ಕಾರ್ಕಳ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಇದರ ಪದಗ್ರಹಣ ಮತ್ತು ಇಂಜಿನಿಯರ್ಸ್ ಡೇ ಆಚರಣೆ ಸ್ಥಳೀಯ ಹೋಟೆಲ್ ಪ್ರಕಾಶ್ ನ ಸಂಭ್ರಮ ಸಭಾಂಗಣದಲ್ಲಿ ಜರಗಿತು. ಮುನಿಯಾಲು ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಉದ್ಘಾಟಿಸಿ, ಸ್ವಂತ ಕಟ್ಟಡದ ಅಗತ್ಯವಿದ್ದು ಸಿವಿಲ್ ಇಂಜಿನಿಯರ್ ಗಳಿಗೆ ಮಾನವೀಯತೆ ಅಗತ್ಯ ಎಂದರು.
ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಸಿವಿಲ್ ಇಂಜಿನಿಯರ್ ಗಳಿಂದ ನಿರಂತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಸ್ವರ್ಣ ಕಾರ್ಕಳ ಎಂಬ ಹೊಸ ಕಲ್ಪನೆಯೊಂದಿಗೆ ಕಾರ್ಕಳ ಬೆಳೆಯುತ್ತಿದ್ದು ಅದರ ಮುಂದಿನ ಯೋಜನೆಗಳಿಗೆ ಅಸೋಸಿಯೇಷನ್ ನ ಸಹಕಾರ ಅಗತ್ಯ ಎಂದರು. ಮಂಗಳೂರು ಯೆಯ್ಯಾಡಿ ಮಂಜೇಶ್ವರ ಟೆಕ್ನೋ ಟ್ರೇಡರ್ಸ್ ನ ಅನಿಲ್ ಬಾಳಿಗ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೂತನ ಅಧ್ಯಕ್ಷ ವಿಜಯರಾಜ್ ಶೆಟ್ಟಿ ಮಾತನಾಡಿ, ಪೂರ್ವಾಧ್ಯಕ್ಷರ ಸಹಕಾರದಿಂದ ಕಾರ್ಯಕ್ರಮವನ್ನು ಉತ್ತಮ ರೀತಿಯಲ್ಲಿ ನಡೆಸುವುದಾಗಿ ತಿಳಿಸಿದರು. ಮಂಗಳೂರು ಎಂ.ಸಿ.ಎಫ್ ನ ಜಾಯಿಂಟ್ ಜನರಲ್ ಮ್ಯಾನೇಜರ್ ಕೆ.ಬಿ. ಕೀರ್ತನ್ ಕುಮಾರ್, ಟೆಕ್ನಿಕಲ್ ಕಸ್ಟಮರ್ ಸೊಲ್ಯೂಷನ್ಸ್ ನ ಪ್ರಾದೇಶಿಕ ಮ್ಯಾನೇಜರ್ ಮಧು ಎಸ್.ಆರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾರ್ಕಳ ಪ್ರಜ್ವಲ್ ಕನ್ಸ್ಟ್ರಕ್ಷನ್ ನ ಪ್ರಶಾಂತ್ ಬೆಳಿರಾಯ ಅವರನ್ನು ಗೋಲ್ಡನ್ ಇಂಜಿನಿಯರ್ ಪ್ರಶಸ್ತಿಯೊಂದಿಗೆ ಸನ್ಮಾನಿಸಲಾಯಿತು ಹಾಗೂ ಸಿವಿಲ್ ಇಂಜಿನಿಯರ್ಸ್ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಮಾಜಿ ಅಧ್ಯಕ್ಷ ಹಿತೇಶ್ ಕುಮಾರ್ ಶೆಟ್ಟಿ ಸ್ವಾಗತಿಸಿ, ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಹೆಗಡೆ ಪ್ರಸ್ತಾವನೆಗೈದರು. ಮಾಜಿ ಅಧ್ಯಕ್ಷರಾದ ಹರೀಶ್ ಅಂಚನ್ ಮತ್ತು ರಾಜೇಶ್ ಕುಂಟಾಡಿ ನಿರೂಪಿಸಿದರು. ಸುಶಾಂತ್ ಶೆಟ್ಟಿ ಪರಿಚಯಿಸಿ, ನೂತನ ಕಾರ್ಯದರ್ಶಿ ರಾಕೇಶ್ ಅಮೀನ್ ವಂದಿಸಿದರು. ನಿಕಟಪೂರ್ವ ಕಾರ್ಯದರ್ಶಿ ಪ್ರಕಾಶ್ ಆಚಾರ್ಯ ಉಪಸ್ಥಿತರಿದ್ದರು.