ಮೂಡುಬಿದಿರೆ: ಅಂತಾರಾಷ್ಟ್ರೀಯ ಕ್ರೀಡಾ ಭೂಪಟದಲ್ಲಿ ಮೊದಲ ಬಾರಿಗೆ ಭಾರತ ಮಿನುಗುವಂತೆ ಮಾಡಿದ, ಸ್ವಾತಂತ್ರ್ಯ ಪೂರ್ವದಲ್ಲೇ ಭಾರತಕ್ಕೆ ಮೂರು ಒಲಿಂಪಿಕ್ಸ್ ಚಿನ್ನದ ಪದಕವನ್ನು ಗೆದ್ದುಕೊಟ್ಟ ಕ್ರೀಡಾ ಲೋಕದ ದಿಗ್ಗಜ ಮೇಜರ್ ಧ್ಯಾನ್ಚಂದ್ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು.
ಅವರು ವಿದ್ಯಾಗಿರಿಯ ಕೃಷಿಸಿರಿ ವೇದಿಕೆಯಲ್ಲಿ, ಗುರುವಾರ ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜು ಹಾಗೂ ಆಳ್ವಾಸ್ ಕಾಲೇಜು ಜಂಟಿಯಾಗಿ ರಾಷ್ಟೀಯ ಕ್ರೀಡಾ ದಿನದ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶವೇ ಹೆಮ್ಮೆ ಪಡುವಂಥ ಸಾಧನೆ
ತಮ್ಮ ಅದ್ಭುತ ಕ್ರೀಡಾ ಕೌಶಲದ ಮೂಲಕ ಇಡೀ ದೇಶವೇ ಹೆಮ್ಮೆ ಪಡುವಂಥ ಸಾಧನೆಯನ್ನು ಮಾಡಿದ ಹಿನ್ನೆಲೆಯಲ್ಲಿ ಅವರ ಜನ್ಮದಿನವನ್ನು ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತದೆ. ಈ ದಿನದ ಆಚರಣೆಯ ಮುಖ್ಯ ಉದ್ದೇಶ ಕ್ರೀಡೆಯ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿಯನ್ನುಂಟು ಮಾಡುವುದಾಗಿದೆ ಎಂದರು.
ಆಳ್ವಾಸ್ನಲ್ಲಿ ಕ್ರೀಡಾಪಟುಗಳಿಗೆ ಪ್ರತೀ ದಿನ ಹಬ್ಬ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ತನ್ನ ಅಸ್ತಿತ್ವ ಹೊಂದುವ ಮೊದಲೇ ಆಳ್ವಾಸ್ನಲ್ಲಿ ಏಕಲವ್ಯ ಸ್ಪೋಟ್ಸ್ ಕ್ಲಬ್ನ ಮೂಲಕ ಡಾ ಎಂ ಮೋಹನ್ ಆಳ್ವರು ಕ್ರೀಡೆಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿದರು. ಈ ಶ್ರೇಷ್ಠಕಾರ್ಯದ ಫಲವಾಗಿ ಇಂದು 11 ಜನ ಒಲಿಂಪಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಲು ಸಾಧ್ಯವಾಯಿತು. ಒಬ್ಬ ಕ್ರೀಡಾಪಟುವಿಗೆ ಏಳವೆಯಲ್ಲಿಯೇ ಬೇಕಾದ ಮೂಲಭೂತ ಸೌಕರ್ಯ ಹಾಗೂ ತರಬೇತಿಯನ್ನು ನಮ್ಮಲ್ಲಿ ನೀಡಲಾಗುತ್ತದೆ. ಹೋಬಳಿ ಮಟ್ಟದ ಕ್ರೀಡಾಪಟು ಅಂತರಾಷ್ಟ್ರೀಯ ಕ್ರೀಡಾಪಟುವಾಗಿ ಬೆಳೆಯುವ ಪೂರಕ ವಾತವರಣ ನಮ್ಮಲ್ಲಿದೆ. ಆಳ್ವಾಸ್ನಲ್ಲಿ ಕ್ರೀಡಾಪಟುಗಳಿಗೆ ಪ್ರತೀ ದಿನ ಹಬ್ಬವಿದ್ದಂತೆ ಎಂದರು.
ಕ್ರೀಡಾ ನೀತಿಗಳು ಬದಲಾಗಬೇಕು
ಇತ್ತೀಚೆಗೆ ಮುಕ್ತಾಯಗೊಂಡ ಒಲಿಂಪಿಕ್ಸ್ನಲ್ಲಿ ಭಾರತದಿಂದ ಅತ್ಯುತ್ತಮ ಪ್ರದರ್ಶನ ಮೂಡಿಬರಲಿಲ್ಲ. ನಮ್ಮ ಜನಸಂಖ್ಯೆಗನುಗುಣವಾಗಿ ಹೋಲಿಸಿ ನೋಡಿದರೆ ನಮ್ಮ ಸಾಧನೆ ಗೌಣವಾಗಿ ಕಾಣುತ್ತದೆ. ಯುದ್ಧಪೀಡಿತ ಉಕ್ರೇನ್ ಸಹ ನಮಗಿಂತ ಜಾಸ್ತಿ ಪದಕ ಗೆಲ್ಲುವುದಾದರೆ, ನಾವೂ ಎಲ್ಲಿ ಎಡವಿದ್ದೇವೆ ಎಂಬುದನ್ನು ವಿಮರ್ಶೆಮಾಡುವ ಸಮಯ ಬಂದಿದೆ. ನಮ್ಮ ದೇಶದಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ನಿರ್ದಿಷ್ಟ ಕ್ರೀಡಾ ನೀತಿ ಜಾರಿಯಲ್ಲಿಲ್ಲ. ಈ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆಯಾದಾಗ ಮಾತ್ರ ಪರಿವರ್ತೆನೆ ಸಾಧ್ಯ. ಶಾಲಾ ಕಾಲೇಜು ಹಂತದಲ್ಲಿ ಕ್ರೀಡೆಗೆ ಸಂಪೂರ್ಣ ಸಹಕಾರ ಲಭಿಸಬೇಕು. ಸರಕಾರದ ಜೊತೆಗೆ ಖಾಸಗಿ ಸಂಸ್ಥೆಗಳು ಕ್ರೀಡಾಪಟುಗಳನ್ನು ಪೋಷಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.
ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಚಾರ್ಯ ಡಾ ಮಧು ಜಿ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಸಂಸ್ಥೆಯ ಕ್ರೀಡಾಕ್ಷೇತ್ರದ ಸಾಧನೆಯ ಪಕ್ಷಿನೋಟವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ರೈ, ಆಳ್ವಾಸ್ ಪದವಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ತಿಲಕ್ ಶೆಟ್ಟಿ, ಆಳ್ವಾಸ್ ಶಾಲೆಗಳ ದೈಹಿಕ ಶಿಕ್ಷಣ ನಿರ್ದೇಶಕ ಆನಂದ ಇದ್ದರು. ಸಂಗಮೇಶ ಕಾರ್ಯಕ್ರಮ ನಿರೂಪಿಸಿ, ಆಳ್ವಾಸ್ ಸಾಂಸ್ಕøತಿಕ ತಂಡ ಪ್ರಾರ್ಥನೆ ನೇರವೇರಿಸಿತು.