ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೆಹಲಿಯ ಭಾರತ್ ಮಂಡಪಂನಲ್ಲಿ ಜನವರಿ 11 ಮತ್ತು 12ರಂದು ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ ‘ವಿಶೇಷ ಆಹ್ವಾನಿತ ಯೂತ್ ಐಕಾನ್’ ಆಗಿ ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಉದ್ಯಮಿ ಇನ್ನಾ ಉದಯ ಶೆಟ್ಟಿ ಮತ್ತು ಜಿ.ಪಂ ಮಾಜಿ ಸದಸ್ಯೆ ರೇಷ್ಮಾ ಉದಯ ಶೆಟ್ಟಿ ಅವರ ಪುತ್ರಿ.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು ನಡೆಯುವ ರಾಷ್ಟ್ರೀಯ ಮಟ್ಟದ ಯುವ ಪ್ರತಿಭೆಗಳ ಎರಡು ದಿನದ ಈ ಅಧಿವೇಶನದಲ್ಲಿ ಭಾರತಾದ್ಯಂತದ 3000 ಯುವಕ ಯುವತಿಯರು ಆಯ್ಕೆಯಾಗಿದ್ದಾರೆ. ದೇಶದ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿಕಸಿತ ಭಾರತದ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಡನೆ ಮತ್ತು ಸಂವಾದಗಳು ನಡೆಯಲಿದ್ದು ಆಹ್ವಾನಿತರು ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ವಿವಿಧ ಇಲಾಖೆಗಳ ಪ್ರದರ್ಶನಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಕೇಂದ್ರದ ವಿವಿಧ ಇಲಾಖೆ ಮಂತ್ರಿಗಳು, ಅಧಿಕಾರಿಗಳು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪರಿಣಿತದೊಂದಿಗೆ ಸಂವಾದ ನಡೆಯಲಿದೆ.
ಮನು ಶೆಟ್ಟಿಯವರು ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿಯಾಗಿದ್ದು, ವಿದ್ಯಾರ್ಥಿ ಸಂಘಟನೆ ಎಬಿವಿಪಿ, ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪಡುಬಿದ್ರಿಯ ಸಕ್ರಿಯ ಸದಸ್ಯೆಯಾಗಿದ್ದಾರೆ.