‘ಶಾಲಾ ಕಾಲೇಜುಗಳಲ್ಲಿ ಯಕ್ಷಗಾನೀಯ ಚಟುವಟಿಕೆಗಳಿಗೆ ಪ್ರೋತ್ಸಾಹ ಲಭಿಸುತ್ತಿರುವುದು ಇತ್ತೀಚಿನ ಒಂದು ಉತ್ತಮ ಬೆಳವಣಿಗೆ. ಮೂರೂವರೆ ದಶಕಗಳ ಹಿಂದೆ ಎಸ್.ಡಿ.ಎಂ ಲಾ ಕಾಲೇಜಿನಲ್ಲಿ ಪ್ರಾರಂಭವಾದ ಅಂತರ್ ಕಾಲೇಜು ಯಕ್ಷಗಾನ ಸ್ಪರ್ಧೆ ಯಕ್ಷೋತ್ಸವದಿಂದಾಗಿ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಬಗ್ಗೆ ವಿಶೇಷ ಜಾಗೃತಿ ಉಂಟಾಗಿದೆ’ ಎಂದು ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ 2024 -25 ನೇ ಸಾಲಿನ ನೂತನ ಯಕ್ಷೋತ್ಸವ ಸಮಿತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಪ್ರಸ್ತುತ ಅಲ್ಲಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನ ಮತ್ತು ಸ್ಪರ್ಧಾ ಕಾರ್ಯಕ್ರಮಗಳನ್ನು ಯಕ್ಷೋತ್ಸವ ಎಂದು ಕರೆಯುವುದು ವಾಡಿಕೆಯಾಗಿದೆ. ಧರ್ಮಸ್ಥಳ ಸಂಸ್ಥೆಯ ಯಕ್ಷೋತ್ಸವವೇ ಅದಕ್ಕೆ ಮೂಲ ಪ್ರೇರಣೆ. ವಿವಿಧ ವೃತ್ತಿ ಕ್ಷೇತ್ರದಲ್ಲಿ ದುಡಿಯುತ್ತಿರುವ ಯಕ್ಷಗಾನದ ಹವ್ಯಾಸಿ ಕಲಾವಿದರಲ್ಲಿ ಹೆಚ್ಚಿನವರು ಬೇರೆ ಬೇರೆ ಕಾಲೇಜು ತಂಡಗಳ ಮೂಲಕ ಯಕ್ಷೋತ್ಸವದಲ್ಲಿ ಭಾಗವಹಿಸಿದವರೇ ಆಗಿದ್ದಾರೆ’ ಎಂದ ಅವರು ಅದಕ್ಕೆ ಕಾರಣವಾದ ಸಂಘಟನಾ ಸಮಿತಿಯನ್ನು ಅಭಿನಂದಿಸಿದರು.
ಯಕ್ಷೋತ್ಸವದ ನಿರ್ದೇಶಕರಾದ ಉಪನ್ಯಾಸಕ ಪ್ರೊ. ಪುಷ್ಪರಾಜ್ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನ ಯಕ್ಷಗಾನ ತಂಡದ ಸದಸ್ಯರು, ಯಕ್ಷೋತ್ಸವ ಸಮಿತಿ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿ ಪ್ರತಿನಿಧಿಗಳು ಉಪಸ್ಥಿತರಿದ್ದರು.









































































































