ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟರ್ಯಾಕ್ಟ್ ಕ್ಲಬ್ ಮಂಗಳೂರು ಸಿಟಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಪ್ರಾಯೋಜಿಸುತ್ತಿರುವ ವಾರ್ಷಿಕ ವಂದನಾ ಪ್ರಶಸ್ತಿ 2025 ಕ್ಕೆ ಉದ್ಯಮಿ ಡಾ| ಕೆ. ಪ್ರಕಾಶ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಡಾ| ಕೆ. ಪ್ರಕಾಶ್ ಶೆಟ್ಟಿ ಅವರು ಹೋಟೆಲ್ ಉದ್ಯಮದಲ್ಲಿ ಸಲ್ಲಿಸಿದ ಸುದೀರ್ಘ ಅನುಪಮ ಸೇವೆ ಹಾಗೂ ಅಮೂಲ್ಯ ಕೊಡುಗೆ ಮತ್ತು ಗಣನೀಯ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಮಾರ್ಚ್ 28ರಂದು ರಾತ್ರಿ 8:00 ಗಂಟೆಗೆ ನಗರದ ಹೋಟೆಲ್ ಮೋತಿ ಮಹಲ್ ಸಭಾಂಗಣದಲ್ಲಿ ಜರಗುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಪ್ರಶಸ್ತಿ ಆಯ್ಕೆ ಸಮಿತಿಯ ಸಭಾಪತಿ ಡಾ. ದೇವದಾಸ್ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಈ ಪ್ರಶಸ್ತಿಯು ಪ್ರಶಸ್ತಿ ಫಲಕ, ಪ್ರಶಸ್ತಿ ಪ್ರಮಾಣ ಪತ್ರ ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಪ್ರಶಸ್ತಿ ಪ್ರಧಾನ ಮಾಡುವರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಬ್ರಿಯಾನ್ ಪಿಂಟೋ ಅಧ್ಯಕ್ಷತೆ ವಹಿಸುವರು. ರೋಟರಿ ಜಿಲ್ಲಾ 3181ರ ಸಹಾಯಕ ಗವರ್ನರ್ ಕೆ.ಎಂ ಹೆಗ್ಡೆ ರೋಟರ್ಯಾಕ್ಟ್ ಜಿಲ್ಲಾ ಪ್ರತಿನಿಧಿ ಸಂಜಯ್ ಆರ್. ಪಾಲ್ಗೊಳ್ಳಲಿರುವರು ಎಂದರು.
ರೋಟರಿ ಮತ್ತು ರೋಟರ್ಯಾಕ್ಟ್ ಸಂಸ್ಥೆಯ ಪ್ರತಿಷ್ಠಿತ ವಂದನಾ ಪ್ರಶಸ್ತಿಗೆ ಪ್ರತಿ ವರ್ಷ ಕ್ರೀಡೆ, ವಾಣಿಜ್ಯೋದ್ಯಮ, ಶಿಕ್ಷಣ, ಕಲೆ, ಸಂಗೀತ, ಸಾಹಿತ್ಯ, ವಿಜ್ಞಾನ, ವೃತ್ತಿ ಸೇವೆ ಮತ್ತು ಸಮಾಜ ಸೇವೆ ಕ್ಷೇತ್ರದಲ್ಲಿ ಸಲ್ಲಿಸಿದ ಗಮನಾರ್ಹ ಸಾಧನೆಯನ್ನು ಪರಿಗಣಿಸಿ ಸಾಧಕರನ್ನು ಆಯ್ಕೆ ಮಾಡಲಾಗುವುದು. ರೋಟರಿ ಸಂಸ್ಥೆಯ ವೃತ್ತಿಪರ ಸೇವೆ ಯೋಜನೆಯ ಅಂಗವಾಗಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದರು. ರೋಟರಿ ಸಂಸ್ಥೆಯ ಅಧ್ಯಕ್ಷ ಬ್ರಿಯಾನ್ ಪಿಂಟೋ, ರೋಟರ್ಯಾಕ್ಟ್ ಮಂಗಳೂರು ಸಿಟಿಯ ಅಧ್ಯಕ್ಷ ಬಿದ್ದಪ್ಪ ಬಿ. ಎ. ಮತ್ತು ಮಾಧ್ಯಮ ಸಲಹೆಗಾರ ಎಂ. ಎ ಮಲ್ಯ ಅಕ್ಷಯ ಉಪಸ್ಥಿತರಿದ್ದರು.