ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಗೋವಾ ತುಳುಕೂಟದ ಸ್ಥಾಪಕಾಧ್ಯಕ್ಷರಾಗಿ ಹೋಟೆಲ್ ಉದ್ಯಮಿ ಕಾರ್ಕಳ ಇರ್ವತ್ತೂರಿನ ಗಣೇಶ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಗೋವಾದಲ್ಲಿ ಸುಮಾರು 2 ಸಾವಿರ ಮಂದಿ ತುಳುವರು ವಿವಿಧ ಉದ್ಯಮ, ಉದ್ಯೋಗದಲ್ಲಿದ್ದು ಅವರೆಲ್ಲರನ್ನೂ ಒಟ್ಟು ಸೇರಿಸುವ ನಿಟ್ಟಿನಲ್ಲಿ ತುಳುಕೂಟ ರಚನೆಯಾಗಿದೆ. ಗೋವಾದ ರಾಜಧಾನಿ ಪಣಜಿಯಲ್ಲಿ ಆಗಸ್ಟ್ 27 ರಂದು ನಡೆದ ಸಭೆಯಲ್ಲಿ ಗಣೇಶ್ ಶೆಟ್ಟಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಗಣೇಶ್ ಶೆಟ್ಟಿ ಅವರು ಕಾರ್ಕಳ ಹಾಗೂ ಗೋವಾದಲ್ಲಿ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಪಟ್ಲ ಫೌಂಡೇಶನ್ ಗೋವಾ ಇದರ ಅಧ್ಯಕ್ಷರಾಗಿರುವ ಇವರು ಗೋವಾ ಬಂಟರ ಸಂಘದ ಮಾಜಿ ಕಾರ್ಯದರ್ಶಿಯಾಗಿ, ಇರ್ವತ್ತೂರು ಶಾಲಾ ಶತಮಾನೋತ್ಸವ ಸಮಿತಿ ಮುಂಬಯಿಯ ಕಾರ್ಯದರ್ಶಿಯಾಗಿ, ಸಾಣೂರು ಗರಡಿ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದ 27 ವರ್ಷಗಳಿಂದ ಮುರತ್ತಂಗಡಿ ಭಕ್ತವತ್ಸಲ ಸಮಿತಿಯ ಅಧ್ಯಕ್ಷರಾಗಿ ಪ್ರತೀ ವರ್ಷ ಸಾಧಕರಿಗೆ ಸನ್ಮಾನ, ಶಾಲಾ ಮಕ್ಕಳಿಗೆ ಶೈಕ್ಷಣಿಕ ನೆರವು, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ ಮತ್ತಿತರ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.
ಗಣೇಶ್ ಶೆಟ್ಟಿ ಅವರು ಕಾರ್ಕಳ ಬೋರ್ಡ್ ಹೈಸ್ಕೂಲಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದ್ದಾರೆ. ಈ ವೇಳೆ ಎಬಿವಿಪಿ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿರುತ್ತಾರೆ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗ ಅರಸಿ ಮುಂಬಯಿಯತ್ತ ತೆರಳಿದ ಗಣೇಶ್ ಅವರು 15 ವರ್ಷಗಳ ಹಿಂದೆ ಗೋವಕ್ಕೆ ಆಗಮಿಸಿ ಹೋಟೆಲ್ ಉದ್ಯಮ ಪ್ರಾರಂಭಿಸಿದರು. ಇದೀಗ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅವರು ಗ್ರೂಪ್ ಆಫ್ ನವರತ್ನ ಉಡುಪಿ ರೆಸ್ಟೋರೆಂಟ್, ಗ್ರೂಪ್ ಆಫ್ ಮತ್ಸಸಾಗರ್ ಹೋಟೆಲ್ ಗಳನ್ನು ಹೊಂದಿರುತ್ತಾರೆ. ಉದ್ಯಮದಲ್ಲಿ ಗಳಿಸಿದ ಆದಾಯದಲ್ಲಿ ಒಂದು ಭಾಗವನ್ನು ಸಮಾಜಕ್ಕಾಗಿ ವಿನಿಯೋಗಿಸುತ್ತಿರುವ ಇವರು ಸಾಮಾಜಿಕ ಕಳಕಳಿ ಮೆರೆಯುತ್ತಿದ್ದಾರೆ.
ತುಳುಕೂಟದ ಇತರ ಪದಾಧಿಕಾರಿಗಳು : ಗೌರವ ಅಧ್ಯಕ್ಷ – ಚಂದ್ರಹಾಸ ಅಮೀನ್ ಬಂಟ್ವಾಳ, ಉಪಾಧ್ಯಕ್ಷರು – ಶಶಿಧರ ರೈ ಪುತ್ತೂರು, ಪ್ರಕಾಶ್ ಪೂಜಾರಿ ಮಡಿಕೇರಿ, ವಿಜಯ್ ಶೆಟ್ಟಿ ನಿಟ್ಟೆ, ನಾಗೇಶ್ ಪೂಜಾರಿ ಪಣಿಯೂರು, ಕಾರ್ಯದರ್ಶಿ – ಶಶಿಧರ ನಾಯ್ಕ್ ಬೋಂದೆಲ್, ಕೋಶಾಧಿಕಾರಿ – ಸಿಎ ಪ್ರಶಾಂತ್ ಜೈನ್ ಇರ್ವತ್ತೂರು, ಜೊತೆ ಕಾರ್ಯದರ್ಶಿ – ಶ್ರೀಕಾಂತ್ ಅಮೀನ್, ಜೊತೆ – ಕೋಶಾಧಿಕಾರಿ ಅಪ್ಪಾಜಿ ಶೆಟ್ಟಿ .