ಮುಂಬಯಿಯ ಹೆಸರಾಂತ ನ್ಯಾಯವಾದಿ, ಬೋಂಬೆ ಬಂಟ್ಸ್ ಎಸೋಸಿಯೇಷನ್ನಿನ ಮಾಜಿ ಅಧ್ಯಕ್ಷ ಸುಭಾಷ್ ಬಾಲಕೃಷ್ಣ ಶೆಟ್ಟಿ (70) ಅವರು ಆಗಸ್ಟ್ 9ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ಮನೆಯ ಪಕ್ಕದಲ್ಲಿ ಶಿರ್ಡಿ ಸಾಯಿಬಾಬಾರ ಮಂದಿರವೊಂದನ್ನು ಕಟ್ಟಿಸಿ ಪರಿಸರದ ಭಕ್ತಾದಿಗಳನ್ನು ಒಗ್ಗೂಡಿಸಿ ಉತ್ಸವವನ್ನು ಆಚರಿಸುತ್ತಾ ಧಾರ್ಮಿಕ ಪ್ರಜ್ಞೆಯನ್ನು ಮೆರೆದಿದ್ದರು.
ಬೋಂಬೆ ಬಂಟ್ಸ್ ಎಸೋಸಿಯೇಶನ್ ನಲ್ಲಿ ಹಲವಾರು ವರ್ಷಗಳಿಂದ ಪದಾಧಿಕಾರಿಯಾಗಿದ್ದು, ಅಧ್ಯಕ್ಷರಾಗಿದ್ದು, ಸಾಮಾಜಿಕ ಚಿಂತಕರಾಗಿದ್ದರು. ನ್ಯಾಯವಾದಿಯಾಗಿ ತನ್ನಲ್ಲಿ ಬಂದವರಿಗೆ ನ್ಯಾಯ ಒದಗಿಸಿ ಕೊಡುತ್ತಿದ್ದರು. ಅವರು ಯಕ್ಷಗಾನದ ವೇಷಧಾರಿಯಾಗಿ, ಅರ್ಥದಾರಿಯಾಗಿದ್ದರು. ಅಡ್ವಕೇಟ್ ಸುಭಾಷ್ ಶೆಟ್ಟಿಯವರು ಬಂಟ್ಸ್ ಲಾ ಫೋರಮ್ ನ ಸಲಹೆಗಾರರಾಗಿದ್ದರು.
ಮೃತರು ಪತ್ನಿ ಉಳೆಪಾಡಿ ಮಂಜಲಗುತ್ತು ಭಾರತಿ ಶೆಟ್ಟಿ, ಪುತ್ರ ಶಶಾಂಕ್ ಶೆಟ್ಟಿ, ಪುತ್ರಿ ಶ್ರೇಯಾ ಶೆಟ್ಟಿ, ಅಳಿಯ, ಸೊಸೆ, ಮೊಮ್ಮಕ್ಕಳು, ಕುಟುಂಬಿಕರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಬೋಂಬೆ ಬಂಟ್ಸ್ ಎಸೋಸಿಯೇಷನ್ ನ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಮಾಜಿ ಅಧ್ಯಕ್ಷರುಗಳು ಮತ್ತು ಸರ್ವ ಪದಾಧಿಕಾರಿಗಳು, ಸದಸ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.