ಎಷ್ಟೋ ದಶಕಗಳಿಂದ ಅನೂರ್ಚಿತವಾಗಿದ್ದ ಪಾತ್ರಾಡಿಗುತ್ತಿನ ಸಾಮಾನಿ ಪಟ್ಟಕ್ಕೆ ಯೋಗ್ಯ ವ್ಯಕ್ತಿಯನ್ನೇ ದೈಯ್ಯಂಗಳು ಆಯ್ಕೆ ಮಾಡಿವೆ. ತುಳುನಾಡಿನ ದೈವಗಳಲ್ಲಿ ಕುರಿಯಾಡಿದಾರ್ ಎನ್ನುವುದು ಅತ್ಯಂತ ವಿಶಿಷ್ಟವಾದ ದೈವ. ಅರಸು ಕುಂಜಿರಾಯರ ಹಾಗೆ ಈ ದೈವವೂ ಕೂಡ ಸಾರ್ವತ್ರಿಕವಾಗಿ ಪ್ರಸಾರಗೊಳ್ಳದೆ ಕೆಲವೇ ಕ್ಷೆತ್ರಗಳಲ್ಲಿ ಆರಾಧನೆ ಪಡೆಯುವ ರಾಜಸಿಕ ಶಕ್ತಿ.
ಅಂಬಡಾಡಿ ಬೀಡಿನ ಮಂಜಣ್ಣ ಮಡಯೆರ್, ಬೀರಣ್ಣ ಮಡಯರ್ ಎಂಬ ಇಬ್ಬರು ಬಲ್ಲಾಳರಿಗೆ ಸಹಸ್ರಲಿಂಗೇಶ್ವರ ದೇವರ ಸ್ಥಳದಲ್ಲಿ ನಡೆಯುವ ಮಕೆಜಾತ್ರೆಯಲ್ಲಿ ಈ ದೈವ ಸಿಕ್ಕಿತ್ತಂತೆ. ಅದು ಸತ್ಯದ ಕಾಲ ದೈವಗಳು ಕಣ್ಣಾರೆ ಕಾಣ ಸಿಗುತ್ತಿದ್ದವು. ಕಿವಿಯಾರೆ ಮಾತನಾಡುತ್ತಿದ್ದವು. ಈ ಬಳ್ಳಾಲರು ದೈವ ತಂದು ನಂಬಿದ ಒಂದುವರೆ ವರ್ಷಕ್ಕೆ ಅಳಿದು ಹೋದರು. ಅಂಬಡಾಡಿ ಬಳ್ಳಾಲರು ತಪ್ಪಿದಾಗ ದೈವ ಬೆನ್ನು ಹಿಡಿದಿದ್ದು ಕುದಿಗ್ರಾಮ ಮಾಗಣೆಯ ಬಟ್ಟೆಡುಲ್ಲಾಯರದ್ದು. ಬಟ್ಟೆಡುಲ್ಲಯರೂ ದೈವ ನಂಬಿ ಒಂದುವರೆ ವರ್ಷಕ್ಕೆ ಕಾಲವಾದರು. ಇದು ಬಹಳ ಕಟ್ಟುನಿಟ್ಟಿನ ಕಠೋರ ದೈವವಾಗಿತ್ತು ಎಂದು ಕಾಣುತ್ತದೆ.ಆಗ ಈ ದೈವವನ್ನು ಆರಾಧನೆ ಮಾಡುವ ಧೈರ್ಯ ತೋರಿಸಿದವರು ಕುರಿಯ ಕಡಂಬರು. ಬಾರಿಮಲೆ ಉಕ್ಕುಡದಲ್ಲಿ ದೈವಕ್ಕೊಂದು ಮಾಡ ನಿರ್ಮಾಣವಾಯಿತು. ಮಾಡ ಅರಸು ದೈವಗಳಿಗಷ್ಟೇ ಕಟ್ಟಲಾಗುತ್ತದೆ. ಅಲ್ಲಿ ರಾಜ್ಯ ಆಳುತ್ತಿದ್ದ ಏಳು ಜನ ಬಳ್ಳಾಲರು ಈ ಹೊಸ ಅರಸು ದೈವವನ್ನು ನಂಬಲು ಹಿಂದೇಟು ಹಾಕಿದರು. ಬಳ್ಳಾಲರ ಮನೆಗೆ ದೈವದ ವಕ್ರದೃಷ್ಟಿ ಬಿತ್ತು. ಒಂದರ ಹಿಂದೊಂದರಂತೆ ಅಪಶಕುನ ಅವಘಡಗಳು ಜರಗಿದವು.ಆಗ ಬಳ್ಳಾಲರು ಮೊರೆ ಹೋಗಿದ್ದು ಉಚ್ಚಿಲದ ತಂತ್ರಿಗಳ ಮಂತ್ರವಾದಕ್ಕೆ. ಮನುಷ್ಯರ ಗುಂಪೊಂದು ಅತಿಮಾನುಷ ಶಕ್ತಿಯೊಂದನ್ನು ಬಂಧನ ಮಾಡಲು ಸಿದ್ದವಾಯಿತು. ಉಚ್ಚಿಲ ತಂತ್ರಿಗಳು ಬರೆದ ಏಳು ಮಂಡಲದ ನಡುವೆ ಇರಿಸಿದ ತಾಮ್ರದ ತಂಬಿಗೆಯಲ್ಲಿ ಅದೇನೋ ಜೀವ ಸಂಚಾರವಾಯಿತು. ತನ್ನ ಮಂತ್ರ ಸಿದ್ಧಿಯ ಬಲದಿಂದ ಅವರು ದೈವವನ್ನು ಆ ತಂಬಿಗೆಗೆ ಆಹ್ವಾನಿಸಿದ್ದರು. ಅಷ್ಟು ಹೊತ್ತಿಗೆ ಗರುಡ ಪಕ್ಷಿಯೊಂದು ಹಾರಿ ಬಂದು ಆ ತಂಬಿಗೆಯನ್ನು ಅಪಹರಿಸಿತು. ಕುರಿಯಾಡಿದಾರ್ ದೈವ ಬಂಧನದಿಂದ ಹೊರ ಬಂತು. ಅಷ್ಟು ಸುಲಭಕ್ಕೆ ಸೋಲೊಪ್ಪಿಕೊಳ್ಳಲು ಉಚ್ಚಿಲದ ತಂತಿಗಳೂ ಸಿದ್ದರಿರಲಿಲ್ಲ. ತಾನು ಕಲಿತ ಎಲ್ಲಾ ವಿದ್ಯೆಯನ್ನು ಉಪಯೋಗಿಸಿ ಮತ್ತೊಮ್ಮೆ ಬಲವಾಗಿ ಕುರಿಯಾಡಿದಾರ್ ದೈವವನ್ನು ಬಂಧಿಸಿದರು. ಈ ಬಾರಿ ದೈವದ ನೆರವಿಗೆ ಒದಗಿದವರು ಪಯ್ಯೋಳಿಗೆ ಈರ್ವರು ಅರಸು ದೈವಗಳು.ಇವರು ಹೂಡಿದ ಮಾಯೊದ ಪಗರಿ ಉಚ್ಚಿಲ ತಂತ್ರಿಗಳ ಬಂಧನ ಭೇದಿಸಿತು. ಮುಂದೆ ಮೊಳಗಿದ್ದು ಮರಣ ಮೃದಂಗ. ಏಳು ಜನ ಬಳ್ಳಾಲರ ವಂಶವನ್ನೇ ಅಳಿಸಿ ಹಾಕಿ ಅವರ ಬೀಡಿನಲ್ಲಿದ್ದ ತೊಟ್ಟಿಲ ಮಕ್ಕಳನ್ನೆಲ್ಲಾ ಹೊರಗಿರಿಸಿ ದೈವ ನಂಬುವ ಧರ್ಮಾತ್ಮರನ್ನು ಕುರಿಯಾಡಿದಾರ್ ನೆಲೆಗೊಳಿಸಿದರು. ಬಂಗರಸರ ಮನಮೆಚ್ಚಿಸಿ ಮಂಚಿ ಸಾವಿರ ಮಾಡವನ್ನು ಅರಸು ದೈವ ಪಡೆದುಕೊಂಡಿತು. ಮುಂದೆ ಪಯಣಿಸಿದ್ದು ಬೋಳಂತೂರು ಮಾಗಣೆಗೆ. ಇರಾ ಮೂಜೂರು, ಮಂಚಿ ಸಾವಿರ ಮಾಡ, ಬೋಳಂತೂರು ಮಾಗಣೆ ಮೂವೆರ್ ದೈಯ್ಯಂಗುಲ್ ಒರಿ ಕುರಿಯಾಡಿದಾರ್ ಎಂಬ ಹೆಗ್ಗಳಿಕೆಗೆ ಈ ದೈವ ಪಾತ್ರವಾಯಿತು.ಮಂಜಪಿಲ ಬಾಕಿಮಾರು ಗದ್ದೆಯಲ್ಲಿ ಕುರಿಯಾಡಿದಾರ್ ಮೊದಲ ನೇಮ ಪಡೆದುಕೊಂಡರೆ ಕೊನೆಯ ನೇಮ ಕಲ್ಲಾಡಿ ತೊಡಕ ಮಡಕದ ಮಾಡದಲ್ಲಿ ನಡೆಯುತ್ತದೆ. ಮಂಜಪಿಲ ಬಾಕಿಮಾರು ಗದ್ದೆಯಲ್ಲಿ ಈ ದೈವ ಮೊದಲು ಕರೆಯುವುದು ಸಾಮಾನಿಯನ್ನು. ಬೀಡಿನ ಜೊತೆಗೂಡಿ ಅನೇಕ ಗುತ್ತು ಮನೆಗಳು ಇಲ್ಲಿನ ನೇಮವನ್ನು ಸುಲಲಿತವಾಗಿ ನಡೆಸಿಕೊಂಡು ಹೋಗುತ್ತವೆ. ಸಾಮಾನಿಯೇ ಎಂದು ಕರೆದಾಗ ಇಷ್ಟು ವರ್ಷ ಓಗೊಡಲು ಯಾರೂ ಇರಲಿಲ್ಲ. ಈ ಕೊರತೆಯನ್ನು ಪಾತ್ರಾಡಿಗುತ್ತು ಸಂಸಾರ ಈಗ ನೀಗಿಸಿದೆ. ತಮ್ಮ ಕುಟುಂಬದ ಓರ್ವ ವ್ಯಕ್ತಿಯನ್ನು ಸಾಮಾನಿಯಾಗಿ ನೇಮಿಸಿದೆ.
ದೈವ ಅರಸು ಕುರಿಯಾಡಿದಾರ್ ಅವರ ಗಡಿ ಪ್ರಧಾನರಾಗಿ ಪುಷ್ಪರಾಜ್ ಶೆಟ್ಟಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಎಷ್ಟೋ ದಶಕಗಳಿಂದ ಅನೂರ್ಚಿತವಾಗಿದ್ದ ಪಾತ್ರಾಡಿಗುತ್ತಿನ ಸಾಮಾನಿ ಪಟ್ಟಕ್ಕೆ ಯೋಗ್ಯ ವ್ಯಕ್ತಿಯನ್ನೇ ದೈಯ್ಯಂಗಳು ಆಯ್ಕೆ ಮಾಡಿವೆ. ಬೀಡು ಮಡಸ್ತಾನ ಗುತ್ತು ಬರ್ಕೆಗಳು ದೈವದ ಅಂಗಾಂಗದ ಸಿಂಗಾರಗಳು. ಈ ಅಧಿಕಾರ ಸ್ಥಾನಗಳು ಬಲಗೊಂಡರೆ ಮಾತ್ರ ದೈವಾರಾಧನೆ ಉಳಿಯಲು ಸಾಧ್ಯ.
ಮಾಹಿತಿ : ವಿಜೇತ್ ಶೆಟ್ಟಿ ಮಂಜನಾಡಿ.