿ ಒಂದು ಕಾಲದಲ್ಲಿ ಮೂಲೆ ಗುಂಪಾಗಿದ್ದ ಚುಟುಕು ಸಾಹಿತ್ಯ ಈಗ ಬಹಳಷ್ಟು ಪ್ರತೀತಿಯನ್ನು ಪಡೆಯುತ್ತಾ ಇದೆ. ಹಿಡಿಯಲ್ಲಿ ಇಡಿಯನ್ನು ತೋರಿಸುವ ಶಕ್ತಿ ಚುಟುಕಿಗಿರುವುದೇ ಇದಕ್ಕೆ ಕಾರಣವಾಗಿದೆ. ಸತ್ವ ತತ್ವಗಳನ್ನು ಒಳಗೊಂಡ ಧ್ವನಿ ಪೂರ್ಣವಾದ ಗಟ್ಟಿ ಚುಟುಕುಗಳಿಗೆ ಓದುಗರ ಮನದಲ್ಲಿ ಉಳಿಯುವ ತಾಕತ್ತು ಯಾವತ್ತಿಗೂ ಇರುತ್ತದೆ ಎಂದು ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದ ಶಿಕ್ಷಕ, ತುಳು, ಕನ್ನಡ ಕವಿ ಹರೀಶ ಸುಲಾಯ ಒಡ್ಡಂಬೆಟ್ಟು ಅಭಿಪ್ರಾಯ ಪಟ್ಟರು.

ಕಾಸರಗೋಡು ಜಿಲ್ಲಾ ಏಳನೇ ಚುಟುಕು ಸಾಹಿತ್ಯ ಸಮ್ಮೇಳನ ಮತ್ತು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಬೆಳ್ಳಿ ಹಬ್ಬದ ಸಂಭ್ರಮವು ಮಾರ್ಚ್ 27 ಗುರುವಾರದಂದು ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರುವ ಮೂಲಕ ಪ್ರಾರಂಭಗೊಂಡು ಸುಮಾರು 108 ಕವಿಗಳ ಚುಟುಕು ಕವಿಗೋಷ್ಠಿ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹು ವಿಜೃಂಭಣೆಯಿಂದ ನಡೆಯಿತು. ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಂಚಾಲಕ ಡಾ| ಎಂಜಿಆರ್ ಅರಸ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆಗೊಳಿಸಿದರು. ಕಾಸರಗೋಡು ಗಡಿನಾಡು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಜಯಪ್ರಕಾಶ್ ನಾರಾಯಣ ತೋಟ್ಟೆ ತೋಡಿ, ಕಾಸರಗೋಡು ನಗರಸಭೆಯ ವಾರ್ಡ್ ಮೆಂಬರ್ ಬಿ. ಶಾರದ, ದಯಾಸಾಗರ್ ಚೌಟ ಉಪಸ್ಥಿತರಿದ್ದರು.
ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿಗಳೊಂದಿಗೆ ಅತಿಥಿಗಳನ್ನು ಸ್ವಾಗತಿಸಿ, ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೋಪಾಲಕೃಷ್ಣ ಶಾಸ್ತ್ರೀಯವರು ಧನ್ಯವಾದ ಸಮರ್ಪಿಸಿದರು. ಪತ್ರಕರ್ತ ಜಯ ಮಣಿಯಂಪಾರೆ ಕಾರ್ಯಕ್ರಮ ನಿರೂಪಣೆಸಿದರು.