ನಿರಂತರ ಸಾಂಸ್ಕೃತಿಕ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ನಗರದ ಜನರ ಗಮನ ಸೆಳೆಯುತ್ತಿರುವ ನಗರದ ಮಿನಿ ಮಂಗಳೂರು ಖ್ಯಾತಿಯ ಮೀರಾ ಭಾಯಂದರ್ ಇಲ್ಲಿನ ಭಗವಾನ್ ನಿತ್ಯಾನಂದ ಸೇವಾ ಟ್ರಸ್ಟ್ (ರಿ) ಇದು ನಿರಂತರ ಹದಿನೈದು ವರ್ಷಗಳಿಂದ ಭಗವಾನ್ ನಿತ್ಯಾನಂದ ಸ್ವಾಮಿಯವರ ಸಮಾಧಿ ದರ್ಶನ ಅವಕಾಶವನ್ನು ಕಲ್ಪಿಸುತ್ತಾ ಬರುತ್ತಿದ್ದು, ಪ್ರತೀ ವರ್ಷ ಪಾದಯಾತ್ರೆ ಮಾಡುತ್ತಲೇ ಭಗವಾನ್ ನಿತ್ಯಾನಂದ ಸ್ವಾಮಿ ಅವರ ದಿವ್ಯ ನಾಮಾವಳಿಗಳನ್ನು ಸ್ತುತಿಸುತ್ತಾ ಭಜನೆಗಳನ್ನು ಹಾಡುತ್ತಾ ಕುಣಿಯುತ್ತಾ ಸಾಗುವ ಸೊಬಗನ್ನು ಕಣ್ತುಂಬಿಸಿಕೊಳ್ಳುವ ದೃಶ್ಯ ಅನುಭೂತಿ ಆನಂದದಾಯಕ. ಅಲ್ಲಿನ ಬಿಸಿ ನೀರ ಕುಂಡಗಳಲ್ಲಿ ಮಿಂದು ಶುಚಿರ್ಭೂತರಾಗಿ ದಿವ್ಯ ಸಮಾಧಿ ದರ್ಶನ ಮಾಡುವ ಯೋಗ ಭಾಗ್ಯ ಪಡೆಯುವವರು ನಿಜವಾಗಿಯೂ ಧನ್ಯರು.
ಭಗವಾನ್ ನಿತ್ಯಾನಂದ ಅವರ ಆಶೀರ್ವಾದ ಅನುಭವ ಪಡೆದ ಸಹಸ್ರ ಸಂಖ್ಯೆಯ ಭಕ್ತರು ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಅಲ್ಲಿ ನಮ್ಮ ಮಂಗಳೂರು ಶೈಲಿಯ ಉಪಹಾರ ಖಾದ್ಯ ಸ್ವೀಕರಿಸಿ ಪ್ರಸಾದ ಭೋಜನ ಉಂಡು ಕೃತಾರ್ಥರಾಗುತ್ತಾರೆ. ಹಿರಿಯ ನಾಗರೀಕರಿಗೆ ಹಾಗೂ ಆರೋಗ್ಯ ಸಂಬಂಧಿ ಸಮಸ್ಯೆ ಇರುವವರಿಗೆ ಬಸ್ಸು ಹಾಗೂ ಇತರ ವಾಹನ ಸೌಕರ್ಯ ಕಲ್ಪಿಸಲಾಗುತ್ತದೆ.ಪ್ರತೀ ವರ್ಷದಂತೆ ಈ ಸಲವೂ ಇದೇ ಬರುವ ಫೆಬ್ರವರಿ 1 ರಂದು ಸಿಲ್ವರ್ ಪಾರ್ಕ್ ಮೀರಾರೋಡ್ ಜೈ ಅಂಬೆ ಮಂದಿರ ವಠಾರದಲ್ಲಿ ಸಂಜೆ 6.00 ಘಂಟೆಗೆ 16 ನೇ ವರ್ಷದ ಪಾದಯಾತ್ರೆಗೆ ಚಾಲನೆ ದೊರೆಯಲಿದೆ. ಭಜನೆ ಕೀರ್ತನೆ ಮಂಗಳಾರತಿ ಪ್ರಸಾದ ಸ್ವೀಕಾರ ಬಳಿಕ ಆರಂಭಗೊಳ್ಳಲಿರುವ ಪಾದಯಾತ್ರೆ ಉದ್ಘಾಟನೆಯಲ್ಲಿ ನಿತ್ಯಾನಂದ ಸ್ವಾಮೀಜಿಯವರ ಆಪ್ತ ಪರಮಭಕ್ತ ಬೆಳಗಾವಿ ಬೇವಿನ ಕೊಪ್ಪ ನಿತ್ಯಾನಂದ ಸೇವಾಶ್ರಮದ ಶ್ರೀ ಶ್ರೀ ವಿಜಯಾನಂದ ಸ್ವಾಮೀಜಿ ಹಾಗೂ ಪರಿಸರದ ಧಾರ್ಮಿಕ ಮಾರ್ಗದರ್ಶಕರಾದ ಸಾಣೂರು ಸಾಂತಿಂಜ ಜನಾರ್ಧನ ಭಟ್ ಅವರು ಉಪಸ್ಥಿತರಿದ್ದು, ಪಾದಯಾತ್ರೆ ಆರಂಭಿಸುವ ವಿಧಿ ವಿಧಾನ ಕುರಿತ ಮಾರ್ಗದರ್ಶನ ನೀಡಿ ಪಾದಯಾತ್ರೆಗೆ ಚಾಲನೆ ನೀಡುತ್ತಾ ಪರಿಸರದ ಊರಿನ ಭಗವಾನ್ ನಿತ್ಯಾನಂದ ಸ್ವಾಮಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಪಾದಯಾತ್ರೆಯಲ್ಲಿ ಭಾಗವಹಿಸಿ ಕೃತಾರ್ಥರಾಗುವಂತೆ ಟ್ರಸ್ಟ್ ನ ಅಧ್ಯಕ್ಷರು ಹಾಗೂ ವಿವಿಧ ವಿಭಾಗಳ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.
ನಮ್ಮಯ ನಡಿಗೆ ಗಣೇಶಪುರಿಯೆಡೆಗೆ.
ಶುಭಂ ಭದ್ರಂ ಮಂಗಲಂ.
ಬರಹ : ಅರುಣ್ ಶೆಟ್ಟಿ ಎರ್ಮಾಳ್