ಪುಣೆ ಪಿಂಪ್ರಿ ಚಿಂಚ್ವಾಡ್ ನ ಪ್ರತಿಷ್ಠಿತ ಸಂಸ್ಥೆಗಳಲ್ಲೊಂದಾದ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಇದರ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ಸಮಾಜ ಸೇವಕ ಜಗದೀಶ್ ಶೆಟ್ಟಿಯವರು ಸರ್ವಾನುಮತದಿಂದ ಅವಿರೋದವಾಗಿ ಆಯ್ಕೆಯಾದರು. ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರ ಅಧ್ಯಕ್ಷತೆಯಲ್ಲಿ ಸೆಪ್ಟೆಂಬರ್ 11ರಂದು ಸಂಘದ ಮಿನಿ ಹಾಲ್ ಎಂ.ಎಸ್.ಆರ್ ಸ್ಕ್ವೇರ್ ಕ್ವೀನ್ಸ್ ಟೌನ್ ಸೊಸೈಟಿ ಚಿಂಚ್ವಾಡ್ ಇಲ್ಲಿ ಜರಗಿತು.
ಈ ಸಂದರ್ಭದಲ್ಲಿ 2024-26 ನೇ ಸಾಲಿಗೆ ಬಂಟರ ಸಂಘದ ಅಧ್ಯಕ್ಷರನ್ನಾಗಿ ಜಗದೀಶ್ ಶೆಟ್ಟಿಯವರನ್ನು ಸಭೆಯಲ್ಲಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಪ್ರಭಾ ಸೀತಾರಾಮ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು ಹಾಗೂ ಕಾರ್ಯಕಾರಿ ಸಮಿತಿ ಮಹಿಳಾ ವಿಭಾಗ ಮತ್ತು ಯುವ ವಿಭಾಗದ ನೂತನ ಸಮಿತಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೆಟ್ಟಿಯವರಿಗೆ ರಾಕೇಶ್ ಶೆಟ್ಟಿ ಬೆಳ್ಳಾರೆಯವರು ಪುಷ್ಪಗುಚ್ಚ ನೀಡಿ ಅಭಿನಂದಿಸಿ ಗೌರವಿಸಿದರು. ಪ್ರಭಾ ಶೆಟ್ಟಿಯವರಿಗೆ ಜ್ಯೋತಿ ವಿ ಶೆಟ್ಟಿಯವರು ಪುಷ್ಪಗುಚ್ಛ ನೀಡಿ ಗೌರವಿಸಿದರು.
ಪುಣೆಯ ಮತ್ತೊಂದು ಅವಳಿ ನಗರವಾದ ಪಿಂಪ್ರಿ ಚಿಂಚ್ವಾಡ್ ನ ಖ್ಯಾತ ಹೋಟೆಲ್ ಉದ್ಯಮಿ ಹಾಗೂ ರಾಜಕೀಯ ನೇತಾರರಾಗಿರುವ ಜಗದೀಶ್ ಶೆಟ್ಟಿಯವರು ಮೂಲತಃ ಅಂಜಾರು ಬೀಡಿನವರು. ಮುಂಬಯಿಯಲ್ಲಿ ಜನಿಸಿ, ವಿದ್ಯಾಭ್ಯಾಸ ಪಡೆದು ಬಜಾಜ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ವೃತ್ತಿ ಜೀವನ ಪ್ರಾರಂಭಿಸಿ ನಂತರ ಉದ್ಯೋಗ ತೊರೆದು ರಾಜಕೀಯಕ್ಕೆ ಪ್ರವೇಶ ಮಾಡಿದರು. ರಾಜಕೀಯದೊಂದಿಗೆ ಹೋಟೆಲ್ ಉದ್ಯಮಕ್ಕೆ ಕೈ ಹಾಕಿ ಮೊದಲಾಗಿ ಪಿಂಗಾರ ರೆಸ್ಟೋರೆಂಟ್ ಪ್ರಾರಂಭಿಸಿದರು. 1990ರಲ್ಲಿ ಹಿಂದೂ ಹೃದಯ ಸಾಮ್ರಾಟ ದಿವಂಗತ ಬಾಳಾ ಸಾಹೇಬ್ ಠಾಕ್ರೆಯವರನ್ನು ಪಿಂಪ್ರಿ ಚಿಂಚ್ವಾಡ್ ಗೆ ಕರೆಸಿ ಅವರ ಹಿಂದೂ ಘರ್ಜನೆಯನ್ನು ಜನರಿಗೆ ಕೇಳಿಸುವ ಅವಕಾಶ ಮಾಡಿ ಕೊಟ್ಟದ್ದು ಒಂದು ಐತಿಹಾಸಿಕ ದಾಖಲೆಯಾಗಿದೆ. ಮತ್ತೆ ಎಂದೂ ಪಿಂಪ್ರಿ ಚಿಂಚ್ವಾಡ್ ನಲ್ಲಿ ಠಾಕ್ರೆಯವರ ಸಭೆ ನಡೆದಿಲ್ಲ. ರಾಜಕೀಯದಲ್ಲಿ 1992 ರಿಂದ 2017ರವರೆಗೆ 5 ಬಾರಿ ನಗರ ಸೇವಕನಾಗಿ ಮಹಾರಾಷ್ಟ್ರದಲ್ಲಿ ಬಂಟನೊಬ್ಬನ ಐತಿಹಾಸಿಕ ದಾಖಲೆ ಇದಾಗಿದೆ. ಪಿಂಪ್ರಿ ಚಿಂಚ್ವಾಡ್ ನಗರ ಪಾಲಿಕೆಯಲ್ಲಿ ಸ್ಪೋರ್ಟ್ಸ್ ಕಮಿಟಿ ಛೇರ್ಮನ್, ಹೆಲ್ತ್ ಕಮಿಟಿ ಛೇರ್ಮನ್, ಎಜುಕೇಶನ್ ಕಮಿಟಿ ಛೇರ್ಮನ್, ಸ್ಟ್ಯಾಂಡಿಂಗ್ ಕಮಿಟಿ ಛೇರ್ಮನ್, 5ವರ್ಷ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ಸಭಾಗೃಹ ನೇತಾರ ಆಗಿ ಕೆಲಸ ಮಾಡಿದ ಅನುಭವ ಇವರದ್ದು. ಈಗ ಮಹಾರಾಷ್ಟ್ರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿಯಾಗಿ ಸಮಾಜ ಸೇವೆ ಮಾಡುತ್ತಿದ್ದಾರೆ. 1980ರಲ್ಲಿ ಚಿಂಚ್ವಾಡ್ ನಲ್ಲಿ ಸಮತಾ ಮಿತ್ರ ಮಂಡಲದ ಸ್ಥಾಪನೆ ಮತ್ತು ಅದರ ಅಧ್ಯಕ್ಷನಾಗಿ ಆಯ್ಕೆಯಾಗಿ ಅದ್ದೂರಿಯಾಗಿ ಗಣೇಶೋತ್ಸವ ಆಚರಣೆ ಪ್ರಾರಂಭಿಸಿದರು. 2009 ರಲ್ಲಿ ಚಿಂಚ್ವಾಡ್ ಕಾಲ್ಬೋರ್ ನಗರದಲ್ಲಿ ಸುಮಾರು 50 ಫೀಟ್ ಎತ್ತರದ ಹನುಮಂತ ದೇವರ ಮೂರ್ತಿಯ ಸ್ಥಾಪನೆ ಮಾಡಿದ್ದಾರೆ. ಇದೊಂದು ಪೂನಾ ಜಿಲ್ಲೆಯ ಎತ್ತರದ ಮೂರ್ತಿ ಎಂಬ ದಾಖಲೆ ಈಗಲೂ ಇದೆ. ಕಾಲ್ಭೋರ ನಗರದಲ್ಲಿ ಶನಿ ಮಂದಿರ ಮತ್ತು ನವಗ್ರಹ ಮಂದಿರ ಕಟ್ಟಿಸಿದ ಇವರು ತಮ್ಮ ತವರೂರಿನ ಅನೇಕ ದೇವಸ್ಥಾನ, ದೈವಸ್ಥಾನಗಳ ಜೀರ್ಣೋದ್ದಾರಕ್ಕೆ ದೇಣಿಗೆ ನೀಡಿ ಧಾರ್ಮಿಕ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೇ ಹೋಟೆಲ್ ಅಸೋಸಿಯೇಷನ್ ನಲ್ಲಿಯೂ ಕೆಲಸ ಮಾಡಿದ ಕೀರ್ತಿ ಇವರದು. ಮಾಜಿ ಮುಖ್ಯಮಂತ್ರಿ ಶರದ್ ಪವಾರ್ ಮತ್ತು ಈಗಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಜೊತೆ ನಿಕಟ ಸಂಪರ್ಕವಿರುವ ಇವರು ತುಳು ಕನ್ನಡಿಗರ ಅಪಾರ ಸಂಕಷ್ಟಗಳನ್ನು ಮತ್ತು ಹೋಟೆಲ್ ಉದ್ಯಮದ ಹಲವಾರು ಸಮಸ್ಯೆಗಳನ್ನು ನಿವಾರಣೆ ಮಾಡಿಕೊಟ್ಟ ಅಪ್ರತಿಮ ಸಮಾಜ ಸೇವಕ.
ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಸ್ಥಾಪಕ ಸದಸ್ಯನಾಗಿ, ಸಂಘಟನಾ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿರುವ ಇವರು ಸಂಘದ ಕಾರ್ಯಕಾರಿ ಸಮಿತಿಯಲ್ಲಿ ಹಲವು ವರ್ಷಗಳಿಂದ ಇದ್ದು ಹಾಗೂ ಪ್ರತಿಯೊಂದು ಕಾರ್ಯಕ್ರಮಕ್ಕೆ ತುಂಬು ಹೃದಯದ ದೇಣಿಗೆ ಕೊಟ್ಟ ಮಹಾದಾನಿಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಉಪಾಧ್ಯಕ್ಷನಾಗಿ ಅಪ್ರತಿಮ ಸೇವೆಯೊಂದಿಗೆ ಸಕ್ರಿಯರಾಗಿದ್ದಾರೆ. ಇವರ ಕಾರ್ಯ ವೈಖರಿ ಮತ್ತು ಸಾಮಾಜಿಕ ಸೇವೆ ಹಾಗೂ ಧಾರ್ಮಿಕ ಸೇವೆಗೆ ಹಲವಾರು ಸಂಘ ಸಂಸ್ಥೆಗಳು ಇವರನ್ನು ಸತ್ಕರಿಸಿದ್ದಾರೆ. ಅಣ್ಣಾ ಮಗರ್ ಸೋಶಿಯಲ್ ಫೌಂಡೇಶನ್ ನಿಂದ ಬೆಸ್ಟ್ ಕಾರ್ಪೋರೇಟರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಪಿಂಪ್ರಿ ಚಿಂಚ್ವಾಡ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಧರ್ಮಪತ್ನಿ ಸುಪ್ರಿಯಾ ಶೆಟ್ಟಿ ಸಂಘದ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ, ಮಗ ಆಕಾಶ್ ಶೆಟ್ಟಿ ಸಿವಿಲ್ ಇಂಜಿನೀಯರ್, ಸೊಸೆ ದಿವ್ಯಾ ಆಕಾಶ್ ಶೆಟ್ಟಿ ಆರ್ಕಿಟೆಕ್ಟ್, ಮಗಳು ಸಿದ್ದಿ MS In Logistics & Supply Cahain From London University ಯಿಂದ ಪದವಿ ಪಡೆದಿರುವ ಸುಖಿ ಸಂಸಾರ ಇವರದ್ದು. ಅಧ್ಯಕ್ಷರಾಗಿ ಜಗದೀಶ್ ಶೆಟ್ಟಿಯವರ ಕಾಲಾವದಿಯಲ್ಲಿ ಸಂಘವು ಉತ್ತರೋತ್ತರ ಅಭಿವೃದ್ದಿಯ ಪಥದಲ್ಲಿ ಸಾಗಿ ಸಮಾಜಮುಖಿ ಸೇವೆಗಳೊಂದಿಗೆ ಮಾದರಿಯಾಗಿ ನಡೆಯಲಿ ಎಂದು ಶುಭ ಹಾರೈಸೋಣ.
ಪುಣ್ಚೂರು ಬೆಳ್ಳಂಪಳ್ಳಿಯವರಾದ ಪ್ರಭಾ ಸೀತಾರಾಮ್ ಶೆಟ್ಟಿಯವರು ಪರ್ಕಳದಲ್ಲಿ ಪ್ರೌಡ ಶಿಕ್ಷಣ, ಕಲ್ಯಾಣಪುರದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಮಾಜಿ ಅಧ್ಯಕ್ಷ, ಖ್ಯಾತ ಉದ್ಯಮಿ ಸೀತಾರಾಮ ಶೆಟ್ಟಿಯವರನ್ನು ಮದುವೆಯಾಗಿ ಪಿಂಪ್ರಿಯಲ್ಲಿ ನೆಲೆಸಿದ್ದಾರೆ. 1995ರಲ್ಲಿ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘ ಸ್ಥಾಪಕ ಸದಸ್ಯರಾಗಿ ನಂತರ ಸಂಘದ ಮಹಿಳಾ ವಿಭಾಗದ ಕಾರ್ಯಕಾರಿ ಸಮಿತಿಯಲ್ಲಿ ವಿವಿದ ಹುದ್ದೆಯಲ್ಲಿದ್ದು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡವರು. 2008ರಲ್ಲಿ ಸಂಘದ ಮಹಿಳಾ ವಿಭಾಗದ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸಿ ಅನುಭವ ಪಡೆದಿದ್ದಾರೆ. ಸೌಮ್ಯ ಸ್ವಭಾವ ಮತ್ತು ಶಿಸ್ತಿನ ಜೀವನ ಇವರದ್ದು. ಅಪಾರ ದೈವ ಭಕ್ತಿ ಹೊಂದಿರುವ ಇವರು ಯೋಗ ಮತ್ತು ಸತ್ಸಂಗದಲ್ಲಿ ತುಂಬಾ ಆಸಕ್ತಿ ಹೊಂದಿದವರಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಗೆ ದೇಣಿಗೆ ಮತ್ತು ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಗಳಿಗೆ ತುಂಬು ಹೃದಯದ ಸಹಕಾರ ಪ್ರೋತ್ಸಾಹ ನೀಡುತ್ತಾ ಬಂದಿರುತ್ತಾರೆ. ಪತಿ ಸೀತಾರಾಮ್ ಶೆಟ್ಟಿ, ಮಗಳು ಶಿಪ್ರ ಸಾಯಿರಾಜ್ ಶೆಟ್ಟಿ, ಅಳಿಯ ಹೋಟೆಲ್ ಉದ್ಯಮಿ ಸಾಯಿರಾಜ್ ಶೆಟ್ಟಿಯವರೊಂದಿಗಿನ ಸುಖಿ ಸಂಸಾರ ಇವರದ್ದು.
ವರದಿ : ಹರೀಶ್ ಮೂಡುಬಿದಿರೆ