ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ಬಳಿಕ ಒಕ್ಕೂಟವು ಮುಂಬಯಿಯಲ್ಲಿ ಮೂರು ವಿಶ್ವ ಬಂಟರ ಸಮ್ಮಿಲನ, ಉಡುಪಿಯಲ್ಲಿ ಎರಡು ವಿಶ್ವ ಬಂಟರ ಸಮ್ಮಿಲನವನ್ನು ಆಯೋಜಿಸಿ, ಇದೀಗ ಮತ್ತೆ ಮುಂಬಯಿಯಲ್ಲಿ 6ನೇ ವಿಶ್ವ ಬಂಟರ ಸಮಾಗಮವನ್ನು ಬಂಟರ ಭಾವೈಕ್ಯದ ಸಂಕೇತವಾಗಿ ಇಂದು ಆಯೋಜಿಸಿದೆ. ಹಿಂದಿನ ಐದು ಸಮ್ಮಿಲನ ಯಶಸ್ಸಿನ ದ್ಯೋತಕವಾಗಿ, ಮುಂಬಯಿ ಬಂಟರ ಸಂಘದ ಸಂಪೂರ್ಣ ಸಹಕಾರದೊಂದಿಗೆ ಅಭೂತಪೂರ್ವ ಕಾರ್ಯಕ್ರಮವಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ ಎನ್ನಲು ಹರ್ಷವಾಗುತ್ತಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ನುಡಿದರು. ಡಿಸೆಂಬರ್ 7ರಂದು ಶನಿವಾರ ಕುರ್ಲಾ ಪೂರ್ವ ಬಂಟರ ಭವನದ ಶ್ರೀಮತಿ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಉದ್ಯಮಿ ಕೆ. ಡಿ ಶೆಟ್ಟಿಯವರ ಪ್ರಾಯೋಜಕತ್ವದ ದಡ್ಡಂಗಡಿ ಚೆಲ್ಲಡ್ಕ ಭವಾನಿ ದೇರಣ್ಣ ಶೆಟ್ಟಿ ವೇದಿಕೆಯಲ್ಲಿ ಬಂಟರ ಸಂಘದ ಸಂಪೂರ್ಣ ಸಹಕಾರದೊಂದಿಗೆ ಜರಗಿದ ವಿಶ್ವ ಬಂಟರ ಸಮಾಗಮ- 2024 ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟವು ವಿಶ್ವದ ವಿವಿಧಡೆ ಸ್ಥಾಪಿಸಲ್ಪಟ್ಟ ಸುಮಾರು 124 ಬಂಟರ ಸಂಘಗಳ ಒಗ್ಗೂಡುವಿಕೆಯಿಂದ ನಿರ್ಮಾಣಗೊಂಡ ಬಂಟರ ಸಮುದಾಯದ ಏಕಮೇವ ಕೇಂದ್ರೀಯ ಪ್ರಧಾನ ಸಂಸ್ಥೆಯಾಗಿದೆ. ಈ ಸಂಸ್ಥೆಯು ಮನೆ ಇಲ್ಲದ ಸಮಾಜ ಬಾಂಧವರಿಗೆ ಇದುವರೆಗೆ 350 ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಈಗಾಗಲೇ ಸುಮಾರು ಒಂದು ಸಾವಿರಕ್ಕೂ ಮಿಕ್ಕಿದ ಮನೆ ನಿರ್ಮಾಣ ಕುರಿತಾದ ಅರ್ಜಿಗಳು ನಮಗೆ ಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಮುಂದಿನ ದಿನಗಳಲ್ಲಿ ಮನೆಯನ್ನು ನಿರ್ಮಿಸಿ ಕೊಡಲಾಗುವುದೆಂದು ಅವರು ತಿಳಿಸಿದರು. ಜೊತೆಗೆ ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯ ಶಸ್ತ್ರ ಚಿಕಿತ್ಸೆ ಪಡೆಯುತ್ತಿರುವ ಸುಮಾರು ನೂರು ಬಂಧುಗಳನ್ನು ದತ್ತು ಸ್ವೀಕಾರ ಮಾಡಿ ಪ್ರತಿ ತಿಂಗಳು ಅವರ ಖಾತೆಗೆ ಹಣ ತಲುಪಿಸುವ ಮೂಲಕ ಸಹಾಯ ನೀಡುವುದಾಗಿ ನುಡಿದರು.
‘ದಾನಿಗಳೇ ನಮ್ಮ ದೇವರು’ ಅವರೆಲ್ಲರ ಸಹಾಯ- ಸಹಕಾರದಿಂದ ಇವೆಲ್ಲವನ್ನು ಮಾಡಲು ಸಾಧ್ಯವಾಗುತ್ತಿದೆ. ಇದ್ದವರಿಂದ ಪಡೆದು ಇಲ್ಲದವರ ಕಷ್ಟಕ್ಕಾಗಿ ಸಹಾಯ ನೀಡುವುದೇ ನಮ್ಮ ಧ್ಯೇಯವಾಗಿದ್ದು ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ದೇಣಿಗೆ ನೀಡುತ್ತಿದ್ದಾರೆ. ಇವೆಲ್ಲವನ್ನು ಸಮಾಜ ಬಾಂಧವರ ವಸತಿ, ಆರೋಗ್ಯ, ಶಿಕ್ಷಣ, ಹೆಣ್ಣು ಮಕ್ಕಳ ವಿವಾಹ ಇತ್ಯಾದಿ ಕಾರ್ಯಗಳಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದರು. 2018 ರಿಂದ 2024ರ ಏಳು ವರ್ಷಗಳ ಅವಧಿಯಲ್ಲಿ ಸುಮಾರು 30 ಕೋಟಿ ರೂಪಾಯಿ ಮೊತ್ತವನ್ನು ನಮ್ಮ ಸಮಾಜ ವಿವಿಧ ಜಾತಿಯ ಸಮಾಜದಲ್ಲಿರುವ ಅಶಕ್ತರಿಗೆ ಆರ್ಥಿಕ ಸಹಾಯ ರೂಪದಲ್ಲಿ ವಿತರಿಸಲಾಗಿದೆ.
ಇಂತಹ ಅನೇಕ ಸಮಾಜಮುಖಿ ಕಾರ್ಯಗಳ ವೆಚ್ಚ ಭರಿಸುವ ಉದ್ದೇಶದಿಂದ ಒಕ್ಕೂಟವು ಆದಾಯಕ್ಕಾಗಿ ಮೂಲ್ಕಿಯಲ್ಲಿ ಒಕ್ಕೂಟದ ಮಹಾದಾನಿ ಸದಾಶಿವ ಶೆಟ್ಟಿ ಕನ್ಯಾನ ಇವರ ಪ್ರಾಯೋಜಕತ್ವದಲ್ಲಿ ಕನ್ಯಾನ ಸದಾಶಿವ ಶೆಟ್ಟಿ ಕನ್ವೆನ್ವನ್ ಸೆಂಟರ್ ಎಂಬ ಸುಸಜ್ಜಿತ ಸಂಕೀರ್ಣವು ನಿರ್ಮಾಣವಾಗುತ್ತಿದೆ. ಒಕ್ಕೂಟದ ಮಹಾದಾನಿ, ತೋನ್ಸೆ ಆನಂದ ಎಂ. ಶೆಟ್ಟಿಯವರ ಪ್ರಾಯೋಜಕತ್ವದಲ್ಲಿ ‘ಶ್ರೀಮತಿ ಶಶಿರೇಖಾ ಆನಂದ್ ಶೆಟ್ಟಿ ವೇದಿಕೆ’ ಎಂಬ ಹವಾನಿಯಂತ್ರಿತ ಮುಕ್ತ ಸಭಾಂಗಣ ಹಾಗೂ ಮಹಾದಾನಿ ಶಶಿಧರ್ ಶೆಟ್ಟಿ ಬರೋಡ ಇವರ ಪ್ರಾಯೋಜಕತ್ವದಲ್ಲಿ ‘ಶಶಿ ಕಾಶಿ ಶೆಟ್ಟಿ ವೇದಿಕೆ’ ಎಂಬ ಹವಾನಿಯಂತ್ರಿತ ಸಭಾಂಗಣ ನಿರ್ಮಾಣವಾಗುತ್ತಿದೆ. ಇದಕ್ಕೆಲ್ಲಾ ದಾನಿಗಳ ಸಹಾಯ ಸಹಕಾರದ ಅಗತ್ಯವಿದೆ ಎಂದು ಅವರು ವಿನಂತಿಸಿದರು.
ಮುಖ್ಯವಾಗಿ ಮುಂಬಯಿಯಲ್ಲಿ ಯಶಸ್ವಿಯಾಗಿ ಜರಗುತ್ತಿರುವ ವಿಶ್ವ ಬಂಟರ ಸಮಾಗಮಕ್ಕೆ ತುಂಬು ಪ್ರೋತ್ಸಾಹ ನೀಡಿದ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮತ್ತು ಪದಾಧಿಕಾರಿಗಳು, ಸಂಘದ ಕಾರ್ಯಕಾರಿ ಸಮಿತಿ, ಪ್ರಾದೇಶಿಕ ಸಮಿತಿಗಳು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಇತರ ಬಂಟರ ಸಂಘ ಸಂಸ್ಥೆಗಳಿಗೆ, ದೇಶ ವಿದೇಶಗಳಿಂದ ಬಂದ ಅತಿಥಿ ಗಣ್ಯರಿಗೆ, ಕಾರ್ಯಕರ್ತರಿಗೆ, ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ಡಾ| ಆರ್. ಕೆ. ಶೆಟ್ಟಿಯವರ ಪರಿಶ್ರಮಯಕ್ಕೆ ತುಂಬು ಹೃದಯದ ಕೃತಜ್ಞತೆಗಳು ಸಲ್ಲಿಸಿದರು.
ವರದಿ : ಪ್ರೇಮನಾಥ ಶೆಟ್ಟಿ ಮುಂಡ್ಕೂರು