ಸೆಪ್ಟೆಂಬರ್ 13 ರಂದು ಶುಕ್ರವಾರ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ಕರ್ನಾಟಕ ಸಂಘದ ವತಿಯಿಂದ ನಡೆಸಿಕೊಂಡು ಬರುತ್ತಿರುವ ವಾರಾಂತ್ಯದ ಕನ್ನಡ ತರಗತಿ ಪುನರಾರಂಭೋತ್ಸವ ಸರಳ ರೀತಿಯಲ್ಲಿ ಸುಂದರವಾಗಿ ಜರುಗಿತು. ಮೊದಲಿಗೆ ಪ್ರಸಕ್ತ ಸಾಲಿನ ಕರ್ನಾಟಕ ಸಂಘದ ಕನ್ನಡ ಅಭಿವೃದ್ಧಿ ಕಾರ್ಯದರ್ಶಿಗಳಾದ ಭೀಮಪ್ಪ ಖೋತ ಅವರ ಸಂಕ್ಷಿಪ್ತ ಪ್ರಾಸ್ತವಿಕ ನುಡಿಗಳಿಂದ ಆರಂಭಿಸಿ, ಮಕ್ಕಳನ್ನು, ಪಾಲಕರನ್ನು ಸ್ವಾಗತಿವುದರೊಂದಿಗೆ, ಹೊಸದಾಗಿ ಕನ್ನಡ ಕಲಿಸುವ ಆಸಕ್ತಿ ತೋರಿಸಿ ಯಾವುದೇ ಫಲಾಪೇಕ್ಷೆ ಇಲ್ಲದೇ ನಿಸ್ವಾರ್ಥದಿಂದ, ಮಕ್ಕಳಿಗೆ ಕನ್ನಡ ಹೇಳಿಕೊಡಲು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿರುವ ಕನ್ನಡ ಶಿಕ್ಷಕಿ ವೇದಾವತಿ ಅವರನ್ನು ಸಭೆಗೆ ಪರಿಚಯಿಸಿದರು. ಹಾಗೇ ತರಗತಿಯ ಪುನರಾರಂಭದಲ್ಲಿ ವಿಳಂಬಕ್ಕೆ ಕಾರಣ ನೀಡಿ ವಿಷಾದ ವ್ಯಕ್ತಪಡಿಸಿದರು.
ಕನ್ನಡ ನಮ್ಮ ಹೆಮ್ಮೆಯ ಅಸ್ಮಿತೆ. ಅದನ್ನು ದಿನ ನಿತ್ಯ ಬಳಸೋಣ, ಬೆಳೆಸೋಣ. ಆ ಮೂಲಕ ಕನ್ನಡ ಉಳಿಸೋಣವೆಂದು ಕೋರಿದರು ಹಾಗೂ ಈ ನಿಟ್ಟಿನಲ್ಲಿ ಪಾಲಕರ ಸಲಹೆ ಸಹಕಾರ ಮುಕ್ತವಾಗಿ ತಿಳಿಸಲು ಕೋರುತ್ತಾ, ಸರ್ವರಿಗೂ ಸಂಘದ ಸದಸ್ಯರಾಗಲು ಪ್ರೇರೇಪಿಸಿ, ಸಂಘದ ಬೆಳ್ಳಿ ಹಬ್ಬದ ಈ ಸಂದರ್ಭದಲ್ಲಿ ನಮ್ಮೆಲ್ಲರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಪುನರುಚ್ಚರಿಸುತ್ತಾ, ಕರ್ನಾಟಕ ಸಂಘದ ಅಧ್ಯಕ್ಷರಾದ ರವಿ ಶೆಟ್ಟಿ ಅವರಿಗೆ ಕಾರ್ಯಕ್ರಮ ಉದ್ದೇಶಿಸಿ ಅನಿಸಿಕೆ ಹಂಚಿಕೊಳ್ಳಲು ವಿನಂತಿಸಿಕೊಂಡರು.
ರವಿ ಶೆಟ್ಟಿಯವರು ಎಲ್ಲರನ್ನೂ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಾ, ಕನ್ನಡ ತರಗತಿಯ ಸುಮಾರು ಒಂದೂವರೆ ದಶಕದ ಹಿಂದೆ ಅಂದಿನ ಸಂಘದ ಅಧ್ಯಕ್ಷರು, ಪ್ರಸ್ತುತ ಸಲಹಾ ಸಮಿತಿಯ ಹಿರಿಯ ಸದಸ್ಯರಾದ ಅರುಣ ಕುಮಾರವರ ಆಸಕ್ತಿ ಹಾಗೂ ಮುಂದಾಳತ್ವದಲ್ಲಿ ಪ್ರಾರಂಭದ ಸಂಧರ್ಭ ವಿವರಿಸಿ ಆ ದಿನಗಳ ಗತವೈಭವವನ್ನು ಮೆಲುಕು ಹಾಕುವುದರೊಂದಿಗೆ, ಹಿಂದಿನ ಎಲ್ಲಾ ಅಧ್ಯಕ್ಷರ ಹಾಗೂ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು. ಹಾಗೇಯೇ ಅಂದಿನಿಂದ ಇಂದಿನವರೆಗೆ ನಡೆದು ಬಂದ ದಾರಿಯನ್ನು ವಿವರಿಸಿದರು. ಮುಂದೆಯೂ ಕೂಡಾ ಪಾಲಕರು ಹಾಗೂ ಸಂಘ ಒಟ್ಟಿಗೆ ಕನ್ನಡ ಕಟ್ಟುವ ಕೆಲಸ ಕಾರ್ಯ ಮಾಡೋಣವೆಂದು ಸ್ಫೂರ್ತಿ ತುಂಬಿದರು.
ಸಂಘದ ಖಜಾಂಚಿಗಳು ಹಾಗೂ ವಾರಾಂತ್ಯ ಕನ್ನಡ ತರಗತಿಯ ಅಧ್ಯಾಪಕರಾದ ಪ್ರದೀಪ್ ಕುಮಾರ್ ಅವರು ಮಕ್ಕಳ ಹಾಗೂ ಪಾಲಕರಲ್ಲಿ ದಿನನಿತ್ಯ ಕನ್ನಡ ಬಳಿಸುವುದರ ಬಗ್ಗೆ ಒತ್ತು ಕೊಟ್ಟು, ನಿರಂತರವಾಗಿ ವಿವಿಧ ಆಯಾಮಗಳಲ್ಲಿ ಕನ್ನಡವನ್ನು ಹೇಗೆಲ್ಲ ಒಗ್ಗೂಡಿಸಿಕೊಳ್ಳಬಹುದು, ಅಲ್ಲದೇ ಕನ್ನಡದ ಹೆಚ್ಚಿನ ಅಧ್ಯಯನದ ಪ್ರಾಮುಖ್ಯತೆಯನ್ನು ವಿವರಿಸಿದರು. ಸಂಘದ ಉಪಾಧ್ಯಕ್ಷರಾದ ರಮೇಶ ಅವರು, ಎಂದಿನಂತೆ ಕನ್ನಡ ತರಗತಿ ನಡೆಸಿಕೊಂಡು ಹೋಗುವುದರೊಂದಿಗೆ ಮುಂದೆಯೂ ಕೂಡಾ ಮಕ್ಕಳಲ್ಲಿ ಕನ್ನಡ ಕಲಿಯುವ ಆಸಕ್ತಿ ಹೆಚ್ಚಿಸುವ ಬಗ್ಗೆ ಬೇರೆ ಬೇರೆ ವಿಧಾನಗಳನ್ನು ಅಳವಡಿಸಿ ಕೊಳ್ಳೋಣವೆಂದು ತಿಳಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಕುಮಾರ ಸ್ವಾಮಿ ಅವರು ಮಾತನಾಡುತ್ತಾ, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಮಕ್ಕಳು ಹಾಗೂ ಪಾಲಕರನ್ನು ಅಭಿನಂದಿಸಿ, ನಿರಂತರವಾಗಿ ಎಲ್ಲರೂ ಒಟ್ಟಾಗಿ ಕನ್ನಡ ಕಲಿಸುವ ಕಾಯಕದಲ್ಲಿ ಮುಂದೆ ಸಾಗೋಣವೆಂದು ಪ್ರೋತ್ಸಾಹಿಸಿದರು. ಸಂಘದ ಜಂಟಿ ಕಾರ್ಯದರ್ಶಿಗಳಾದ ಶ್ರೀಯುತ ಎಲ್ ಜಿ ಪಾಟೀಲ ಅವರು ಮಾತನಾಡುತ್ತಾ, ಬೆಳ್ಳಿಹಬ್ಬದ ಹೊಸ್ತಿಲಲ್ಲಿ ಮತ್ತಷ್ಟು ಹೊಸ ಹುಮ್ಮಸ್ಸಿನಿಂದ ಮುಂದಿನ ಪೀಳಿಗೆಗೆ ಕನ್ನಡ ಕಲಿಸುವ ಕಾರ್ಯದಲ್ಲಿ ದಣಿವರಿಯದೆ ಮುಂದುವರಿಯೋಣ ಎಂದು ವಿನಂತಿಸಿ ಕೊಂಡರು. ನಂತರ ಒಂದು ಗಂಟೆ ಕಾಲ ಮಕ್ಕಳಿಗೆ ಕನ್ನಡ ಕಲಿಕೆಯ ತರಗತಿ ವೇದಾವತಿ ಅವರಿಂದ ಮುಂದುವರಿಯಿತು.
ಕೊನೆಗೆ ತರಗತಿ ಅವಧಿ ಮುಗಿದ ನಂತರ ಮಧು ಎಚ್ ಕೆ, ಸಂಘದ ಮಾಜಿ ಅಧ್ಯಕ್ಷರು ಹಾಗೂ ಪ್ರಸಕ್ತ ಸಾಲಿನ ಸಲಹಾ ಸಮಿತಿ ಸದಸ್ಯರು, ಮಕ್ಕಳೊಂದಿಗೆ ಮಾತುಕತೆ ನಡೆಸುತ್ತಾ ಕನ್ನಡದ ಹೆಮ್ಮೆ, ಹಾಗೂ ಬಳಕೆ ಹೇಗಿರಬೇಕೆಂದು ಉದಾಹರಣೆಗಳ ಮೂಲಕ ಸರ್ವರಿಗೂ ಅರ್ಥ ವಾಗುವ ರೀತಿಯಲ್ಲಿ ಸರಳವಾಗಿ ವಿವರಿಸಿದರು. ಇದಕ್ಕೂ ಮುಂಚೆ ಮಕ್ಕಳು ಒಕ್ಕೊರಳಿನಿಂದ ನಮಸ್ಕಾರ ಸರ್ ಎಂದು ಮಧು ಅವರಿಗೆ ಸ್ವಾಗತಿಸಿದ್ದು ಹಾಗೂ ಕೊನೆಯಲ್ಲಿ ಒಟ್ಟಾಗಿ ಹುಮ್ಮಸ್ಸಿನಿಂದ ಧನ್ಯವಾದಗಳು ಸರ್ ಎಂದು ಹೇಳಿದ್ದು ತುಂಬಾ ವಿಶೇಷವಾಗಿತ್ತು. ಕೊನೆಯಲ್ಲಿ ಮಕ್ಕಳಿಗೆ ಸಿಹಿ ತಿಂಡಿ ಹಂಚುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.