ಕಾಪು ಮಾರಿಯಮ್ಮ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆಯನ್ನು ಸಮಸ್ತ ಬಂಟರ ವತಿಯಿಂದ ನೀಡಲಾಗುವುದು ಎಂದು ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು. ಮುಂಬಯಿಯ ಜಾಗತಿಕ ಬಂಟರ ಸಂಘದ ಅನೇಕ ಪದಾಧಿಕಾರಿಗಳು, ದಾನಿಗಳು ಮಾರಿಯಮ್ಮ ದೇವಸ್ಥಾನಕ್ಕೆ ಅನೇಕ ದೇಣಿಗೆ ಕೊಡುಗೆಗಳನ್ನು ನೀಡಿದ್ದಾರೆ ಎನ್ನಲು ಖುಷಿಯಾಗುತ್ತದೆ ಎಂದರು.

ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷ ಐಕಳ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮಾರ್ಚ್ 25 ರಿಂದ 9 ದಿನಗಳ ಕಾಲ ವೈಭವದ ಬ್ರಹ್ಮಕಲಶೋತ್ಸವ ನಡೆಯಲಿದೆ. ಅನೇಕ ದೇವಸ್ಥಾನಗಳ ಬ್ರಹ್ಮಕಲಶೋತ್ಸವಗಳಲ್ಲಿ ತೊಡಗಿಸಿಕೊಂಡ ಐಕಳ ಹರೀಶ ಶೆಟ್ಟರ ಮುತುವರ್ಜಿಯಲ್ಲಿ ಹೊರೆಕಾಣಿಕೆ ಬಂಟರ ಸಂಘಗಳ ಒಕ್ಕೂಟದಿಂದ ಬರಲಿದೆ. ಮುಂಬಯಿ ಹಾಗೂ ನಾನಾ ಕಡೆಗಳ ಊರ ದಾನಿಗಳ ಸಹಕಾರದಿಂದ 99 ಕೋಟಿ ರೂಪಾಯಿಯಲ್ಲಿ ದೇಗುಲ ನಿರ್ಮಾಣ ಅತ್ಯಂತ ಸುಂದರವಾಗಿ ಆಗಿದೆ. ಮೂಲ್ಕಿಯ ಒಕ್ಕೂಟದ ಕಚೇರಿಗೆ ಹೊರಕಾಣಿಕೆ ನೀಡುವವರು ತಲುಪಿಸಬಹುದು ಎಂದು ಹೇಳಿದರು.
ಫೆಬ್ರವರಿ 22ಕ್ಕೆ ದಕ್ಷಿಣ ಕನ್ನಡದಿಂದ ಹಾಗೂ 23ಕ್ಕೆ ಉಡುಪಿ ಜಿಲ್ಲೆಯಿಂದ ಹೊರ ಕಾಣಿಕೆ ಬರಲಿದೆ. ಎಲ್ಲಾ ಬಂಟ ಸಂಘಗಳ ಅಧ್ಯಕ್ಷರು ಪದಾಧಿಕಾರಿಗಳನ್ನು ಸಂಪರ್ಕಿಸಿ ಸಂಘಟಿಸಲಾಗಿದೆ ಎಂದು ಮಾಹಿತಿ ನೀಡಿದರು. 99,999 ಭಕ್ತರು ಸೇರಿ ನವದುರ್ಗಾ ಲೇಖನದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ಎಲ್ಲಾ ಬಂಟರ ಸಂಘಗಳನ್ನು ಸಂಪರ್ಕಿಸಲಾಗಿದೆ. ಸ್ವಸ್ತಿಕ್ ಬ್ರಾಂಡ್ ಅಕ್ಕಿಯನ್ನೇ ನೀಡಬೇಕು ಎಂದು ವಿನಂತಿಸಲಾಗಿದೆ. ಹೆಚ್ಚು ಸಮಯ ಉಳಿಯುವ ತರಕಾರಿಗಳನ್ನು ನೀಡಬೇಕು. ತೆಂಗಿನಕಾಯಿ ಕೂಡ ಇತ್ಯಾದಿ ಯಾವ ರೀತಿಯಲ್ಲಿ ಹೊರೆಕಾಣಿಕೆ ನೀಡಬೇಕು ಎಂದು ಮಾಹಿತಿ ನೀಡಲಾಗಿದೆ. 150ಕ್ಕೂ ಹೆಚ್ಚಿನ ಬಂಟರ ಸಂಘಗಳು ಹೊರಕಾಣಿಕೆಯಲ್ಲಿ ಭಾಗವಹಿಸಲಿವೆ ಎಂದು ಚಂದ್ರಹಾಸ ಶೆಟ್ಟಿ ಮಾಹಿತಿ ನೀಡಿದರು. ಅನ್ನಸಂತರ್ಪಣೆಗೆ ಪಾತ್ರೆಗಳನ್ನೂ ನೀಡಬಹುದು ಎಂದು ಮಾಹಿತಿ ನೀಡಿದರು.
ಜಾಗತಿಕ ಬಂಟರ ಸಂಘದ ಕಾರ್ಯದರ್ಶಿ ಇಂದ್ರಾಳಿ ಜಯಕರ ಶೆಟ್ಟಿ, ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಶಶಿಧರ ಶೆಟ್ಟಿ, ಹೊರೆಕಾಣಿಕೆ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೌರವಾಧ್ಯಕ್ಷ ಸಂತೋಷ್ ಕುಮಾರ್ ಹೆಗ್ಡೆ, ಮಾಜಿ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ, ಕೋಶಾಧಿಕಾರಿ ಸ್ವರಾಜ್ ಶೆಟ್ಟಿ, ಕಾರ್ಯದರ್ಶಿ ಸಾಯಿನಾಥ ಶೆಟ್ಟಿ, ಬಾಳ ಜಗನ್ನಾಥ ಶೆಟ್ಟಿ, ಕೊಲ್ಲಾಡಿ ಬಾಲಕೃಷ್ಣ ಶೆಟ್ಟಿ ಮತ್ತಿತರು ಉಪಸ್ಥಿತರಿದ್ದರು.








































































































