ಶ್ರದ್ದಾ ಭಕ್ತಿಯ ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ದಾರ ಕಾರ್ಯ, ಬ್ರಹ್ಮಕಲಶೋತ್ಸವ ಅಥವಾ ಯಾವುದೇ ರೀತಿಯ ಧಾರ್ಮಿಕ ಕಾರ್ಯಗಳು ನಡೆಯುತ್ತವೆ ಎಂದರೆ ನಂಬಿದ ಭಕ್ತರಾದ ನಮಗೆಲ್ಲರಿಗೂ ಮತ್ತು ಲೋಕ ಕಲ್ಯಾಣಕ್ಕೋಸ್ಕರ ಆಗುತ್ತದೆ. ಕ್ಷೇತ್ರಗಳು ಬೆಳಗಿದಂತೆ ನಾಡು ಸುಭೀಕ್ಷವಾಗುತ್ತದೆ. ನಮಗೆ ನಮ್ಮ ಕಾತ್ರಜ್ ಅಯ್ಯಪ್ಪ ಕ್ಷೇತ್ರದ ಜೀರ್ಣೋದ್ದಾರ ಮಾಡುವ ಸೌಭಾಗ್ಯ ದೇವರು ಒದಗಿಸಿ ಕೊಟ್ಟಿದ್ದಾರೆ. ಪುಣೆಯ ಸರ್ವ ಭಕ್ತಾಭಿಮಾನಿಗಳ ಸಹಕಾರ ಸಿಕ್ಕಿದೆ. ನಮ್ಮ ನಿರೀಕ್ಷೆಗೂ ಮೀರಿ ಜೀರ್ಣೋದ್ದಾರದ ಕಾರ್ಯಗಳು ನಡೆಯುತ್ತಿವೆ. ನಮ್ಮ ಲೆಕ್ಕಾಚಾರಕ್ಕಿಂತ ಹೆಚ್ಚಿನ ಖರ್ಚು ಕೂಡಾ ಆಗುತ್ತಿದೆ. ಆದರೆ ದೇವತಾ ಕಾರ್ಯಕ್ಕೆ ಅರ್ಥಿಕ ಬಲ ತಮ್ಮೆಲ್ಲರ ಸಹಕಾರದಿಂದ ಬರುತ್ತದೆ ಎಂಬ ನಂಬಿಕೆ ನಮ್ಮದು. ಇನ್ನು ಅಂತಿಮ ಹಂತದ ಜೀರ್ಣೋದ್ದಾರ ಕೆಲಸಗಳು ಬಾಕಿ ಇದೆ. ಇದಕ್ಕೆ ಸಾಧಾರಣ ಒಂದೂವರೆ ಕೋಟಿವರೆಗಿನ ಅರ್ಥಿಕ ಸಂಪನ್ಮೂಲದ ಅವಶ್ಯಕತೆ ಇದೆ. ಇದನ್ನು ಕ್ರೂಡೀಕರಿಸುವ ಕೆಲಸ ಮಾಡುತ್ತಿದ್ದೇವೆ. ಕ್ಷೇತ್ರದ ಭಕ್ತರು ತಮ್ಮ ಇಚ್ಚೆಯಂತೆ ಮುಂದೆ ಬಂದು ತನು ಮನ ಧನದ ಸೇವೆ ನೀಡಿ ಸಹಕಾರ ನೀಡಬೇಕು. ತಾವು ನಂಬಿದ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ಪರಿವಾರ ದೇವರುಗಳು ಸರ್ವ ವಿಧದಲ್ಲೂ ತಮಗೆಲ್ಲರಿಗೂ ಸನ್ಮಂಗಲವನ್ನು ನೀಡಿ ಪಾಲಿಸುತ್ತಾರೆ ಇದು ಖಂಡಿತ. ಬ್ರಹ್ಮಕಲಶೋತ್ಸವದ ದೇವತಾ ಕಾರ್ಯಗಳು 2025 ರ ಜನವರಿಯಲ್ಲಿ 9 ರಿಂದ ಪ್ರಾರಂಭಗೊಂಡು 12ರ ತನಕ ನಡೆಯಲಿದೆ. ಇದರ ಬಗ್ಗೆ ಮುಂದೆ ತಿಳಿಸಲಾಗುವುದು. ತಮ್ಮೆಲ್ಲರ ಸಹಕಾರ ನಮ್ಮೊಂದಿಗಿರಲಿ ಎಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಇದರ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಭಾಷ್ ಶೆಟ್ಟಿ ನುಡಿದರು.ಪುಣೆಯ ತುಳು ಕನ್ನಡಿಗರ ಶ್ರದ್ದಾ ಭಕ್ತಿಯ ಕೇಂದ್ರ ಕಾತ್ರಜ್ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಜೀರ್ಣೋದ್ದಾರ ಮತ್ತು ಬ್ರಹ್ಮಕಲಶೋತ್ಸವದ ಬಗ್ಗೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ವಿಶ್ವಸ್ಥ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಸಭೆಯು ಅಧ್ಯಕ್ಷರಾದ ಸುಭಾಷ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 9ರಂದು ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ, ಸ್ಥಾಪಕಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ರಘುರಾಮ್ ರೈ, ಕೋಶಾಧಿಕಾರಿ ಸಚ್ಚಿದಾನಂದ, ಮಾಜಿ ಅಧ್ಯಕ್ಷ ಸಲಹೆಗಾರ ಶೇಖರ್ ಪೂಜಾರಿ, ಕಾರ್ಯಕಾರಿ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ, ಕಾರ್ಯದರ್ಶಿ ಜಗದೀಪ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನಡೆಯುತ್ತಿರುವ ಜೀರ್ಣೋದ್ದಾರ ಹಾಗೂ ಮುಂದೆ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಯಿತು. ಕಾರ್ಯದರ್ಶಿ ರಘುರಾಮ್ ರೈಯವರು ಕಾರ್ಯ ಯೋಜನೆಗಳ ಈವರೆಗಿನ ಜೀರ್ಣೋದ್ದಾರ ಕಾರ್ಯಗಳ ಬಗ್ಗೆ ತಿಳಿಸಿದರು. ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿಯವರು ಲೆಕ್ಕಪತ್ರವನ್ನು ಸಭೆಗೆ ತಿಳಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ಹಲವರು ಸಲಹೆಗಳನ್ನಿತ್ತು ಮುಂದಿನ ನಡೆಯ ಬಗ್ಗೆ ತಿಳಿಸಿದರು. ವಿಶ್ವಸ್ಥ ಮಂಡಳಿ ಸದಸ್ಯರು, ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಮಹಿಳೆಯರು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು. ರಘುರಾಮ್ ರೈಯವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
ವರದಿ : ಹರೀಶ್ ಮೂಡುಬಿದಿರೆ