ಸರ್ಕಾರಿ ಶಾಲೆಗಳ ಉಳಿವಿನಲ್ಲಿ ಶಿಕ್ಷಕರು, ಎಸ್ ಡಿಎಂಸಿ, ಹಳೆ ವಿದ್ಯಾರ್ಥಿಗಳ ಪಾತ್ರ ಮಹತ್ವದ್ದು. ಇಲ್ಲಿ ಕಲಿತ ವಿದ್ಯಾರ್ಥಿಗಳು ಅಭಿಮಾನದಿಂದ ಶಾಲೆಯತ್ತ ಮತ್ತೆ ಹಿಂತಿರುಗಿ ನೋಡಿದರೆ ಶಾಲೆಯ ಅಭಿವೃದ್ಧಿಗೆ ಶ್ರಮ ವಹಿಸಬೇಕಾಗಿಲ್ಲ. ಉತ್ತಮ ಶಿಕ್ಷಣದೊಂದಿಗೆ ಉತ್ತಮ ಅಲೋಚನಾ ಕ್ರಮ ರೂಪಿಸುವ ಶಕ್ತಿ ಸರಕಾರಿ ಶಾಲೆಗಳಲ್ಲಿದೆ ಎಂದು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು. ತಗ್ಗರ್ಸೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬೆಂಗಳೂರಿನ ಸ್ವಯಂಸ್ಫೂರ್ತಿ ಫೌಂಡೇಶನ್ ವತಿಯಿಂದ ಕೊಡುಗೆಯಾಗಿ ನೀಡಿದ ಟೇಬಲ್, ಕುರ್ಚಿ ಸಹಿತ ನಾಲ್ಕು ಕಂಪ್ಯೂಟರ್ ಸೆಟ್, ಬುಕ್ ರ್ಯಾಕ್, ಆಟದ ಸಾಮಾಗ್ರಿಗಳನ್ನು ಒಳಗೊಂಡ ಸ್ವಯಂಸ್ಫೂರ್ತಿ ಕೌಶಲ್ಯ ಕೇಂದ್ರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸ್ವಯಂಸ್ಫೂರ್ತಿ ಫೌಂಡೇಶನ್ ಸಂಸ್ಥಾಪಕ ಸಿ.ಎಸ್ ನಾಗರಾಜ ಶೆಟ್ಟಿ ಜಡ್ಕಲ್ ಹಾಗೂ ಶಾಸಕರನ್ನು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ರಸಪ್ರಶ್ನೆ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ, ಮಾಜಿ ಅಧ್ಯಕ್ಷ ಪ್ರಭಾಕರ ಗಾಣಿಗ, ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ಮೋಹನ್ ರೇವಣ್ಕರ್, ಕಾರ್ಯದರ್ಶಿ ಸುನಿಲ್ ಎಚ್.ಜಿ. ಅಣ್ಣಪ್ಪ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಮುಕ್ತಾ ಪಿ ಪ್ರಸ್ತಾವಿಸಿದರು. ಶಿಕ್ಷಕಿಯರಾದ ಮಾಲತಿ ಸ್ವಾಗತಿಸಿದರು. ಸಂಗೀತಾ, ಸಾರಿಕಾ ವಂದಿಸಿದರು.