ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಇದರ ಸಹ ಸಂಸ್ಥೆ ಯುವ ಬಂಟರ ಸಂಘ ಪುತ್ತೂರು ತಾಲೂಕು ಇದರ ನೇತೃತ್ವದಲ್ಲಿ ಮಹಿಳಾ ಮತ್ತು ವಿದ್ಯಾರ್ಥಿ ಬಂಟರ ಸಂಘದ ಸಹಕಾರದೊಂದಿಗೆ ಆಗಸ್ಟ್ 25 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದ ದೋಣಿಂಜೆಗುತ್ತು ಸರೋಜಿನಿ ಟಿ.ಶೆಟ್ಟಿ ಮತ್ತು ಮೂಡಂಬೈಲು ತಿಮ್ಮಪ್ಪ ಯಾನೆ ಉಗ್ಗಪ್ಪ ಶೆಟ್ಟಿ ವೇದಿಕೆಯಲ್ಲಿ ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮ ಜರಗಿತು. ಇದೇ ವೇಳೆ ಯುವ ಬಂಟರ ಸಂಘದಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ನಡೆದ ಡ್ರಾಯಿಂಗ್ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು.
ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿರವರು ದೀಪ ಬೆಳಗಿಸಿ, ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒಂದು ಉತ್ತಮವಾದ ಕಾರ್ಯಕ್ರಮವನ್ನು ಯುವ ಬಂಟರ ಸಂಘ ಹಮ್ಮಿಕೊಂಡಿದೆ. ಇದಕ್ಕೆ ನಮ್ಮ ಪೂರ್ಣ ಬೆಂಬಲವಿದೆ. ಯುವಕರಿಗೆ ಸ್ಪೂರ್ತಿಯನ್ನು ತುಂಬುವ ಕೆಲಸ ಇದರಿಂದ ಆಗುತ್ತದೆ. ಈ ಕಾರ್ಯಕ್ರಮಕ್ಕೆ ದೊಡ್ಡ ಮಟ್ಟದಲ್ಲಿ ಉದ್ಯಮಿ ರವಿ ಶೆಟ್ಟಿ ಕತಾರ್ ರವರು ಸಹಕಾರ ನೀಡಿರುವುದು ತುಂಬಾ ಸಂತೋಷ ತಂದಿದೆ. ಮುಂದೆಯೂ ಉತ್ತಮವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ ಎಂದು ಹೇಳಿದರು.
ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈರವರು ಮಾತನಾಡಿ, ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿ ಗ್ರಾಮದಲ್ಲಿ ಇರುವ ಬಂಟರ ಮಾಹಿತಿ ಸಂಗ್ರಹವನ್ನು ಮಾಡುವ ಯೋಜನೆಯು ಅತ್ಯಂತ ಪ್ರಯೋಜನಕಾರಿಯಾಗಿದ್ದು, ಇದರಿಂದ ಬಂಟರ ಸಂಪೂರ್ಣ ಮಾಹಿತಿ ಲಭ್ಯವಾಗುತ್ತದೆ ಎಂದರು. ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈಯವರು ಮಾತನಾಡಿ, ಬಂಟರ ಭವನದ ಬಂಟೆರೆ ಚಾವಡಿಯಲ್ಲಿ ನಡೆಯುವ ಈ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಮುಂದೆಯೂ ಉತ್ತಮವಾದ ಅನೇಕ ಕಾರ್ಯಕ್ರಮಗಳು ಈ ಚಾವಡಿಯಲ್ಲಿ ನಡೆಯಲಿದೆ ಎಂದರು.
ಕತಾರ್ ನ ಉದ್ಯಮಿ ಡಾ| ರವಿ ಶೆಟ್ಟಿ ಮೂಡಂಬೈಲುರವರು ಮಾತನಾಡಿ, ಯುವ ಬಂಟರು ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅರ್ಥಪೂರ್ಣ. ಬಂಟರಿಗೆ ಜಗತ್ತಿನಲ್ಲಿಯೇ ಗೌರವದ ಸ್ಥಾನ ಇದೆ. ಪುತ್ತೂರಿನ ಬಂಟರ ಸಾಧನೆಯು ಸಮಾಜಕ್ಕೆ ಮಾದರಿಯಾಗಿದೆ ಎಂದರು. ಇದೇ ಸಂದರ್ಭದಲ್ಲಿ ಉದ್ಯಮಿ ರವಿ ಶೆಟ್ಟಿ ಕತಾರ್ ರವರನ್ನು ತಾಲೂಕು ಯುವ ಬಂಟರ ಸಂಘದಿಂದ ಗೌರವಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಹರ್ಷ ಕುಮಾರ್ ರೈ ಮಾಡಾವುರವರು ಸ್ವಾಗತಿಸಿ ಮಾತನಾಡಿ, ಬಂಟರ ಸಂಘದ ಮಾರ್ಗದರ್ಶನದಲ್ಲಿ ಯುವ ಬಂಟರ ಸಂಘದಿಂದ ಕಾರ್ಯಕ್ರಮವನ್ನು ರೂಪಿಸುತ್ತಿದ್ದೇವೆ. ಬಂಟೆರೆ ಚಾವಡಿಡ್ ಅಷ್ಟಮಿದ ಗೊಬ್ಬುಲು ಕಾರ್ಯಕ್ರಮಕ್ಕೆ ಪೂರ್ಣ ಸಹಕಾರವನ್ನು ನೀಡಿದ ಕತಾರ್ ನ ಉದ್ಯಮಿ ರವಿ ಶೆಟ್ಟಿ ಮೂಡಂಬೈಲುರವರಿಗೆ ಕೃತಜ್ಞತೆ ಸಲ್ಲಿಸಿದರು.
ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷೆ ಗೀತಾ ಮೋಹನ್ ರೈಯವರು ಶುಭ ಹಾರೈಸಿದರು. ವೇದಿಕೆಯಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ, ತಾಲೂಕು ಮಹಿಳಾ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಕುಸುಮಾ ಪಿ.ಶೆಟ್ಟಿ ಕೆರೆಕೋಡಿ, ಕೋಶಾಧಿಕಾರಿ ಅರುಣಾ ಡಿ.ರೈರವರು ಉಪಸ್ಥಿತರಿದ್ದರು.
ಯುವ ಬಂಟರ ಸಂಘದ ಕೋಶಾಧಿಕಾರಿ ಶಿವಶ್ರೀ ರಂಜನ್ ರೈ ದೇರ್ಲ ವಂದಿಸಿದರು. ಶುಭ ರೈ ಪ್ರಾರ್ಥನೆಗೈದು, ಕಾರ್ಯಕ್ರಮ ನಿರೂಪಿಸಿದರು. ಯುವ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಂಜಿನಿ ಶೆಟ್ಟಿ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಕಾರ್ತಿಕ್ ರೈ, ವಿಜಯಲಕ್ಷ್ಮಿರವರು ಅತಿಥಿಗಳನ್ನು ಗೌರವಿಸಿದರು.