ಮುಂಬೈ ಮಹಾನಗರದ ಪ್ರತಿಷ್ಠಿತ ಸಾಮಾಜಿಕ ಸಂಸ್ಥೆಗಳಲ್ಲಿ ಒಂದಾದ ಬೊಂಬೇ ಬಂಟ್ಸ್ ಅಸೋಸಿಯೇಷನ್ ನ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಸಮಾಜ ಸೇವಕಿ ಶಾಂತಾ ನಾರಾಯಣ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಾಜಮುಖಿ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಶಾಂತಾ ಶೆಟ್ಟಿಯವರು ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ ಕೋಪರ್ ನಲ್ಲಿ ಸತತ ಎರಡು ಅವಧಿಗೆ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಅಲ್ಲದೇ ಕನ್ನಡ ವೆಲ್ಫೇರ್ ಸೊಸೈಟಿಯ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಅತ್ಯಧಿಕ ಧನ ಸಂಗ್ರಹ ಮಾಡಿ ಚಿನ್ನದ ಪದಕವನ್ನು ಪಡೆದಿದ್ದಾರೆ.ಬಂಟರ ಸಂಘ ಕುರ್ಲಾ ಭಾಂಡೂಪ್ ಪ್ರಾದೇಶಿಕ ವಿಭಾಗದ ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷೆಯಾಗಿ ಎರಡು ಬಾರಿ ಚಿನ್ನದ ಪದಕವನ್ನು ಪಡೆದಿದ್ದಾರೆ. ಪ್ರಸ್ತುತ ಶೈಕ್ಷಣಿಕ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಬಂಟರ ಸಂಘ ಮುಂಬಯಿಯ ಬೊರಿವಿಲಿಯಲ್ಲಿ ನಿರ್ಮಾಣಗೊಂಡಿರುವ ಕಾಲೇಜಿಗೆ 1 ಲಕ್ಷ ದೇಣಿಗೆಯನ್ನು ನೀಡಿ ಅಂದಿನ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಅವರಿಂದ ಗೌರವವನ್ನು ಸ್ವೀಕರಿಸಿದ್ದಾರೆ.

ಉತ್ತಮ ಕಲಾವಿದೆಯಾಗಿಯೂ ಗುರುತಿಸಿಕೊಂಡಿರುವ ಶಾಂತಾ ನಾರಾಯಣ ಶೆಟ್ಟಿ ಅವರು ಯಕ್ಷಗಾನ, ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದಾರೆ. ಹಲವಾರು ಸನ್ಮಾನ ಬಿರುದುಗಳನ್ನು ಪಡೆದಿರುವ ಇವರು ಇತ್ತೀಚಿಗೆ ಕನ್ನಡ ಸೇವಾ ಸಂಘ ಪೊವಾಯಿ ‘ಆದರ್ಶ ಮಹಿಳೆ’ ಎಂಬ ಬಿರುದನ್ನು ನೀಡಿ ಸನ್ಮಾನಿಸಿದ್ದಾರೆ. ರಂಗಭೂಮಿಯ ಲೇಖಕ, ನಿರ್ದೇಶಕ ನಾರಾಯಣ ಶೆಟ್ಟಿ ನಂದಳಿಕೆಯವರ ಪತ್ನಿಯಾಗಿರುವ ಶಾಂತಾ ಶೆಟ್ಟಿ ಅವರು ಪುತ್ರಿ ಡಾ. ಪಲ್ಲವಿ, ಅಳಿಯ ರವೀಶ್, ಮೊಮ್ಮಕ್ಕಳಾದ ಪೃಥ್ವಿಕಾ ಮತ್ತು ಧನುಷ್ ಅವರೊಂದಿಗೆ ಸುಖಮಯ ಜೀವನ ನಡೆಸುತ್ತಿದ್ದಾರೆ.