“ತುಳುನಾಡು ಮತ್ತು ತುಳುನಾಡಿನಾದ್ಯಂತ ಆರಾಧನೆಗೊಳ್ಳುತ್ತಿರುವ ಸಾರತ್ತೊಂಜಿ ದೈವಗಳು ಹಾಗೂ ಅರುವತ್ತಾರು ಕೋಟಿ ನಾಗಗಳು ಬೆರ್ಮೆರ್ ನ ಸೃಷ್ಟಿ” ಎಂಬುದು ತುಳುನಾಡಿನ ಮೂಲ ಧರ್ಮ ನಾಗ ಮೂಲ ಪರಂಪರೆಯ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ, ನಾಗಾರಾಧನೆ ಹಾಗೂ ದೈವರಾಧನೆಗಳ ಹಿಂದಿರುವ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸ. “ತುಳುನಾಡು ಬೆರ್ಮೆರ್ ನ ಸೃಷ್ಟಿ” ಎಂದು ಬೆರ್ಮೆರ್ ನ ಪಾಡ್ದನ ಹಾಗೂ ದೈವಗಳ ಸಂಧಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾಗಿದೆ.
“ತುಳುನಾಡು ಬಲಿಯೇಂದ್ರನ ರಾಜ್ಯ” ಎಂಬುದು ಅನಾದಿ ಕಾಲದಿಂದಲೂ ಅಸ್ತಿತ್ವದಲ್ಲಿರುವ ತುಳುವರ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸ. ತುಳುನಾಡಿನಾದ್ಯಂತ ತುಳುವರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಆಟಿ ಅಮಾವಾಸ್ಯೆ, ಸೋಣ ಸಂಕ್ರಾಂತಿ ಹಾಗೂ ದೀಪಾವಳಿ ಅಮಾವಾಸ್ಯೆಯ ಧಾರ್ಮಿಕ ಆಚರಣೆಗಳು ಪ್ರಾಚೀನ ಕಾಲದಲ್ಲಿ ತುಳುನಾಡು ಬಲಿಯೇಂದ್ರನ ರಾಜ್ಯವಾಗಿತ್ತು ಎಂಬುದನ್ನು ನಿಸ್ಸಂದೇಹವಾಗಿ ದೃಢಪಡಿಸುತ್ತವೆ. ತುಳುವರ ನಂಬಿಕೆಯಂತೆ ಆಟಿ ಅಮಾವಾಸ್ಯೆಯ ದಿನ ಬಲಿಯೇಂದ್ರನ ಆಳು ಸೋಣ ತಿಂಗಳ ಸಂಕ್ರಮಣದಂದು ಬಲಿಯೇಂದ್ರನ ತಾಯಿ ಹಾಗೂ ದೀಪಾವಳಿ ಅಮಾವಾಸ್ಯೆಯ ಮೂರು ದಿನ ಸ್ವತಃ ಬಲಿಯೇಂದ್ರ ತುಳುನಾಡನ್ನು ಸಂದರ್ಶಿಸುತ್ತಾರೆ.
ತುಳುನಾಡನ್ನು ಬಲಿಯೇಂದ್ರನ ಆಳು ಸಂದರ್ಶಿಸುವ ಆಟಿ ಅಮಾವಾಸ್ಯೆಯಂದು ತುಳುವರು ಗದ್ದೆಗಳಲ್ಲಿ ಕಾಸರಕ ಗಿಡದ ಗೆಲ್ಲನ್ನು ನೆಡುವ ಮೂಲಕ ಬಲಿಯೇಂದ್ರನ ಆಳನ್ನು ಸ್ವಾಗತಿಸಿದರೆ ಬಲಿಯೇಂದ್ರನ ತಾಯಿ ತುಳುನಾಡನ್ನು ಸಂದರ್ಶಿಸುವ ಸೋಣ ಸಂಕ್ರಾಂತಿಯಂದು ಮನೆಯ ಹೆಣ್ಣು ಮಕ್ಕಳು ಮನೆಯ ಹೊಸ್ತಿಲನ್ನು ಶೃಂಗರಿಸಿ ಹೊಸ್ತಿಲಲ್ಲಿ ಹೂವುಗಳನ್ನಿಟ್ಟು ದೀಪವನ್ನು ಹಚ್ಚಿ ಬಲಿಯೇಂದ್ರನ ತಾಯಿಯನ್ನು (ತಡ್ಡೆದ್ದ ಅಜ್ಜಿ) ಸ್ವಾಗತಿಸಿ ನಮಿಸಿ ಪೂಜಿಸುತ್ತಾರೆ. ಇನ್ನು ದೀಪಾವಳಿ ಅಮಾವಾಸ್ಯೆಯ ದಿನ ಸೂರ್ಯಾಸ್ತದ ನಂತರ ತುಳುನಾಡಿನಾದ್ಯಂತ ಲಕ್ಷಾಂತರ ತುಳುವರು ತಮ್ಮ ಹೊಲಗದ್ದೆಗಳಲ್ಲಿ ದೊಂದಿ ದೀಪಗಳನ್ನು ಹಚ್ಚಿ ಬಲಿಯೇಂದ್ರನನ್ನು ಜೋರಾಗಿ ಕರೆದು ಸ್ವಾಗತಿಸುವ ಮೂಲಕ “ಬಲಿಯೇಂದ್ರನ ರಾಜ್ಯವಾಗಿದ್ದ ತುಳುನಾಡು ಪರಶುರಾಮ ಸೃಷ್ಟಿ ಅಲ್ಲವೇ ಅಲ್ಲ” ಎಂಬ ಸಂದೇಶವನ್ನು ಜಗತ್ತಿಗೆ ಸ್ಪಷ್ಟವಾಗಿ ಸಾರಿ ಸಾರಿ ಹೇಳುತ್ತಾರೆ.
ಹೀಗೆ ತುಳುನಾಡಿನ ಮೂಲ ನಿವಾಸಿಗಳಾದ ನಾಗ ಮೂಲ ಪರಂಪರೆಯ ಮಾತೃಮೂಲೀಯ ಅವೈದಿಕ ತೌಳವ ಧರ್ಮೀಯರು ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಂತಹ ಮೂಲ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗಳಂತೆ “ತುಳುನಾಡು ಬೆರ್ಮೆರ್ ನ ಸೃಷ್ಟಿ ಹಾಗೂ ಬಲಿಯೇಂದ್ರನ ರಾಜ್ಯ” ಎಂಬುದು ನಿಸ್ಸಂಶಯ. ಶ್ರೀ ಮಹಾವಿಷ್ಣುವಿನ ಐದನೇಯ ಅವತಾರವಾದ ವಾಮನಾವತಾರದ ಕಾಲದಲ್ಲಿ ಬಲಿಯೇಂದ್ರ ಆಳುತ್ತಿದ್ದ “ಬಲಿಯೇಂದ್ರನ ರಾಜ್ಯ ತುಳುನಾಡ”ನ್ನು ಮಹಾವಿಷ್ಣುವಿನ ಆರನೇಯ ಅವತಾರವಾದ ಪರಶುರಾಮರು ಸೃಷ್ಟಿಸಲು ಹೇಗೆ ಸಾಧ್ಯ ಎಂಬ ಪ್ರಶ್ನೆಗೆ “ತುಳುನಾಡು ಪರಶುರಾಮ ಸೃಷ್ಟಿ” ಎಂದು ಹೇಳುವವರು ದಯವಿಟ್ಟು ಉತ್ತರಿಸಲೇಬೇಕು. ತುಳುನಾಡಿನ ಮೂಲ ಧರ್ಮ ನಾಗ ಮೂಲ ಪರಂಪರೆಯ ಮಾತೃಮೂಲೀಯ ಅವೈದಿಕ ತೌಳವ ಧರ್ಮದ ಮೂರು ಮೂಲ ಧಾರ್ಮಿಕ ಆಚರಣೆಗಳಾದ ಬೆರ್ಮೆರಾಧನೆ, ನಾಗಾರಾಧನೆ ಹಾಗೂ ದೈವರಾಧನೆಗಳ ಹಿಂದಿರುವ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸಗಳನ್ನು ವೈದಿಕ ಪುರಾಣಗಳ ಕಾಲ್ಪನಿಕ ಕಟ್ಟು ಕಥೆಗಳ ಮೂಲಕ ವಿಕೃತಗೊಳಿಸಿ ತನ್ಮೂಲಕ ಅವೈದಿಕ ತೌಳವ ಧರ್ಮದ ಸರಳ ಹಾಗೂ ಮುಗ್ಧ ಮೂಲ ಧಾರ್ಮಿಕ ಆಚರಣೆಗಳನ್ನು ವೈದಿಕಕರಣ, ವೈಭವೀಕರಣ ಹಾಗೂ ವಾಣಿಜ್ಯಕರಣಗಳ ವಿಷ ವರ್ತುಲಗಳಲ್ಲಿ ಸಿಲುಕಿಸಿ ತಮ್ಮ ಕಿಸೆ ಹಾಗೂ ಜೋಳಿಗೆಗಳನ್ನು ತುಂಬಿಸಿಕೊಳ್ಳುತ್ತಾ ತುಳುನಾಡಿನ ಅನನ್ಯ ಸರಳ ಹಾಗೂ ಮುಗ್ಧ ಅವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳನ್ನು ಸರ್ವನಾಶ ಮಾಡುತ್ತಾ ಬಂದಿರುವ ದುರುಳ ವ್ಯಾಪಾರಿ ಕೂಟಗಳ ಸಂಘಟಿತ ಷಡ್ಯಂತ್ರಗಳ ವಿರುದ್ಧ ಇನ್ನಾದರೂ ತುಳುನಾಡಿನ ಹಿಂದೂ ಸಮಾಜದ ಶೇಕಡಾ ತೊಂಭತ್ತಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿರುವ ಅಳಿಯ ಸಂತಾನಿಗ ಅವೈದಿಕ ತೌಳವ ಧರ್ಮೀಯರು ಜಾಗೃತರಾಗಲಿ. ತುಳುನಾಡಿನ ಸನಾತನ ಧಾರ್ಮಿಕ ನಂಬಿಕೆ ಹಾಗೂ ಆಚರಣೆಗಳನ್ನು ಉಳಿಸಿಕೊಳ್ಳಲು ಪ್ರತಿಜ್ಞಾ ಬದ್ಧರಾಗಲಿ. ಸನಾತನ ತೌಳವ ಧರ್ಮದ ಮೂಲ ಧಾರ್ಮಿಕ ನಂಬಿಕೆ ಹಾಗೂ ವಿಶ್ವಾಸಗಳನ್ನು ಉಳಿಸಿ, ತೌಳವ ಸಂಸ್ಕೃತಿ ರಕ್ಷಿಸಿ.
ಜೈ ತುಳುನಾಡು.
ಬರಹ : ಶಶಿಕಾಂತ್ ಶೆಟ್ಟಿ ಕಟಪಾಡಿ