ಮುಂಬಯಿ (ಆರ್ಬಿಐ), ಸೆ.15: ಮುಂಬಯಿ ಸಾರಸ್ವತ ಲೋಕದ ಸಜ್ಜನ ಸಾಹಿತಿ, ‘ಶಿಮುಂಜೆ ಪರಾರಿ’ ಕಾವ್ಯ ನಾಮದಿ ಚಿರಪರಿಚಿತ ತುಳು ಕನ್ನಡ ಕವಿ, ಅನುವಾದಕಾರ, ನಾಟಕಕಾರ, ಅಧ್ಯಾಪಕ, ಕಂಠದಾನ ಕಲಾವಿದ ಮತ್ತು ನಟ ಎಂದೆಣಿಸಿ ಬಹುಮುಖ ಪ್ರತಿಭೆಗಳಿಂದ ಜನಮಾನಸದಲ್ಲಿ ಜನಾನುರೆಣಿಸಿರುವ ಶಿಮುಂಜೆ ಪರಾರಿ (ಸೀತಾರಾಮ ಮುದ್ದಣ್ಣ ಶೆಟ್ಟಿ 84.) ಇಂದಿಲ್ಲಿ ಆದಿತ್ಯವಾರ ಬೆಳಿಗ್ಗೆ ಅಂಧೇರಿ ಪಶ್ಚಿಮದ ಜೀವನ್ ನಗರ್ನ ನ್ಯೂ ಚಂದ್ರ ಹೌಸಿಂಗ್ ಸೊಸೈಟಿಯಲ್ಲಿನ ನಿವಾಸದಲ್ಲಿ ನಿಧನರಾದರು.ಉಡುಪಿ ಜಿಲ್ಲೆಯ ಮುಲ್ಕಿಯ ಕಕ್ವ ಗ್ರಾಮ ಅತಿಕಾರಿಬೆಟ್ಟು ಇಲ್ಲಿ ಕಲ್ಯಾಣಿ ಶೆಟ್ಟಿ ಮತ್ತು ಶಿಮುಂಜೆ ಮುದ್ದಣ್ಣ ಶೆಟ್ಟಿ ದಂಪತಿಗಳ ಸುಪುತ್ರನಾಗಿ ಜನ್ಮತಾಳಿ ಸಜ್ಜನ ಸಾಹಿತಿ ಎಂದೇ ಪ್ರಸಿದ್ಧರಾದ ‘ಶಿಮುಂಜೆ ಪರಾರಿ’ ಕಾವ್ಯನಾಮದಿಂದ ಜನಮಾನಸದಲ್ಲಿ ನೆಲೆ ನಿಂತವರು.ಕಳೆದ ಹಲವಾರು ವರ್ಷಗಳಿಂದ ಅಂಧೇರಿ ಪೂರ್ವದ ಚಕಲಾ ಇಲ್ಲಿನ ಹವಾ ಮಹಲ್ನಲ್ಲಿ ವಾಸವಾಗಿದ್ದ ಮೃತರು ಪತ್ನಿ ಚಂದ್ರಿಕಾ ಶೆಟ್ಟಿ, ಮಕ್ಕಳಾದ ಅರ್ಚನಾ ಶೆಟ್ಟಿ ಮತ್ತು ಅಪರ್ಣಾ ಶೆಟ್ಟಿ ಸೇರಿದಂತೆ ಅಪಾರ ಬಂಧು ಬಳಗ, ಶಿಷ್ಯವರ್ಗವನ್ನು ಅಗಲಿದ್ದಾರೆ.ಶಿಮುಂಜೆ ಅವರಿಗೆ ಮರಾಠಿ ಗುಜರಾತಿ ಮತ್ತು ಹಿಂದಿ ಭಾಷೆಗಳಲ್ಲಿ ತಾನು ಓದಿದ ಉತ್ತಮ ಸಾಹಿತ್ಯಗಳನ್ನು ತನ್ನ ಭಾಷೆಯ ಜನರೊಂದಿಗೆ ಹಂಚಿಕೊಳ್ಳುವ ಮಹದಾಸೆಯಿಂದ ಅನುವಾದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿ ಕೊಂಡಿದ್ದರು. ಮರಾಠಿ ನಾಟಕಗಳನ್ನು ತುಳು ಮತ್ತು ಕನ್ನಡಕ್ಕೆ ಅನುವಾದಿಸಿ ಪ್ರದರ್ಶಿಸಿ, ನಟಿಸಿದ ಅಪ್ರತಿಮಾ ನಾಟಕಕಾರರು. ಶಿಮುಂಜೆ ಪರಾರಿ ‘ಯಾನ್ ಪಿನಯೆ’, ‘ಅವುಲೊರ್ತಿ ಮೂಲೊರ್ತಿ’, ‘ಜೋಕುಲು ಬಾಲೆಲು’ ಇಂತಹ ಸದಭಿರುಚಿಯ ಮರಾಠಿ ನಾಟಕಗಳನ್ನು ತುಳುವಿಗೆ ತಂದು ತಾನೂ ನಟಿಸಿ ಅವುಗಳಿಗೆ ಜೀವ ತುಂಬಿದವರು. ನವ ಪ್ರಭಾತ, ಯಾರು ನನ್ನವರು, ಸೂತ್ರ, ಸುಳಿ, ಯಾರಿಗೂ ಹೇಳೋಣು ಬ್ಯಾಡ ಮರಾಠಿಯಿಂದ ಕನ್ನಡಕ್ಕೆ ಅನುವಾದವಾದ ನಾಟಕಗಳಾದರೆ ನರ ಭಕ್ಷಕ ಹಿಂದಿಯಿಂದ ಕನ್ನಡಕ್ಕೆ ತರ್ಜುಮೆಯಾದ ಕಾದಂಬರಿ. ಮುಂಬಯಿ ನಗರದಲ್ಲಿದ್ದು ಕೊಂಡು ಶಿಮುಂಜೆಯವರು ತುಳು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರ. ತುಳು ಭಾಷೆಯನ್ನು ಕನ್ನಡದಲ್ಲಿ ಬರೆದು ಓದುವುದು ಕಷ್ಟ ಎನ್ನುವ ಮನಸ್ಥಿತಿಯಿಂದ ತುಳುವರನ್ನು ಹೊರ ತರಲು ‘ಯಾನ್ ಪನ್ಪಿನಿ ಇಂಚ’ ಎನ್ನುವ ತುಳು ಚುಟುಕುಗಳನ್ನು ನೂರರ ಲೆಕ್ಕದಲ್ಲಿ ಮೂರು ಸಾವಿರ ಪ್ರತಿಗಳಲ್ಲಿ ಒಟ್ಟು ೩೦ಸಾವಿರ ಚುಟುಕುಗಳನ್ನು ಮನೆ ಮನೆಗೆ ಉಚಿತವಾಗಿ ಹಂಚಿ ತುಳು ಭಾಷಾ ಪ್ರೇಮ ಮೆರೆದವರು. ನಿತ್ಯಾನಂದರ ಸಂಪರ್ಕದಿಂದ ಆಧ್ಯಾತ್ಮದ ಒಲವಿನ, ಪಕ್ವ ಮನಸ್ಸಿನ ೧೦೮ ವಚನ ಮುಕ್ತಕಗಳನ್ನು ‘ನಿತ್ಯ ಆನಂದ ವಚನ’ ಹೆಸರಿನಲ್ಲಿ ಅಚ್ಚಿಸಿ ಗುರು ನಿತ್ಯಾನಂದ ಸ್ವಾಮಿಜಿಗೆ ಅರ್ಪಿಸಿ ಜೀವನ ಸಾರ್ಥಕ್ಯ ಕಂಡವರು. ಬರವಣಿಗೆಯ ಜೊತೆಗೆ ನಟನೆಯ ಹವ್ಯಾಸ ಬೆಳಿಸಿಕೊಂಡ ಶಿಮುಂಜೆ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡು ಸುಂದರನಾಥ ಸುವರ್ಣ ಅವರ ‘ಗುಡ್ಡದ ಭೂತ’, ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಘಟ ಶ್ರಾದ್ಧ’ಗಳಲ್ಲಿ ನಟಿಸಿ ಪ್ರಸಿದ್ಧಿ ಪಡೆದಿದ್ದರು. ಇವರ ‘ಜೋಕುಲು ಬಾಲೆಲು’ ಕೃತಿಗೆ ತುಳು ಸಾಹಿತ್ಯ ಅಕಾಡಮಿ ಪುಸ್ತಕ ಪ್ರಶಸ್ತಿ ಲಭಿಸಿದ್ದು ಹಲವಾರು ಸಂಘ-ಸಂಸ್ಥೆಗಳಿಂದ ಸನ್ಮಾನಿಸಲ್ಪಟ್ಟಿದ್ದರು. ಕಳೆದ ವರ್ಷವಷ್ಟೇ ಐಲೇಸಾ ದಿ ವಾಯ್ಸ್ ಆಫ್ ಓಷನ್ ಸಂಸ್ಥೆಯು ಶಿಮುಂಜೆ ಪರಾರಿ ಇವರಿಗೆ ವಯೋ ಸಮ್ಮಾನ-೨೦೨೩ ಗೌರವವನ್ನಿತ್ತು ಅಭಿನಂದಿಸಿತ್ತು.ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಶಿಮುಂಜೆ ಪರಾರಿ ಅಭಿನಂದನಾ ಸಮಿತಿ ಮುಂಬಯಿ ಇವುಗಳು ವಿದ್ಯಾನಗರಿ ಅಲ್ಲಿನ ಕವಿವರ್ಯ ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಶಿಮುಂಜೆ ಪರಾರಿ (ಸೀತಾರಾಮ ಶೆಟ್ಟಿ) ಸಾಹಿತ್ಯ ಸಂಭ್ರಮ ಕಾರ್ಯಕ್ರಮವನ್ನು ಆಯೋಜಿಸಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ.ಎನ್ಉಪಾಧ್ಯ ಅವರ ಗೌರವ ಸಂಪಾದಕತ್ವದಲ್ಲಿ, ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಸಂಪಾದಕತ್ವದಲ್ಲಿ ಪ್ರಕಾಶಿಸಲ್ಪಟ್ಟ ‘ಸಂಪ್ರೀತಿ’ ಅಭಿನಂದನ ಗ್ರಂಥವನ್ನು ಗೌರವಧನವನ್ನಿತ್ತು ಗೌರವಿಸಿ ಅಭಿನಂದಿಸಿದ್ದವು.
ಶಿಮುಂಜೆ ಪರಾರಿ ನಿಧನಕ್ಕೆ ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಬೋಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ಸಿಎ| ಸುರೇಂದ್ರ ಕೆ.ಶೆಟ್ಟಿ, ನ್ಯಾಯವಾದಿ ಕಡಂದಲೆ ಪರಾರಿ ಪ್ರಕಾಶ್ ಎಲ್.ಶೆಟ್ಟಿ, ಶ್ಯಾಮ ಎನ್.ಶೆಟ್ಟಿ ವಾಶಿ, ಪೇತ್ರಿ ವಿಶ್ವನಾಥ್ ಶೆಟ್ಟಿ, ನಿತ್ಯಾನಂದ ಡಿ.ಕೋಟ್ಯಾನ್, ನ್ಯಾಯವಾದಿ ಗುಣಕರ ಡಿ.ಶೆಟ್ಟಿ, ಮುದ್ರಾಡಿ ದಿವಾಕರ ಶೆಟ್ಟಿ, ಮೋಹನ್ ಮಾರ್ನಾಡ್, ಡಾ| ಜಿ.ಎನ್ ಉಪಾಧ್ಯಾಯ, ಸಾ.ದಯಾ, ಡಾ| ಭರತ್ಕುಮಾರ್ ಪೊಲಿಪು, ಓಂದಾಸ್ ಕಣ್ಣಾಂಗಾರ್, ಐ-ಲೇಸಾ ಮುಂಬಯಿ ಸಂಚಾಲಕ ಸುರೇಂದ್ರ ಮಾರ್ನಾಡು ಹಾಗೂ ಶಿಮುಂಜೆ ಅಭಿಮಾನಿ ಬಳಗ, ವಿದ್ಯಾಥಿ ವೃಂದ ಸೇರಿದಂತೆ ಗಣ್ಯರನೇಕರು, ಹಲವಾರು ಸಂಘಸಂಸ್ಥೆಗಳ ಮುಖ್ಯಸ್ಥರು ಸಂತಾಪ ವ್ಯಕ್ತಪಡಿಸಿ ಶ್ರದ್ಧಾಂಜಲಿ ಕೋರಿದ್ದಾರೆ.
ವರದಿ, ಚಿತ್ರ : ರೋನ್ಸ್ ಬಂಟ್ವಾಳ್