ಏಷ್ಯನ್ ಮಾಸ್ಟರ್ಸ್ ವೆಯ್ಟ್ ಲಿಫ್ಟಿಂಗ್ ಕಮಿಟಿ (ಎಂಎಂಡಬ್ಲ್ಯೂ) ಗೆ ಮುಂಬಯಿಯ ಉದಯ ಶೆಟ್ಟಿ ಅವರನ್ನು ಎಂಎಂಡಬ್ಲ್ಯೂ ಗೆ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ನೇಮಕ ಮಾಡಲಾಗಿದೆ. ಉದಯ ಶೆಟ್ಟಿಯವರು ವೆಯ್ಟ್ ಲಿಫ್ಟಿಂಗ್ ನಲ್ಲಿ ಉನ್ನತ ಮಟ್ಟದ ಅನುಭವವನ್ನು ಹೊಂದಿದ್ದು, ಓರ್ವ ಯಶಸ್ವಿ ವೆಯ್ಟ್ ಲಿಫ್ಟರ್ ಆಗಿ ಎಲ್ಲೆಡೆ ಮಿಂಚಿದ್ದಾರೆ.ಇವರು ಹಲವಾರು ವರ್ಷಗಳಿಂದ ಭಾರತೀಯ ಮಾಸ್ಟರ್ಸ್ ವೆಯ್ಟ್ ಲಿಫ್ಟಿಂಗ್ ಫೆಡರೇಶನ್ ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಅಧಿಕಾರಾವಧಿಯಲ್ಲಿ ಇವರು ಭಾರತದಲ್ಲಿ ವೆಯ್ಟ್ ಲಿಫ್ಟಿಂಗ್ ಕ್ರೀಡೆಯನ್ನು ಉತ್ತೇಜಿಸುವಲ್ಲಿ ಮತ್ತು ಅಭಿವೃದ್ಧಿ ಪಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಮತ್ತು ದೇಶದಲ್ಲಿ ಮಾಸ್ಟರ್ಸ್ ವೆಯ್ಟ್ ಲಿಫ್ಟಿಂಗ್ ಸಮುದಾಯದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಿದ್ದಾರೆ.ಪೋಲೆಂಡ್ ನ ಕ್ರಾಕೋವ್ ನಲ್ಲಿ ನಡೆದ ಮಾಸ್ಟರ್ಸ್ ವರ್ಲ್ಡ್ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಉದಯ ಎಸ್. ಶೆಟ್ಟಿಯವರು ತನ್ನ ತಂಡದ ಏಳು ಮಂದಿ ವೆಯ್ಟ್ ಲಿಫ್ಟರ್ಸ್ ನೊಂದಿಗೆ ಭಾರತವನ್ನು ಪ್ರತಿನಿಧಿಸಿದ್ದಾರೆ. 1994 ರಿಂದ ಭಾರತೀಯ ವೆಯ್ಟ್ ಲಿಫ್ಟಿಂಗ್ ಫೆಡರೇಶನ್ ನ ಅತ್ಯುತ್ತಮ ರೆಫ್ರಿಗಳಲ್ಲಿ ಒಬ್ಬರು. ಹಲವು ದಶಕದಿಂದಲೂ ಉತ್ತಮ ಸಂಘಟಕ ಹಾಗೂ ಟೀಮ್ ಲೀಡರ್ ಆಗಿ ಇವರು ಗುರುತಿಸಲ್ಪಟ್ಟಿದ್ದಾರೆ. ರಾಷ್ಟ್ರೀಯ ದಾಖಲೆಯೊಂದಿಗೆ ಹಲವು ವರ್ಷ ರಾಷ್ಟ್ರೀಯ ಚಾಂಪಿಯನ್ ಆಗಿದ್ದು, ಮಹಾರಾಷ್ಟ್ರ ಸರಕಾರವು ಇವರಿಗೆ ಛತ್ರಪತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಸದ್ಯದಲ್ಲೇ ಲಾಸ್ ವೇಗಾಸ್ ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್ ಶಿಪ್ ಗೆ ಭಾರತದ ತಂಡವನ್ನು ಪ್ರತಿನಿಧಿಸಲಿದ್ದಾರೆ. ಕಳೆದ ಬಾರಿಯ ಪ್ಯಾರೀಸ್ ನಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿಯೂ ಭಾಗವಹಿಸಿದ್ದಾರೆ.