ಸಿನೇಮಾ ತಲುಬು ಬಿಟ್ಟು ದಶಕಗಳು ಕಳೆದಿವೆ. ಪ್ರತೀ ಕನ್ನಡ ಸಿನೇಮಾಗಳ ಪ್ರೀಮಿಯರ್ ಶೋ ನೋಡುತ್ತಿದ್ದ ಕಾಲವಿತ್ತು. ಕಸುಬೇ ಹಾಗಿತ್ತು. ಮೊನ್ನೆ ರಾನಿ ಸಿನೇಮಾ ನೋಡಿ ಬಂದೆ. ಬಂದ ತಕ್ಷಣ ಅದಕ್ಕೇ ಯಾವುದೇ ರಿಯಾಕ್ಟ್ ಮಾಡಿಲ್ಲ. ಈ ವಾರವೇ ಹತ್ತಕ್ಕೂ ಹೆಚ್ಚು ಕನ್ನಡ ಸಿನೇಮಾ ಬಿಡುಗಡೆಯಾಗಿದೆ. ಅದೆಲ್ಲದರ ನಡುವೆ ಮಾಸ್ ಸಿನೇಮ ರಾನಿ ಸ್ಪರ್ಧೆಯಲ್ಲಿದೆ. ಚಾಕ್ಲೇಟ್ ಹೀರೋನಂತೆ ಕಾಣಿಸುವ ಕಿರಣ್ ರಾಜ್ ಫೇಸು ಮಾಸ್ ಸಿನೇಮಾಕ್ಕೂ ಪೋಸು ಕೊಡಬಲ್ಲದು ಎನ್ನುವುದನ್ನ ನಿರ್ದೇಶಕ ಗುರುತೇಜ್ ಶೆಟ್ಟಿ ಅದ್ಭುತವಾಗಿ ತೋರಿಸಿದ್ದಾರೆ. ಕ್ಯಾಮರಾ ಕೈ ಚಳಕದ ರಾಘವೇಂದ್ರ ಕೋಲಾರ ಪ್ರತೀ ಫ್ರೇಮಿನಲ್ಲೂ ಇಷ್ಟವಾಗುತ್ತಾರೆ. ಇದು ಪಕ್ಕಾ ಫ್ಯಾಮಿಲಿ ಆಕ್ಷನ್ ಜಾನರ್.
ಬಹುತೇಕ ನಿರ್ದೇಶಕರು ಹೀರೋ ಕೈಗೆ ಮಚ್ಚು ನೀಡೋಕೆ ಅದೇ ಹಳೆ ಕಾರಣದ ಕಥೆ ಹೆಣೆಯುತ್ತಾರೆ. ಪ್ರತೀ ಸೀನುಗಳನ್ನೂ ಕುಂತಲ್ಲೇ ನಿರ್ಧರಿಸಿ ಬಿಡಬಹುದು. ಆದರೆ ರಾನಿ ಹಾಗಲ್ಲ! ನಟನಾಗಬೇಕು ಎನ್ನುವ ಉತ್ಕಟ ಕನಸಿರಿಸಿಕೊಂಡ ಹುಡುಗನೊಬ್ಬ ಬದುಕಿನ ಮಾಯಾಜಾಲಕ್ಕೆ ಸಿಲುಕಿ ಡಾನ್ ಆಗಿ ಬಿಡುವ ಕಥೆಯಿದು. ಕ್ಷಣ ಕ್ಷಣಕ್ಕೂ ಸಿನೇಮಾ, ಟ್ವಿಸ್ಟುಗಳ ಮೇಲೆ ಟ್ವಿಸ್ಟುಗಳ ಜೊತೆ ಸಾಗುತ್ತದೆ. ರಾನಿ ನೋಡಿದವರ ಅಭಿಪ್ರಾಯ ಕೇಳಿದರೆ ಹೆಚ್ಚಾಗಿ ಹೆಣ್ಣುಮಕ್ಕಳಿಗೇ ಈ ಸಿನೇಮಾ ಇಷ್ಟವಾಗಿ ಬಿಟ್ಟಿದೆ. ಹುಡುಕಿದರೂ ನಿಮಗಿಲ್ಲಿ ಸಣ್ಣದೊಂದು ಅಸಭ್ಯವಾದ ಡೈಲಾಗ್ ಇಲ್ಲ. ಬೇಡವಿತ್ತು ಅಂತನ್ನಿಸುವ ದೃಶ್ಯವಿಲ್ಲ, ಅಮ್ಮನ ಜೊತೆಗೆ ಸಿನೇಮಾಕ್ಕೆ ಹೋದರೂ ’ಯಾಕ್ ಕರ್ಕೊಂಡ್ ಬಂದ್ನೋ’ ಅನ್ನಿಸುವಂತೆ ಸಿನೇಮಾ ಮಾಡೋದಿಲ್ಲ.
ಹೀರೋ ಆಗಿ ಮೆರೆಯಬೇಕು. ಕಟೌಟುಗಳು ಬೀಳಬೇಕು ಎನ್ನುವ ಕನಸು ರಾನಿಗಿತ್ತು. ಅದು ನನಸೂ ಆಗುತ್ತದೆ. ಆದರೆ ಅದರ ಸ್ವರೂಪ ಬೇರೆಯದಾಗಿರುತ್ತದೆ. ಸಿನೇಮಾದ ಹಾಡುಗಳು ಮತ್ತೆ ಮತ್ತೆ ಗುನುಗಿಕೊಳ್ಳುವಂತಿದೆ. ಬಿ.ಜಿ.ಎಂ. ಕೇಳಿದರೆ ರವಿ ಬಸ್ರೂರ್ ನೆನಪಾಗುತ್ತಾರೆ! ಅವರ ಅಳಿಯ ಸಚಿನ್ ಬಸ್ರೂರ್ ಕರಾಮತ್ತು, ಮಣಿಕಾಂತ್ ಕದ್ರಿ ಮತ್ತು ಪ್ರಮೋದ್ ಮರವಂತೆಯ ಅದ್ಭುತವಾದ ಕಾಂಬಿನೇಶನ್. ಪ್ರಮೋದ್ ಸಾಹಿತ್ಯ ಮಸ್ತ್ ಮೆಚ್ಯೂರ್ಡ್.
ವಿಲನ್ ಪಾತ್ರದ ರವಿಶಂಕರ್ ಇಡೀ ಸಿನೇಮಾ ಆವರಿಸಿಕೊಳ್ಳುತ್ತಾರೆ. ಅವರ ಫ್ರೇಮ್ ಇನ್ನೂ ಮುಂದುವರಿಯಲಿ ಎನ್ನುವಷ್ಟು ವಜನ್ನು ತುಂಬಿದ್ದಾರೆ ಸಿನೇಮಾಕ್ಕೆ. ಸಿನೇಮಾದ ಮೈನಸ್ ಪಾಯಿಂಟ್ಸ್ ಎಂದರೆ ಹಾಸ್ಯಕ್ಕಾಗಿ ಬಲವಂತ ಮಾಡಿ ಎರಡು ಕ್ಯಾರೆಕ್ಟರ್ ಸೃಷ್ಠಿ ಮಾಡಿದ್ದಾರೆ ನಿರ್ದೇಶಕರು. ಅದರ ಅಗತ್ಯ ಅಷ್ಟೇನು ಕಾಡುತ್ತಿರಲಿಲ್ಲ. ರಮೇಶ್ ಭಟ್ ಸಾಧು ಕೋಕಿಲ ಇಬ್ಬರೂ ಈ ಸಿನೇಮಾ ನೋಡುವಾಗ ಅದೇಕೋ ನೆನಪಾಗಿ ಬಿಟ್ಟರು. ರಾನಿ ಬ್ಯಾಕ್ ಲೈನ್ ಹೇಳೋದಕ್ಕೆ ರಮೇಶ್ ಭಟ್ ಮತ್ತು ಹಾಸ್ಯಕ್ಕೆ ಸಾಧು ಇದ್ದಿದ್ದರೆ ಈ ಸಿನೇಮಾದ ರೇಂಜು ಇನ್ನಷ್ಟು ಹೈಪ್ ತೆಗೆದುಕೊಳ್ಳುತ್ತಿತ್ತೇನೋ . ಯಶ್ ಜೊತೆ ಚಿಕ್ಕಣ್ಣ ತರಹದ ಕ್ಯಾರೆಕ್ಟರ್ ಮರ್ಜ್ ಆದ ಹಾಗೆ ಇಲ್ಲಿ ಆಗಿಲ್ಲ.
ಹದಿನಾರು ವರ್ಷಗಳ ಕಾಲ ಸಿನೇಮಾ ರಂಗದಲ್ಲಿ ಮಣ್ಣು ಹೊತ್ತು, ಪತ್ರಕರ್ತನಾಗಿಯೂ ದುಡಿದ ಗೆಳೆಯ ಗುರುತೇಜ್ ಶೆಟ್ಟಿ ಪೈವ್ ಜಿ ಮತ್ತು ಬಡ್ಡೀಸ್ ಸಿನೇಮಾದ ನಂತರ ಬಹು ನಿರೀಕ್ಷೆಯಲ್ಲಿ ರಾನಿ ಸಿನೇಮಾ ಮಾಡಿ ಮುಗಿಸಿದ್ದಾರೆ. ಸಿನೇಮಾ ಗೆದ್ದಿದೆ. ಸಿನೇಮಾದ ಡೈಲಾಗ್ ಸಕ್ಕತ್ ಕಿಕ್ ಕೊಡುತ್ತದೆ. ಸೆಟ್ಟಿಂಗ್ ಮತ್ತು ಸೀನ್ ಗಳು ನಿಮ್ಮನ್ನ ಕಥೆ ನಡೆಯುತ್ತಿರುವ ಕರೆದೊಯ್ಯುತ್ತದೆ. ಹೀಗಿನ ಕಥೆ ಬಹುತೇಕರ ಬದುಕಿನದ್ದೂ ಆಗಿರುತ್ತದೆ. ಸಿನೇಮಾ ನೋಡುತ್ತಿರುವಾಗ ಅದೆಷ್ಟೋ ಜನರಿಗೆ ಇದು ನನ್ನದೇ ಕಥೆ ಅಂತಲೂ ಅನ್ನಿಸಬಹುದು. ಮೂರು ನಾಯಕಿಯರಿಗೂ ಸಮಾನವಾದ ವಜನ್ನು ಎಲ್ಲಾ ನಿರ್ದೇಶಕರಿಗೂ ಸಾಧ್ಯವಾಗುವುದಿಲ್ಲ! ಆದರೆ ಇಲ್ಲೂ ಕೂಡ ಗುರುತೇಜ್ ಶೆಟ್ಟಿ ತನ್ನ ತಲೆ ಭರ್ತಿ ಉಪಯೋಗಿಸಿದ್ದಾರೆ. ಮೂರೂ ನಾಯಕಿಯರ ಪಾತ್ರ ಸಿನೇಮಾದ ಟ್ವಿಸ್ಟಿಗೆ ಪುಷ್ಠಿ ಕೊಟ್ಟಿದೆ. ಯಾವ ಕಡೆ ಹಾಕಿದರೂ ಅದಕ್ಕೆ ಸೆಟ್ ಆಗಬಲ್ಲ ನಟನೊಬ್ಬ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದು ಖುಶಿ. ಆತ ಕರಾವಳಿಯವ ಎನ್ನುವುದು ಡಬಲ್ ಖುಶಿ. ರಾನಿ ನೀವು ನೋಡಲೇ ಬೇಕಾದ ಸಿನೇಮಾ.
ಬರಹ : ವಸಂತ್ ಗಿಳಿಯಾರ್