ಸದಾ ಭಿನ್ನ ವಿಭಿನ್ನ ಸೇವಾ ಚಟುವಟಿಕೆಗಳನ್ನು ಸಂಘಟಿಸುತ್ತಾ, ಅಶಕ್ತರಿಗೆ ನೆರವಾಗುತ್ತಾ ಸೇವೆಯೇ ಪರಮ ಧರ್ಮ ಎಂದು ಪ್ರತಿವಾದಿಸುತ್ತಾ ಮುನ್ನಡೆಯುತ್ತಿರುವ ಶಿವಾಯ ಫೌಂಡೇಶನ್ ಸಂಸ್ಥೆ ವತಿಯಿಂದ ಪಂಜ ನಲ್ಕಗುತ್ತು ದಾಮೋದರ್ ಶೆಟ್ಟಿಯವರ ರಾಮ್ ಪಂಜಾಬ್ ಹೋಟೆಲ್ ಕಾಟನ್ ಗ್ರೀನ್ ಪರಿಸರದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವು ಫೆಬ್ರವರಿ 16ರಂದು ನಡೆಯಿತು. ರಕ್ತದಾನ ಶಿಬಿರದಲ್ಲಿ ಶಿವಾಯ ಫೌಂಡೇಶನ್ ಸದಸ್ಯರು, ಹಿತೈಷಿಗಳು, ಮುಂಬಯಿ ಮತ್ತು ನವಿಮುಂಬಯಿಯ ಹಲವಾರು ಮಂದಿ ಪಾಲ್ಗೊಂಡಿದ್ದರು.
ಮುಖ್ಯ ಅತಿಥಿಯಾಗಿದ್ದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ, ಶಿವಾಯ ಸಂಸ್ಥೆಯ ಹಿತೈಷಿ ಶ್ಯಾಮ್ ಎನ್. ಶೆಟ್ಟಿ ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ, ಶಿವಾಯದ ಕೆಲಸವನ್ನು ನಾನು ತುಂಬಾ ಹತ್ತಿರದಿಂದ ನೋಡಿದವನು. ಈ ಸಂಸ್ಥೆಯ ಯುವಕ, ಯುವತಿಯರ ಸೇವಾ ಮನೋಭಾವಕ್ಕೆ ಬೆಲೆ ಕಟ್ಟಲಾಗದು. ಶಿವಾಯದ ಕೆಲಸದ ವೇಗ ನೋಡಿದರೆ ಸಂಸ್ಥೆ ಅತೀ ಎತ್ತರದ ಸ್ಥಾನಕ್ಕೆ ಏರುವ ದಿನ ದೂರವಿಲ್ಲ ಎಂದರು. ಮುಖ್ಯ ಅತಿಥಿಯಾಗಿ ಕಿಶನ್ ಗುರಾವ್, ಆನಂದ್ ರಾಯ್ ಮಾನೆ ಉಪಸ್ಥಿತರಿದ್ದರು.
ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ವೈದ್ಯಕೀಯ ಸಲಹೆಗಾರ್ತಿ ಡಾ. ಸ್ವರ್ಣಾ ಶೆಟ್ಟಿ ನಿರೂಪಿಸಿ, ಪ್ರಶಾಂತ್ ಶೆಟ್ಟಿ ಪಂಜ ವಂದಿಸಿದರು. ಮಧುಸೂದನ್ ಶೆಟ್ಟಿ ಹಿರಿಯಡ್ಕ, ಲೀಲಾಧರ್ ಶೆಟ್ಟಿಗಾರ್ ಮತ್ತು ಶಕುಂತಲಾ ಲೀಲಾಧರ ದಂಪತಿ, ಪ್ರಶಾಂತ್ ಎ. ಶೆಟ್ಟಿ, ರಾಜೇಶ್ ಶೆಟ್ಟಿ ಕಟಪಾಡಿ, ಪ್ರಶಾಂತ್ ಪೂಜಾರಿ, ಅಶೋಕ್ ಶೆಟ್ಟಿ ಮುಟ್ಲುಪಾಡಿ, ಶ್ವೇತಾ ಶೆಟ್ಟಿ ಆವರಾಲು ಕಂಕಣಗುತ್ತು, ಜ್ಯೋತಿ ಶೆಟ್ಟಿ, ಪ್ರಭಾವತಿ ಶೆಟ್ಟಿ, ಸಂಗೀತಾ ಶೆಟ್ಟಿ, ಪ್ರಿಯಾ ಶೆಟ್ಟಿ, ಪ್ರೀತಿ ಶೆಟ್ಟಿ ಮೊದಲಾದವರು ಸಹಕರಿಸಿದರು.