ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಬಂಟರ ಸಂಘ ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದೊಂದಿಗೆ ಮಹಿಳಾ ಬಂಟರ ವಿಭಾಗದ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ಮಾರ್ಚ್ 11 ರಂದು ಮಹಿಳಾ ದಿನಾಚರಣೆ, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ಪುತ್ತೂರು ಎಂ ಸುಂದರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು.
ಮಂಗಳೂರು ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಉಪನ್ಯಾಸಕಿ ಮಣಿ ಎಂ ರೈ ಅವರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತುಳುನಾಡಿನ ಬಂಟ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಗಳಾದ ಅನೇಕ ಉದಾಹರಣೆಗಳಿವೆ. ಬಂಟ ಮಹಿಳೆಯರು ಕೃಷಿ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿ ಬಂಟ ಸಮಾಜಕ್ಕೆ ಗೌರವವನ್ನು ತಂದಿದ್ದಾರೆ ಎಂದು ಹೇಳಿದರು. ಪುತ್ತೂರು ಬಂಟ ಸಮಾಜಕ್ಕೆ ಬಹುದೊಡ್ಡ ಹೆಸರನ್ನು ತಂದಿದ್ದ ಊರಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ಮಹಿಳಾ ಬಂಟರ ನೇತೃತ್ವದ ಮಹಿಳಾ ದಿನಾಚರಣೆ ಯಶಸ್ವಿಯಾಗಿ ನಡೆದಿದೆ. ಮಹಿಳಾ ಬಂಟರ ವಿಭಾಗದಿಂದ ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಾಜಮುಖಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲರೂ ಸಹಕಾರವನ್ನು ನೀಡುವಂತೆ ವಿನಂತಿಸಿದರು. ಅಭಿಮತ ಟಿವಿ ಆಡಳಿತ ಪಾಲುದಾರರಾದ ಡಾ| ಮಮತಾ ಪಿ ಶೆಟ್ಟಿಯವರು ತಮ್ಮ ಆಶಯ ಭಾಷಣದಲ್ಲಿ ಭಾರತ ದೇಶದಲ್ಲಿ ಹೆಣ್ಣಿಗೆ ಪೂಜ್ಯ ಸ್ಥಾನವಿದೆ. ಸಮಾಜದಲ್ಲಿ ಹೆಣ್ಣು ಅಬಲೆಯಲ್ಲ, ಸಾಧಿಸುವ ಛಲ ಮುಖ್ಯವಾಗಿದ್ದು ಯಾವುದೇ ಕೊಂಕು ನುಡಿಗಳು ಬಂದರೂ ಎದೆಗುಂದದೆ ಸಮಾಜದಲ್ಲಿ ಸಾಧಿಸುವ ಛಲವನ್ನು ಮಹಿಳೆಯರು ಹೊಂದಬೇಕು ಎಂದು ಹೇಳಿದರು.
ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಮಾತನಾಡಿ, ಬಂಟ ಸಮಾಜದಲ್ಲಿ ಮಹಿಳೆಯರಿಗೆ ವಿಶೇಷವಾದ ಪ್ರಾತಿನಿಧ್ಯವಿದ್ದು, ಬಂಟ ಮಹಿಳೆಯರಲ್ಲಿ ವಿಶೇಷವಾದ ಪ್ರತಿಭೆಯಿದೆ. ಬಂಟ ಸಮಾಜದ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದಾರೆ. ಆ ಮೂಲಕ ಬಂಟ ಸಮಾಜಕ್ಕೆ ವಿಶೇಷ ಶಕ್ತಿಯನ್ನು ಮಹಿಳೆಯರು ತುಂಬಿದ್ದಾರೆ ಎಂದರು. ಸಂಘಟನೆಯ ಮೂಲಕ ತಾಲೂಕು ಮಹಿಳಾ ಬಂಟರ ವಿಭಾಗದ ಸ್ಥಾಪಕಾಧ್ಯಕ್ಷೆ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ ಹಾಗೂ ಆ ಬಳಿಕದ ಎಲ್ಲಾ ಅಧ್ಯಕ್ಷರು ಮತ್ತು ತಂಡ ಉತ್ತಮ ಕೆಲಸವನ್ನು ಮಾಡಿದೆ. ಪ್ರಸ್ತುತ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ, ಪ್ರಧಾನ ಕಾರ್ಯದರ್ಶಿ ಕುಸುಮ ಶೆಟ್ಟಿ ಹಾಗೂ ಕೋಶಾಧಿಕಾರಿ ಅರುಣಾ ಡಿ ರೈಯವರ ನೇತೃತ್ವದ ತಂಡ ಉತ್ತಮವಾದ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಇದರ ಪುತ್ತೂರು ತಾಲೂಕು ಸಂಚಾಲಕ ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ, ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹಾಗೂ ಗೌರವ ಉಪಸ್ಥಿತರಾದ ಮಹಿಳಾ ಬಂಟರ ವಿಭಾಗದ ವಿಶೇಷ ಆಹ್ವಾನಿತರಾದ ಸುಮಾ ಅಶೋಕ್ ಕುಮಾರ್ ರೈ, ಮಹಿಳಾ ಬಂಟರ ವಿಭಾಗದ ಮಾಜಿ ಅಧ್ಯಕ್ಷೆಯರುಗಳಾದ ಕುಮದಾ ಎಲ್ ಎನ್ ಶೆಟ್ಟಿ, ಮೀರಾ ಭಾಸ್ಕರ್ ರೈ, ಸಬಿತಾ ಭಂಡಾರಿ, ವಿಶೇಷ ಆಹ್ವಾನಿತರಾದ ಮಾಲಿನಿ ಮುತ್ತು ಶೆಟ್ಟಿ, ಯುವ ಬಂಟರ ವಿಭಾಗದ ಅಧ್ಯಕ್ಷ ಹರ್ಷಕುಮಾರ್ ರೈ ಮಾಡಾವು, ವಿದ್ಯಾರ್ಥಿ ಬಂಟರ ವಿಭಾಗದ ಅಧ್ಯಕ್ಷ ಪವನ್ ಶೆಟ್ಟಿ ಕಂಬಳದಡ್ಡರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪೂರ್ವಾಹ್ನ ಪುತ್ತೂರು ಮಹಿಳಾ ಬಂಟರ ವಿಭಾಗದ ಭಜನಾ ತಂಡದ ಉದ್ಘಾಟನೆ ಮತ್ತು ಭಜನಾ ಕಾರ್ಯಕ್ರಮ ಸೌಪರ್ಣಿಕಾ ಗುರುರಾಜ್ ಈಶ್ವರ ಮಂಗಳ ಇವರಿಂದ ‘ಗಣಪತಿ ತಾಳಂ’ ಜಾನಪದ ನೃತ್ಯ ನಡೆಯಿತು. ಮಹಿಳಾ ಬಂಟರ ವಿಭಾಗದ ಸದಸ್ಯರಿಂದ ನೃತ್ಯ ವೈಭವ, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತ ಪೂರ್ಣಿಮಾ ಯತೀಶ್ ರೈ ಚೆಲ್ಯಡ್ಕ ನುಲಿಯಾಲು ಇವರ ನಿರ್ದೇಶನದಲ್ಲಿ ಮಹಿಳಾ ಬಂಟರ ವಿಭಾಗ ಪುತ್ತೂರು ಹಾಗೂ ಅತಿಥಿ ಕಲಾವಿದೆಯರ ಕೂಡುವಿಕೆಯಲ್ಲಿ ಜರುಗಿದ ‘ಮಹಿಷಮರ್ದಿನಿ’ ಯಕ್ಷಗಾನ ಮನರಂಜಿಸಿತು. ಸಾಂಸ್ಕೃತಿಕ ವಿಭಾಗದ ಹರಿಣಾಕ್ಷಿ ಶೆಟ್ಟಿ ಮತ್ತು ಮಾಧವಿ ಮನೋಹರ್ ರೈ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಉಪಹಾರ ಮತ್ತು ಮದ್ಯಾಹ್ನ ಸಹಭೋಜನ ನಡೆಯಿತು.