ಮಂಗಳೂರು ಕೂಳೂರಿನಲ್ಲಿರುವ ಏನೆಪೋಯ ಶಿಕ್ಷಣ ಸಂಸ್ಥೆ ವೈಐಎಎಸ್ ಸಿಎಂ ಇದರ ಎನ್.ಎಸ್.ಎಸ್ 2, 9, 17 ಮತ್ತು 18ನೇ ಘಟಕಗಳು ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12ರಂದು ದೇಶಾದ್ಯಂತ ಆಚರಿಸುವ ರಾಷ್ಟ್ರೀಯ ಯುವ ದಿನಾಚರಣೆ ಸಲುವಾಗಿ (ದಿನಾಂಕ 15 ರಂದು) ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ವಿಶ್ರಾಂತ ಪ್ರಾಧ್ಯಾಪಕ ಮತ್ತು ಲೇಖಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮುಖ್ಯ ಅತಿಥಿಗಳಾಗಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.‘ನಮ್ಮ ದೇಶದಲ್ಲಿ ಜನಿಸಿದ ಅನೇಕ ಮಹಾತ್ಮರು ಸ್ವದೇಶದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ತಮ್ಮ ವರ್ಚಸ್ಸಿನ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಪಾದಿಸಿ ಜಗತ್ಪ್ರಸಿದ್ಧರಾಗಿದ್ದಾರೆ. ಅಂತವರ ಬದುಕು ಇಂದಿನ ಪೀಳಿಗೆಗೆ ದಾರಿದೀಪವಾಗಿದೆ. ಸ್ವಾಮಿ ವಿವೇಕಾನಂದರು ತಮ್ಮ ಚಿಕಾಗೋ ಭಾಷಣದ ಮೂಲಕ ಪ್ರಾಚ್ಯದ ಮಹಾಪ್ರವಾದಿಯಾಗಿ ಹೊರಹೊಮ್ಮಿದ್ದಲ್ಲದೆ ‘ಏಳಿ ಎದ್ದೇಳಿ’ ಎಂಬ ಅಮೃತವಾಣಿಯ ಮೂಲಕ ಯುವಜನರಿಗೆ ಇಂದಿಗೂ ಸ್ಫೂರ್ತಿಯಾಗಿದ್ದಾರೆ’ ಎಂದು ಅವರು ನುಡಿದರು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲ ಡಾ. ಜೀವನ್ ರಾಜ್ ಅವರು ಇಂದಿನ ಯುವಜನರು ಹಿರಿಯರ ಆದರ್ಶಗಳನ್ನು ಪಾಲಿಸಿ ಯೋಗ್ಯ ದಾರಿಯಲ್ಲಿ ನಡೆಯಬೇಕು’ ಎಂದು ಕಿವಿಮಾತು ಹೇಳಿದರು. ಪ್ರಾಂಶುಪಾಲ ಡಾ.ಅರುಣ್ ಎ.ಭಾಗವತ್ ಅವರ ನಿರ್ದೇಶನದಂತೆ ಆಯೋಜಿಸಿದ ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿ ಭಾಸ್ಕರ ರೈ ಕುಕ್ಕುವಳ್ಳಿಯವರು ಬಹುಮಾನ ವಿತರಿಸಿದರು.ಉಪಪ್ರಾಂಶುಪಾಲರಾದ ಡಾ. ಶರೀನಾ ಪಿ. ನಾರಾಯಣ್ ಸುಕುಮಾರ್ ಶುಭ ಕೋರಿದರು. ಎನ್.ಎಸ್.ಎಸ್ ಅಧಿಕಾರಿಗಳಾದ ನಿಯಾಝ್ ಪಿ., ಡಾ. ಸುಮಂಗಲ ರಾವ್, ಡಾ. ದಿನಕರ ಪಚ್ಚನಾಡಿ ಮತ್ತು ಧನುಷ್ ಬಿ. ಉಪಸ್ಥಿತರಿದ್ದರು. ಮೈಕ್ರೋಬಯಾಲಜಿ ಮತ್ತು ಫೋರೆನ್ಸಿಕ್ ಸಾಯನ್ಸ್ ವಿಭಾಗಗಳಿಂದ ಎನ್ಎಸ್ಎಸ್ ಘಟಕಗಳ ಸದಸ್ಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
Previous Articleಕಾಟುಕುಕ್ಕೆ ಸುಬ್ರಾಯ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಸಿದ್ಧತೆ
Next Article ವಿದ್ಯಾರಣ್ಯ ಶಾಲೆ : ಪೋಷಕ- ಶಿಕ್ಷಕ ಒರಿಯೆಂಟೇಶನ್ ಕಾರ್ಯಕ್ರಮ