ರಾರಾಜಿಸಿದ ತಿರಂಗ ಬ್ರಹ್ಮಾವರ: ಆ. ೧೫ ಇಲ್ಲಿನ ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಜಿ ಎಮ್ ಗ್ಲೋಬಲ್ ಸ್ಕೂಲ್ ಜೊತೆಯಾಗಿ ೭೮ನೇ ಸ್ವಾತಂತ್ರೊತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿದವು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾರತೀಯ ಸೇನೆಯ ಮಾಜಿ ಸೈನಿಕ ಸುರೇಶ್ ಸಿ ರಾವ್ ಆಗಮಿಸಿದ್ದರು.
ಅವರು ಮಾತನಾಡಿ ಅನೇಕ ಮಹಾನಾಯಕರ ಸತ್ಯಾಗ್ರಹ , ಚಳುವಳಿ, ಹೋರಾಟದ ಫಲವಾಗಿ ನಾವು ಇಂದು ಸ್ವಾತಂತ್ರ್ಯ ವನ್ನು ಪಡೆದಿದ್ದೇವೆ. ಅವರ ತ್ಯಾಗ ಪರಿಶ್ರಮವನ್ನು ಸ್ಮರಿಸಬೇಕು. ನಾವು ಸಂವಿಧಾನದ ಅಡಿಯಲ್ಲಿ ಪಡೆದ ಹಕ್ಕುಗಳು, ಸ್ವತಂತ್ರ ಜೀವನ ಬೇರೆಯವರ ಸ್ವಾತಂತ್ರೊತ್ಸವದಕ್ಕೆ ಧಕ್ಕೆ ತರಬಾರದು. ಎಲ್ಲರೂ ಸಾಮರಸ್ಯದಿಂದ ಬದುಕಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಧ್ವಜಾರೋಹಣವನ್ನು ನೆರವೇರಿಸಿ ಎಲ್ಲರಿಗೂ ಶುಭಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಉತ್ತಮ ಶಿಕ್ಷಣ, ಸಂಸ್ಕಾರದಿಂದ ಸದೃಢವಾದ ದೇಶವನ್ನು ಕಟ್ಟಲು ಸಾಧ್ಯ. ಇಂದಿನ ಯುವ ಸಮುದಾಯ ಸಾಧಕರಿಂದ ಸ್ಫೂರ್ತಿಯನ್ನು ಪಡೆದು ಉತ್ತಮ ದೇಶವನ್ನು ಕಟ್ಟಲು ಪ್ರಯತ್ನಿಸಬೇಕೆಂದರು.
ಸಾವಿರಾರು ವಿದ್ಯಾರ್ಥಿಗಳ ಕರದಲ್ಲಿ ರಾರಾಜಿಸಿದ ತಿರಂಗ ರಾಷ್ಟ್ರಪ್ರೇಮದ ಪುಳಕಕ್ಕೆ ಸಾಕ್ಷಿಯಾಯಿತು. ಸಂಸ್ಥೆಯ ಸ್ಕೌಟ್ ಮತ್ತು ಗೈಡ್, ಗುಣ, ಮೇಧ, ವಿದ್ಯಾ, ಪ್ರಜ್ಞಾ, ಶ್ರದ್ಧಾ ಹಾಗೂ ಗ್ಲೋಬಲ್ ಸ್ಕೂಲ್ನ ವಿದ್ಯಾರ್ಥಿಗಳ ಪಥ ಸಂಚಲನ ಅತ್ಯಾಕರ್ಷಕವಾಗಿತ್ತು. ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಏಕತೆ, ದೇಶಭಕ್ತಿಯ ಕಂಪನ್ನು ಪಸರಿಸಿತು. ಕಾರ್ಯಕ್ರಮದಲ್ಲಿ ಜಿ ಎಮ್ ಗ್ಲೋಬಲ್ ಸ್ಕೂಲ್ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ, ಶ್ರೀಮಾ ಪ್ರಣವ್ ಶೆಟ್ಟಿ, ನಾಗರಾಜ ಸೋಮಯಾಜಿ, ದೀಪ್ತಿ ಶೆಟ್ಟಿ, ಪೋಷಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.