ಬಂಟರ ಸಂಘ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿಂದ ಫೆಬ್ರವರಿ 2 ರಂದು ಆಯೋಜಿಸಿದ್ದ ಸೀರೆ, ವಜ್ರಾಭರಣ ಹಾಗೂ ಇತರ ಆಕರ್ಷಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಯಶಸ್ವಿಯಾಗಿ ನೆರವೇರಿತು. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಮುಂಬಯಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಮಾತನಾಡುತ್ತಾ, ಮಹಿಳೆಯರು ಅಲಂಕರಿಸಿಕೊಂಡರೆ ಮನೆಗೂ ಶೋಭೆ. ಇಂದಿನ ಈ ಪ್ರದರ್ಶನ ವಿಶೇಷವಾಗಿ ಮಹಿಳೆಯರಿಗಾಗಿದ್ದರೂ ಈ ಮೂಲಕ ತುಂಬಾ ಜನರಿಗೆ ಅನುಕೂಲವಾಗಲಿದೆ. ವ್ಯಾಪಾರದ ದೃಷ್ಟಿಯಿಂದ ಒಂದೆಡೆಯಾದರೆ ಮತ್ತೊಂದು ಕಡೆ ಎಲ್ಲರೂ ಸಂತೋಷದಿಂದ ಬೆರೆಯುವ ಅವಕಾಶ ದೊರೆಯುತ್ತದೆ. ಬಂಟರ ಸಂಘದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗುತ್ತಿರುವುದು ನನಗೆ ಸಂತಸವನ್ನು ನೀಡಿದೆ. ಅದರಲ್ಲೂ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮವೂ ಉತ್ತಮ ರೀತಿಯಲ್ಲಿ ಮೂಡಿ ಬರುತ್ತಿದೆ. ಇದಕ್ಕೆ ನಿಮ್ಮೆಲ್ಲರ ಪರಿಶ್ರಮವೇ ಕಾರಣ. ಇಂದಿನ ಈ ಪ್ರದರ್ಶನವೂ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಅರ್ ಶೆಟ್ಟಿಯವರು ಮಾತನಾಡುತ್ತಾ, ಒಂದು ಸುಂದರವಾದ ಕಾರ್ಯಕ್ರಮವನ್ನು ಆಯೋಜಿಸಿದ್ದೀರಿ. ಶಾಪಿಂಗ್ ಅಂದರೆ ಮಹಿಳೆಯರಿಗೆ ವಿಶೇಷ ಆಕರ್ಷಣೆ. ಇಲ್ಲಿ ನೆರೆದಿರುವ ಮಹಿಳೆಯರ ಸಂಭ್ರಮ ನೋಡುವುದೇ ಖುಷಿ. ನಮ್ಮ ಪ್ರಾದೇಶಿಕ ಸಮಿತಿಗಳ ವಿಭಾಗ, ಮಹಿಳಾ ವಿಭಾಗ ಇಂತಹ ಕಾರ್ಯಕ್ರಮಗಳನ್ನು ಅತ್ಯಂತ ಉತ್ಸಾಹದಿಂದ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ. ಮುಂದಿನ ತಿಂಗಳ 8ರಂದು ಮಹಿಳಾ ದಿನಾಚರಣೆಯೊಂದಿಗೆ 25 ವರ್ಷಾಚರಣೆಯನ್ನು ವಿಭಿನ್ನವಾಗಿ ಮಾಡುವ ಆಲೋಚನೆಯಿದೆ. ಇದಕ್ಕೆ ಎಲ್ಲರೂ ಎಲ್ಲಾ ವಿಧದ ಸಹಕಾರವನ್ನು ನೀಡಿ ಕಾರ್ಯಕ್ರಮ ಯಶಸ್ವಿಯಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರಿಯಾ ವಿಜಯ್ ಶೆಟ್ಟಿ, ರೇಖಾ ಭಾಸ್ಕರ್ ಶೆಟ್ಟಿ, ಸತ್ಯ ಶಾಲಿನಿ ಶೆಟ್ಟಿ ಶುಭ ಹಾರೈಸಿದರು. ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಸೂರಜ್ ಶೆಟ್ಟಿ ಅವರು ಮಾತನಾಡುತ್ತಾ, ಎಲ್ಲಾ ಮಹಿಳೆಯರು ಶಾಪಿಂಗ್ ಮಾಡಲು ಉತ್ಸುಕರಾಗಿದ್ದಾರೆ. ಮಹಿಳಾ ವಿಭಾಗದ ಎಲ್ಲಾ ಕೆಲಸಗಳಿಗೆ ನಮ್ಮ ಪ್ರೋತ್ಸಾಹ ಇದೆ ಎಂದು ನುಡಿದರು.ಟಿ.ಡಿ.ಎಫ್ ವಜ್ರಾಭರಣ, ಐಸ್ರಾ ಸಾರೀಸ್, ಟೆಂಡರ್ ಫ್ರೆಶ್ ಐಸ್ ಕ್ರೀಮ್, ರೇಣುಕಾ ಸ್ಟೋನ್ಸ್ ಮೊದಲಾದ ಸಂಸ್ಥೆಗಳ ವೈವಿಧ್ಯಮಯ ವಸ್ತು ಪ್ರದರ್ಶನ ನಡೆಯಿತು. ಬಂಟರ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಆಶಾ ಮನೋಹರ ಹೆಗ್ಡೆ, ಮಹಿಳಾ ವಿಭಾಗದ ಕಾರ್ಯದರ್ಶಿ ಆಶಾ ಸುದೀರ್ ಶೆಟ್ಟಿ, ನೈನಿತಾ ಪ್ರವೀಣ್ ಶೆಟ್ಟಿ ಉಪಸ್ಥಿತರಿದ್ದರು. ಪೊವಾಯಿ ಕನ್ನಡ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಯುವ ವಿಭಾಗದವರಿಂದ ಮೋಜಿನ ಆಟಗಳು ನೆರೆದವರನ್ನು ರಂಜಿಸಿತು.
ವೇದಿಕೆಯಲ್ಲಿ ಬಂಟರ ಸಂಘದ ಉಪಾಧ್ಯಕ್ಷರಾದ ಮಹೇಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಂಚಾಲಕ ರವೀಂದ್ರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ, ಸಲಹೆಗಾರರಾದ ವಜ್ರಾಕ್ಷಿ ಕೆ. ಪೂಂಜ, ಮಾಜಿ ಕಾರ್ಯಾಧ್ಯಕ್ಷೆ ಪ್ರಮೀಳಾ ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ ಸ್ವಾಗತಿಸಿದರು. ಮಹಿಳಾ ವಿಭಾಗದ ಉಪಾಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಪ್ರಾರ್ಥನೆ ಹಾಡಿದರು. ಯುವ ವಿಭಾಗದ ಕಾರ್ಯದರ್ಶಿ ಕುಮಾರಿ ಶ್ರೇಯಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ವೃಕ್ಷಾ ಭಂಡಾರಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಹೈಕೋರ್ಟಿನ ನೋಟರಿಯಾಗಿರುವ ಪ್ರಾದೇಶಿಕ ಸಮಿತಿಯ ಸಲಹೆಗಾರ ನ್ಯಾಯವಾದಿ ಆರ್ ಜಿ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕೋಶಾಧಿಕಾರಿ ಪ್ರಮೀಳಾ ಶೆಟ್ಟಿ, ಜೊತೆ ಕಾರ್ಯದರ್ಶಿ ಪುಷ್ಪಲತಾ ಸೂರಜ್ ಶೆಟ್ಟಿ, ಕೋಶಾಧಿಕಾರಿ ಮಮತಾ ಎಸ್ ಶೆಟ್ಟಿ, ಯುವ ವಿಭಾಗದ ಅದ್ವಿತ್ ಪೂಂಜ ಹಾಗೂ ಯುವ ವಿಭಾಗದ ಪದಾಧಿಕಾರಿಗಳು, ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಸರ್ವ ಪದಾಧಿಕಾರಿಗಳು, ಸದಸ್ಯರು, ಜವಾಬ್ ನ ಮಹಿಳಾ ವಿಭಾಗದ ಸದಸ್ಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.