ತುಳುನಾಡಿನ ಕಲೆ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ತ್ರಿರಂಗ ಸಂಗಮದ ಪಾತ್ರ ಬಹಳವಿದೆ. ಇದರ ರೂವಾರಿಗಳಾದ ಕಲಾ ಸಂಘಟಕರಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರು ನಿರಂತರ ಕಲೆ ಹಾಗೂ ಕಲಾವಿದರಿಗಾಗಿ ವೇದಿಕೆ ಒದಗಿಸುವುದರೊಂದಿಗೆ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿದ್ದಾರೆ. ಇಂತಹ ಕಲಾವಿದರಿಗೆ ನಾವು ಪ್ರೋತ್ಸಾಹ ನೀಡಬೇಕು. ಇವರಿಂದ ಕಲಾ ಸೇವೆ ನಿರಂತರ ನಡೆಯುತ್ತಿರಲಿ ಎಂದು ಉದ್ಯಮಿ ವೆಲ್ಕಂ ಪ್ಯಾಕೇಜ್ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕ ರವೀಂದ್ರನಾಥ್ ಭಂಡಾರಿ ತಿಳಿಸಿದರು.
ಕುರ್ಲಾ ಪೂರ್ವಾದ ಬಂಟರ ಭವನದಲ್ಲಿ ಫೆಬ್ರವರಿ 9ರಂದು ಜರಗಿದ ಮುಂಬೈಯ ಕಲಾ ಸಂಘಟಕರಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ, ನವೀನ್ ಶೆಟ್ಟಿ ಇನ್ನ ಬಾಳಿಕೆ ನೇತೃತ್ವದ ತ್ರಿರಂಗ ಸಂಗಮ ಮುಂಬೈ ಇದರ ಮೂರನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಸ್ಕಾನ್ ಮಂಗಳೂರು ಅಧ್ಯಕ್ಷ ಗುಣಕರ ರಾಮದಾಸ ಪ್ರಭು ದ್ವೀಪ ಪ್ರಜ್ವಲಿಸಿ ಆಶೀರ್ವಚಿಸಿ, ನಮ್ಮ ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಸಂರಕ್ಷಣೆ ಅಗತ್ಯವಾಗಿದೆ. ನಾವೆಷ್ಟು ಶ್ರೀಮಂತಿಕೆಯಲ್ಲಿದ್ದರೂ ನಮ್ಮ ಧರ್ಮ ಕಲೆ ಸಂಸ್ಕೃತಿಯನ್ನು ಎಂದೂ ಮರೆಯಬಾರದು, ನಮ್ಮ ಸನಾತನ ಧರ್ಮ, ದೇವರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಕಲೆಯಿಂದ ಸಾಧ್ಯವಿದೆ. ಆದ್ದರಿಂದ ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಉಳಿಸಿ ಬೆಳೆಸೋಣ ಎಂದರು.
ಖ್ಯಾತ ಜ್ಯೋತಿಷಿ, ವಾಸ್ತುತಜ್ಞ ಅಶೋಕ್ ಪುರೋಹಿತ್ ಅವರು ಆಶೀರ್ವಚನ ನೀಡಿದರು. ಪ್ರಧಾನ ಅತಿಥಿಯಾಗಿದ್ದ ಥಾಣೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ವೇಣುಗೋಪಾಲ್ ಎಲ್. ಶೆಟ್ಟಿ ಮಾತನಾಡಿ, ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಮುಂಬೈಗರ ಪಾತ್ರ ಬಹಳವಿದೆ ಎಂದರು.
ಮುಖ್ಯ ಅತಿಥಿಗಳಾಗಿ ಅಶೋಕ್ ಇಂಡಸ್ಟ್ರೀಸ್ ವಸಾಯಿ ಆಡಳಿತ ನಿರ್ದೇಶಕ ಅಶೋಕ್ ಶೆಟ್ಟಿ ಕಲ್ಪವೃಕ್ಷ, ಉದ್ಯಮಿ ಕೃಷ್ಣ ಪ್ಯಾಲೇಸ್ ನ ಆಡಳಿತ ನಿರ್ದೇಶಕ ಕೃಷ್ಣ ವೈ ಶೆಟ್ಟಿ, ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪಕಾಧ್ಯಕ್ಷ ಜಯಕೃಷ್ಣ ಶೆಟ್ಟಿ, ಬಿಲ್ಲವರ ಎಸೋಸಿಯೇಷನ್ ಮುಂಬೈ ಮಾಜಿ ಅಧ್ಯಕ್ಷ ಎಲ್. ವಿ. ಅಮೀನ್, ಜವಾಬ್ ಅಧ್ಯಕ್ಷ ರಾಜೇಶ್ ಶೆಟ್ಟಿ, ಉದ್ಯಮಿ ಎರ್ಮಾಳ್ ಹರೀಶ್ ಶೆಟ್ಟಿ, ಥಾಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಎಂ. ಶೆಟ್ಟಿ, ಬಂಟರ ಸಂಘ ಮುಂಬೈ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ರವಿರಾಜ್ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಷನ್ ಗೌರವ ಪ್ರಧಾನ ಕಾರ್ಯದರ್ಶಿ ಕಿಶೋರ್ ಶೆಟ್ಟಿ ಐಕಳ, ಬಂಟ್ಸ್ ಫಾರಂ ಮೀರಾ ಭಾಯಂದರ್ ಅಧ್ಯಕ್ಷ ಉದಯ ಶೆಟ್ಟಿ ಮಲಾರು ಬೀಡು, ಜಿ.ಎಸ್. ಶೆಟ್ಟಿ ಇಂಟರ್ ನ್ಯಾಷನಲ್ ಸ್ಕೂಲ್ ಭಾಂಡೂಪ್ ಸಂಸ್ಥಾಪಕ ಶಂಕರ್ ಶೆಟ್ಟಿ ಶುಭ ಹಾರೈಸಿದರು.
ಸಮಾರಂಭದ ಸಾಂಸ್ಕೃತಿಕ ವೇದಿಕೆಗೆ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಅವರ ಮಾತೃಶ್ರೀಯವರಾದ ಮಧ್ಯಗುತ್ತು ದಿ. ಲೀಲಾವತಿ ಶ್ಯಾಮ ಎಸ್. ಶೆಟ್ಟಿ ಎಂಬ ಹೆಸರನ್ನು ಇಟ್ಟಿದ್ದು, ಈ ಸಂದರ್ಭ ಬಂಟರ ಸಂಘದ ಉಪಾಧ್ಯಕ್ಷ ಮಹೇಶ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಾಂಸ್ಕೃತಿಕ ಜಾನಪದ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು ಜರಗಿದವು. ವಿವಿಧ ಸಂಘ ಸಂಸ್ಥೆಗಳಿಂದ ಭಜನೆ, ಸಮೂಹ ಗಾಯನ ಸ್ಪರ್ಧೆ, ನೃತ್ಯ ವೈಭವ, ಬಡಗುತಿಟ್ಟಿನ ಯಕ್ಷಗಾನ ಗಾನ ಸಂಭ್ರಮ, ಪ್ರಸಂಗ ಪಾಂಚಜನ್ಯದಲ್ಲಿ ಭಾಗವತರಾಗಿ ರಕ್ಷಾ ಹೆಗ್ಡೆ, ಹಿಮ್ಮೇಳದಲ್ಲಿ ಎ.ಪಿ. ಪಾಠಕ್, ಪ್ರಶಾಂತ್ ಕೈಗಡಿ, ಕಲಾವಿದರಾಗಿ ನಾಗಶ್ರೀ, ನಿಹಾರಿಕಾ ಭಟ್, ತೆಂಕುತಿಟ್ಟಿನ ಯಕ್ಷಗಾನ ಅಕ್ಷಯಾಂಬರದಲ್ಲಿ ಭಾಗವತರಾಗಿ ಡಾ. ಪ್ರಖ್ಯಾತ್ ಶೆಟ್ಟಿ, ಚಂಡೆಯಲ್ಲಿ ಹರಿಪ್ರಸಾದ್ ಭಟ್, ಮದ್ದಳೆಯಲ್ಲಿ ಸುಬ್ರಹ್ಮಣ್ಯ ಭಟ್ ಗುತ್ತಿಗಾರ್, ದುಶ್ಶಾಸನನಾಗಿ ಆರುವ ಕೊರಗಪ್ಪ ಶೆಟ್ಟಿ, ಪಾಂಚಾಲಿಯಾಗಿ ಸಂಜಯ್ ಕುಮಾರ್ ಶೆಟ್ಟಿ ಗೋಣಿಬೀಡು ಪಾತ್ರವಹಿಸಿದರು. ಹಾಸ್ಯ ಕಲಾವಿದರಾದ ಅರವಿಂದ ಬೋಳಾರ್ ಮತ್ತು ವಾಲ್ಟರ್ ನಂದಳಿಕೆ ಅವರಿಂದ ಗೌಜಿ ಗಮ್ಮತ್ತು ಕಾರ್ಯಕ್ರಮ, ನವೀನ್ ಡಿ. ಪಡೀಲ್ ಅವರಿಂದ ಹಾಸ್ಯ ಸಿಂಚನ, ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ, ಖ್ಯಾತ ಹಿನ್ನೆಲೆ ಗಾಯಕರಾದ ಗುರುಕಿರಣ್ ಅವರಿಂದ ಸಂಗೀತ ಸುಧಾ ಮೊದಲಾದ ವಿಭಿನ್ನ ಕಾರ್ಯಕ್ರಮಗಳು ಜರಗಿದವು. ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
