ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ತೊಂಬತ್ತು ವರ್ಷಗಳ ಅರ್ಥಪೂರ್ಣ ಹಾಗೂ ದಣಿವರಿಯದ ಜೀವನ ಪಯಣದ ಯಶೋಗಾಥೆಯನ್ನು ಸಂಭ್ರಮಿಸುವ ಸಲುವಾಗಿ ಅವರ ತೊಂಬತ್ತನೇ ಜನ್ಮ ದಿನಾಚರಣೆಯನ್ನು ಅವರ ಆಪ್ತರು, ಅಭಿಮಾನಿಗಳು ಸಾರ್ವಜನಿಕ ರೀತಿಯಲ್ಲಿ ಆಚರಿಸುವ ಉದ್ಧೇಶದಿಂದ ಇದೇ ಬರುವ ಡಿಸೆಂಬರ್ 24 ಮಂಗಳವಾರ ಸಂಜೆ 5 ಗಂಟೆಗೆ ಗುರುಕುಲ ಶಿಕ್ಷಣ ಸಮುಚ್ಚಯ ವಕ್ವಾಡಿ ಇಲ್ಲಿ ಬಿ.ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ವತಿಯಿಂದ ಆಯೋಜಿಸಲಾಗಿದೆ.
ಆ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಡಾ| ವಿರೇಂದ್ರ ಹೆಗ್ಡೆಯವರು ಕಾರ್ಯಕ್ರಮ ಉದ್ಘಾಟಿಸಿ, ಬಸ್ರೂರು ಅಪ್ಪಣ್ಣ ಹೆಗ್ಡೆ ಕುರಿತಂತೆ ಅಭಿನಂದನೆಯ ನುಡಿಗಳನ್ನಾಡಲಿದ್ದಾರೆ. ರಸೋಲ್ಲಾಸ ಕಾರ್ಯಕ್ರಮದಲ್ಲಿ ಅಪ್ಪಣ್ಣ ಹೆಗ್ಡೆ ಜತೆಗಿನ ಸಂವಾದ, ಅವರ ಜೀವನ ಯಾತ್ರೆಯ ರಸ ನಿಮಿಷಗಳ ಕುರಿತಂತೆ ಅವರ ಅಭಿಮಾನಿಗಳು ಅಪ್ಪಣ್ಣ ಹೆಗ್ಡೆ ಅವರನ್ನು ಮಾತನಾಡಿಸಲಿದ್ದಾರೆ.
ಡಾ. ಎಂ ಮೋಹನ ಆಳ್ವರವರು ಅಧ್ಯಕ್ಷ ಸ್ಥಾನದಲ್ಲಿ ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಪೂಜ್ಯ ವೀರೇಂದ್ರ ಹೆಗ್ಗಡೆ ಅವರಿಂದ ಬಸ್ರೂರು ಅಪ್ಪಣ್ಣ ಹೆಗ್ಡೆ ಶಿಕ್ಷಣ ಪ್ರಶಸ್ತಿಯನ್ನು ಡಾ|ಬಿ.ಎ. ವಿವೇಕ ರೈಯವರು ಸ್ವೀಕರಿಸಲಿದ್ದಾರೆ. ಅಪ್ಪಣ್ಣ ಹೆಗ್ಡೆ ಅವರ ಮೊಮ್ಮಕ್ಕಳಿಂದ ಹೃದಯಸ್ಪರ್ಶಿ ಹುಟ್ಟು ಹಬ್ಬದ ಆಚರಣೆ, ವೈದ್ಯಕೀಯ ನೆರವು, ಸಾಂಸ್ಕೃತಿಕ ಕಾರ್ಯಕ್ರಮ ವೈವಿಧ್ಯಗಳು ನಡೆಯಲಿವೆ. ಜರ್ನಿ ಥಿಯೇಟರ್ ಮಂಗಳೂರು ಕಲಾವಿದರಿಂದ ಬೇಲಿ ಮುಳ್ಳಿನ ನೀಲಿ ಹೂಗಳು ಎಂಬ ಜಾನಪದ ಸಂಗೀತ ಪ್ರಧಾನ ರೂಪಕ ಸಂಜೆ 5 ಘಂಟೆಗೆ ಪ್ರಸ್ತುತಗೊಳ್ಳುತ್ತದೆ. ಅರೆಹೊಳೆ ಪ್ರತಿಷ್ಠಾನದ ನಂದ ಗೋಕುಲ ಕಲಾವಿದರಿಂದ ‘ಕೊಲ್ಲೂರು ಮುಕಾಂಬಿಕಾ’ ಭಕ್ತಿ ಪ್ರಧಾನ ನಾಟ್ಯ ರೂಪಕ ಪ್ರದರ್ಶನಗೊಳ್ಳಲಿದೆ.
ಈ ಎಲ್ಲಾ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಅವರ ಅಭಿಮಾನಿಗಳು, ಮಿತ್ರ ಬಾಂಧವರು, ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡುವಂತೆ ಕಾರ್ಯಕ್ರಮ ಸಂಯೋಜಕರು, ಪ್ರತಿಷ್ಠಾನದ ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.