ಮೂಡುಬಿದಿರೆ: ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಮಹತ್ವದ ಪ್ರಯೋಗ, ನಾಡೋಜ ಹಂಪನಾ ವಿರಚಿತ ದೇಸೀ ಮಹಾಕಾವ್ಯದ ರಂಗರೂಪ “ಚಾರುವಸಂತ ” ನಾಟಕವು ಮತ್ತೆ ರಂಗಕ್ಕೆ ಬರಲು ಸಿದ್ಧತೆ ನಡೆಸಿದೆ. ನ.21 ,22 ರಂದು ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡಭವನದಲ್ಲಿ ಮೊದಲೆರಡು ಪ್ರದರ್ಶನ ಏರ್ಪಡಿಸಲಾಗಿದೆ. ಡಾ.ನಾ.ದಾಮೋದರ ಶೆಟ್ಟಿ ರಚಿಸಿದ, ಡಾ.ಜೀವನ್ ರಾಂ ಸುಳ್ಯ ನಿರ್ದೇಶನದ ಚಾರುವಸಂತವು ಕಳೆದ ವರ್ಷ ರಾಜ್ಯಾದ್ಯಂತ ಪ್ರದರ್ಶನ ನಡೆಸಿ ಸಂಚಲನ ಮೂಡಿಸಿತ್ತು. ಬಹುಬೇಡಿಕೆಯ ನಾಟಕವಾಗಿರುವ ಚಾರುವಸಂತ ಮತ್ತೆ ತನ್ನ ಚೈತ್ರಯಾತ್ರೆ ಕೈಗೊಳ್ಳಲಿದೆ. ನ.21 ರಂದು ಗುರುವಾರ ಸಂಜೆ 6.15 ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವರು ಚಾರುವಸಂತ ರಂಗ ಪಯಣವನ್ನು ಉದ್ಘಾಟಿಸಲಿದ್ದಾರೆ.
ಚಾರುವಸಂತ ನಾಟಕ ಕೃತಿಯನ್ನು ವಿಶ್ರಾಂತ ಕುಲಪತಿಗಳಾದ ಫ್ರೊ| ಬಿ.ಎ.ವಿವೇಕ ರೈ ಬಿಡುಗಡೆಗೊಳಿಸಲಿದ್ದಾರೆ. ನಾಟಕಕಾರ ನಾ.ದಾಮೋದರ ಶೆಟ್ಟಿ ಉಪಸ್ಥಿತರಿರುವರು. ಬಳಿಕ ಸಂಜೆ 6.45 ಕ್ಕೆ “ಚಾರುವಸಂತ” ನಾಟಕ ಪ್ರದರ್ಶನ ನಡೆಯಲಿದೆ. ನ.22ರಂದು ಶುಕ್ರವಾರ ಯಾವುದೇ ಸಭಾ ಕಾರ್ಯಕ್ರಮ ಇರದೆ ಆದಿನ ಸಂಜೆ 6.30 ಕ್ಕೆ ನಾಟಕ ಆರಂಭವಾಗಲಿದೆ. ನಾಟಕಕ್ಕೆ ಪ್ರವೇಶ ಉಚಿತವಾಗಿರುತ್ತದೆ ಎಂದು ಆಳ್ವಾಸ್ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಮೋಹನ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.