ಕಾಸರಗೋಡು ಜಿಲ್ಲಾ 7 ನೇ ಚುಟುಕು ಸಾಹಿತ್ಯ ಸಮ್ಮೇಳನಾ ಅಧ್ಯಕ್ಷರಾಗಿ ಕವಿ, ಅಧ್ಯಾಪಕ, ಸಂಘಟಕ, ಹವ್ಯಾಸಿ ಯಕ್ಷಗಾನ, ನಾಟಕ ಕಲಾವಿದ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ. ಕಾಸರಗೋಡಿನ ಕನ್ನಡ ಗ್ರಾಮದಲ್ಲಿ ಮಾರ್ಚ್ 27, ಗುರುವಾರ ನಡೆಯುವ ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ರಾಜ್ಯಮಟ್ಟದ ಚುಟುಕು ಗೋಷ್ಠಿ, ರಾಜ್ಯ ಮಟ್ಟದ ವಿದ್ಯಾರ್ಥಿ ಚುಟುಕು ಗೋಷ್ಠಿ, ರಾಜ್ಯಮಟ್ಟದ ಚುಟುಕು ಕಥಾ ಗೋಷ್ಠಿಯೂ ಸಾಹಿತ್ಯಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರ ಉಪಸ್ಥಿತಿಯಲ್ಲಿ ನಡೆಯಲಿರುವುದು.
ತುಳು, ಕನ್ನಡ ದ್ವಿಭಾಷಾ ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು ಅವರು ಈಗಾಗಲೇ ಬೆಳಕು, ಉದಿಪು ಸುರಗಿ, ದನಿಯಾದ ಹನಿಗಳು, ಮಿಠಾಯಿ ಡಬ್ಬ ಎಂಬ ಕೃತಿಗಳನ್ನು ಸಾರಸ್ವತ ಲೋಕಕ್ಕೆ ನೀಡಿರುವುದಲ್ಲದೇ ಹಲವಾರು ಪುಸ್ತಕಗಳಿಗೆ ಮುನ್ನುಡಿ ಮತ್ತು ಬೆನ್ನುಡಿಗಳನ್ನು ಕೂಡಾ ಬರೆದಿರುವರು. ಇವರು ಸುಮಾರು 5000 ಕ್ಕಿಂತಲೂ ಹೆಚ್ಚಿನ ಹನಿಗವನ ಮತ್ತು ಚುಟುಕುಗಳನ್ನು ಬರೆಯುವುದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹಸು ಒಡ್ಡಂಬೆಟ್ಟು ಪ್ರಚಲಿತರಾಗಿದ್ದಾರೆ.
ಕೇವಲ ಒಂದೆರಡು ಸಾಲುಗಳಲ್ಲಿಯೇ ಹನಿಗವನ, ಚುಟುಕುಗಳನ್ನು ರಚಿಸುವ ಕೌಶಲ್ಯವನ್ನು ಹೊಂದಿರುವ ಇವರ ರಚನೆಗಳು, ಸಾಹಿತ್ಯ ಕ್ಷೇತ್ರದಲ್ಲಿ ವಿಭಿನ್ನ ಅನ್ನಿಸಿಕೊಂಡು ಒಡ್ಡಂಬೆಟ್ಟು ಶೈಲಿ ಎಂದೇ ಪ್ರಚಾರ ಪಡೆದುಕೊಂಡ ಇವರ ಚುಟುಕುಗಳಿಗೆ ಹಸು, ಹನಿ ಕವನಾಮೃತ ಎಂಬ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ. ಸ್ವತಃ ಕವಿಯಾಗಿರುವ ಅವರು ಹಲವಾರು ಸಾಹಿತ್ಯ ಸಂಘಟನೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾ ಹಲವಾರು ಉದಯೋನ್ಮುಖ ಕವಿಗಳಿಗೆ ವೇದಿಕೆಗಳನ್ನು ಒದಗಿಸುವ ಕೆಲಸದ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಶಾಲೆಗಳಲ್ಲಿ ಮಕ್ಕಳಿಗಾಗಿ ಸಾಹಿತ್ಯ ಕಮ್ಮಟಗಳನ್ನು ಮಾಡಿರುತ್ತಾರೆ.
ಚುಟುಕು ಸಾಹಿತ್ಯ ಪರಿಷತ್ ಕೇಂದ್ರ ಸಮಿತಿ ಮೈಸೂರು ಇದರ ಸ್ಥಾಪಕ, ರಾಜ್ಯ ಪ್ರಧಾನ ಸಂಚಾಲಕ ಡಾಕ್ಟರ್ ಎಂ.ಜಿ.ಆರ್ ಅರಸ್ ಅವರ ಮಾರ್ಗದರ್ಶನದಲ್ಲಿ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಇದರ ಜಿಲ್ಲಾಧ್ಯಕ್ಷರಾಗಿದ್ದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕಗಳನ್ನು ರಚಿಸಿ ಸಂಘಟನೆಯ ಮೂಲಕ ಸಾಹಿತ್ಯ ಚಟುವಟಿಕೆಗಳು ಸಕ್ರಿಯವಾಗಿ ನಡೆಯುವಂತೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ.
ಕಥಾ ಬಿಂದು ಸಾಹಿತ್ಯ ಸಂಸ್ಥೆಯ ಸೌರಭ ರತ್ನ, ಸೃಷ್ಟಿ ಕಲಾ ಭೂಮಿ ಬೆಂಗಳೂರು ಸಂಸ್ಥೆಯಿಂದ ಸೃಷ್ಟಿ ಕಲಾಶ್ರೀ ಪ್ರಶಸ್ತಿ, ಕೌಸ್ತುಭ ಮಾಸ ಪತ್ರಿಕೆ ಮೈಸೂರು ಇವರಿಂದ ಕೌಸ್ತುಭ ರತ್ನ ಪ್ರಶಸ್ತಿ, ರಿಥಮ್ ಕಲ್ಚರಲ್ ವಿಂಗ್ಸ್ ಮಂಜೇಶ್ವರ ಇವರಿಂದ ಚುಟುಕು ಕಲಾರತ್ನ ಪುರಸ್ಕಾರ, ದೇಶಪ್ರೇಮಿ ಬಳಗ ಮಂಗಳೂರಿನಿಂದ ಗೌರವ ಸನ್ಮಾನ, ಗೋವಾ ಕನ್ನಡ ಸಂಘದಿಂದ ಕರುನಾಡ ಪದ್ಮಶ್ರೀ ಪುರಸ್ಕಾರ, ಕಲ್ಲಚ್ಚು ಪ್ರಕಾಶನದ ಕಲ್ಲಚ್ಚು ವಿಶಂತಿ ಪುರಸ್ಕಾರ, ವಚನ ಸಾಹಿತ್ಯ ಪರಿಷತ್ತು ಬೆಂಗಳೂರಿನಿಂದ ಪುರಸ್ಕಾರ ಹೀಗೆ ಹಲವಾರು ಸಂಘ ಸಂಸ್ಥೆಗಳಿಂದ ಬಿರುದುಗಳನ್ನೂ ಗೌರವ ಸನ್ಮಾನಗಳನ್ನೂ ಪಡೆದುಕೊಂಡಿರುವ ಅವರು ದೆಹಲಿ ಕರ್ನಾಟಕ ಸಂಘದಲ್ಲಿಯೂ ರಾಷ್ಟ್ರೀಯ ಮಟ್ಟದ ಚುಟುಕು ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಿರುವುದು ಉಲ್ಲೇಖನೀಯವಾಗಿದೆ. ಪ್ರಸ್ತುತ ಕಾಸರಗೋಡು ಕುಬಣ್ನೂರು ಗ್ರಾಮದ ಒಡ್ಡಂಬೆಟ್ಟುವಿನಲ್ಲಿ ಪತ್ನಿ ಡಾ. ಅಪರ್ಣಾ ಆಳ್ವರ ಜೊತೆ ವಾಸವಾಗಿದ್ದಾರೆ. ಮಂಗಳೂರಿನ ತೊಕ್ಕೊಟ್ಟಿನಲ್ಲಿರುವ ಸ್ವಗೃಹದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮತ್ತು ಕಾರ್ಯ ಚಟುವಟಿಕೆಗಳನ್ನು ಮುಂದುವರೆಸುತ್ತಿದ್ದಾರೆ.